ಬೆಳಗಾವಿ: ಭೀಕರ ಪ್ರವಾಹದಿಂದ ತತ್ತರಿಸಿರುವ ಕರ್ನಾಟಕದ ಪರಿಸ್ಥಿತಿಯ ಬಗ್ಗೆ ತಿಳಿಯಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಳಗಾವಿಗೆ ಆಗಮಿಸಿದ್ದು, ಜಿಲ್ಲೆಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಅಮಿತ್ ಶಾರಿಗೆ ಹೂಗುಚ್ಚ ನೀಡಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಸ್ವಾಗತಿಸಿದರು.
ಈ ವೇಳೆ ಸಿಎಂಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸುರೇಶ ಅಂಗಡಿ, ಉಮೇಶ್ ಕತ್ತಿ, ಮಹಾಂತೇಶ್ ಕವಟಗಿಮಠ, ಡಾ.ವಿಶ್ವನಾಥ್ ಪಾಟೀಲ್ ಅವರು ಸಾಥ್ ನೀಡಿದರು. ಹಾಗೆಯೇ ಜಿಲ್ಲಾಡಳಿತ ವತಿಯಿಂದ ಅಮೀತ್ ಶಾರನ್ನು ಹೂಗುಚ್ಚ ನೀಡಿ ಡಿಸಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಅವರು ಸ್ವಾಗತಿಸಿದರು. ಪ್ರವಾಹದ ಬಗ್ಗೆ ಮಾಹಿತಿ ಪಡೆಯಲು ಅಮಿತ್ ಶಾ ಹಾಗೂ ಸಿಎಂ ಜಂಟಿಯಾಗಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ ಎನ್ನಲಾಗಿದೆ.
ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆಯಲ್ಲಿ ನಾಯಕರು ವೈಮಾನಿಕ ಸಮೀಕ್ಷೆ ನಡೆಸಿ, ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ, ಬಳಿಕ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳ ಜೊತೆ ಶಾ ಸಭೆ ನಡೆಸಲಿದ್ದಾರೆ. ನೆರೆ ಪರಿಸ್ಥಿತಿ ಹಾನಿ, ಪ್ರವಾಹದಲ್ಲಿ ಜನರ ರಕ್ಷಣೆ ಬಗ್ಗೆ ಅಮಿತ್ ಶಾ ಅವರು ಮಾಹಿತಿಯನ್ನು ಪಡೆಯಲಿದ್ದಾರೆ