ಆಳಂದ: ಮಾಜಿ ಸಚಿವ ಹಾಗೂ ನೂತನವಾಗಿ ಅಸ್ತಿತ್ವಕ್ಕೆ ತರಲಾದ ಕೆಆರ್‍ಪಿ ಪಕ್ಷದ ಸಂಸ್ಥಾಕ ಅಧ್ಯಕ್ಷ ಗಾಲಿ ಜರ್ನಾದನ ರೆಡ್ಡಿ ಅವರನ್ನು ಗಂಗಾವತಿಯಲ್ಲಿ ಇಲ್ಲಿನ ಬಂಜಾರಾ ಕ್ರಾಂತಿದಳ ರಾಜ್ಯಾಧ್ಯಕ್ಷ ರಾಜು ಚವ್ಹಾಣ ನೇತೃತ್ವದ ರಾಜಕೀಯ ಮುಖಂಡರ ನಿಯೋಗವು ಭೇಟಿ ಮಾಡಿದೆ.
ರಾಜಕೀಯವಾಗಿ ಗುರುತಿಸಿಕೊಂಡಿದ್ದ ರಾಜು ಚವ್ಹಾಣ ಬಂಜಾರ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಲು ರಾಜ್ಯಮಟ್ಟದಲ್ಲಿ ಹಲವು ಹೋರಾಟ ರೂಪಿಸುತ್ತಾ ತಮ್ಮ ಬೆಂಬಲಿಗರ ಯುವ ಪಡೆಯನ್ನೇ ಕಟ್ಟಿಕೊಂಡಿದ್ದು, ಹೀಗಾಗಿ ರಾಜು ಚವ್ಹಾಣ ಅವರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೆಆರ್‍ಪಿ ಪಕ್ಷದಿಂದ ಕಣಕ್ಕಿಳಿಯುವ ನಿಟ್ಟಿನಲ್ಲಿ ಪಿಆರ್‍ಪಿ ಪಕ್ಷದ ನಾಯಕ ಗಾಲಿ ಜನಾರ್ದನ ರೆಡ್ಡಿ ಅವರನ್ನು ಭೇಟಿ ಮಾಡಿದ್ದು ಸ್ಥಳೀಯ ರಾಜಕೀಯ ವಲಯದಲ್ಲಿ ಸಂಚನ ಮೂಡಿಸಿದೆ.
ಲಂಬಾಣಿ ಸೇರಿ ಹಲವು ಹಿಂದುಳಿದ ಸಮುದಾಯದ ಅಭಿವೃದ್ದಿ ಹಿನ್ನೆಲೆಯಲ್ಲಿ ಕೆಆರ್‍ಪಿ ವರಿಷ್ಠನಾಯಕ ಜನಾರ್ದನ ರೆಡ್ಡಿ ಅವರನ್ನು ಭೇಟಿ ಮಾಡಿ, ಚುನಾವಣೆಯಲ್ಲಿ ಆಳಂದ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕಿಳಿಸುವಂತೆ ಚವ್ಹಾಣ ಅವರು ರೆಡ್ಡಿ ಅವರ ಮುಂದೆ ತಮ್ಮ ಇಂಗಿತ ವ್ಯಕ್ತಪಡಿಸಿದ್ದು, ಅಲ್ಲದೆ, ಬಿಜೆಪಿ ಕಾಂಗ್ರೆಸ್ ಇನ್ನಿತರ ಪಕ್ಷಗಳ ಕಾರ್ಯಕರ್ತರು ಮತ್ತು ಮುಖಂಡರನ್ನು ಕೆಆರ್‍ಪಿ ಪಕ್ಷಕ್ಕೆ ಕರೆತಂದು ಪಕ್ಷವನ್ನು ಬಲಿಷ್ಠಗೊಳಿಸುವ ಭರವಸೆ ನೀಡಿದ್ದಾರೆ.
ನಿಯೋಗದ ಸನ್ಮಾನ ಸ್ವೀಕರಿಸಿದ ಗಾಲಿ ಜನಾರ್ದನ ರೆಡ್ಡಿ ಅವರು, ನಾನು ಆಳಂದ ಕ್ಷೇತ್ರಕ್ಕೆ ಪ್ರವಾಸ ಕೈಗೊಳ್ಳುತ್ತೇನೆ. ಅಲ್ಲದೆ, ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಮತ್ತು ಪ್ರಚಾರ ಕೈಗೊಳ್ಳಿ ಎಂದು ನಿಮ್ಮೊಂದಿಗೆ ನಾನಿದ್ದೇನೆ ಎಂದು ಹೇಳಿದ್ದಾರೆ.
ನಿಯೋಗದಲ್ಲಿ ಜೆಡಿಎಸ್‍ನ ಚಂದ್ರಕಾಂತ ಗದ್ದೆ, ಕಾಂಗ್ರೆಸ್‍ನ ಶರಣಬಸಪ್ಪ ಝಳಕಿ, ಬಿಜೆಪಿ ಶಿವುಕುಮಾರ ನಿಂಬಾಳ, ದತ್ತು ರಾಠೋಡ, ಬಂಜಾರಾ ಕ್ರಾಂತಿದಳ ತಾಲೂಕು ಅಧ್ಯಕ್ಷ ವೆಂಕಟೇಶ ರಾಠೋಡ ಸೇರಿದಂತೆ ಮತ್ತಿತರು ಒಳಗೊಂಡಿದ್ದರು.