ಚಿತ್ತಾಪುರ: ಈಡಿಗ ಬಿಲ್ಲವ ಸಮುದಾಯದ ಸರ್ವತೋಮುಖ ಅಭಿವೃದ್ದಿಗಾಗಿ ಸಮಗ್ರ ಅಭಿವೃದ್ದಿಗಾಗಿ ಶ್ರೀ ನಾರಾಯಣ ಗುರು ಅಭಿವೃದ್ದಿ ನಿಗಮ ಸ್ಥಾಪಿಸಿ ಆದೇಶ ಹೊರಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇದಕ್ಕಾಗಿ ಪ್ರಮುಖ ಪಾತ್ರ ವಹಿಸಿದ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಶ್ರೀ ಡಾ.ಪ್ರಣಾವನಂದ ಮಹಾಸ್ವಾಮಿಗಳ ಅವರಿಗೆ ತಾಲೂಕು ಆರ್ಯ ಈಡಿಗ ಸಮಾಜದ ತಾಲೂಕು ಅಧ್ಯಕ್ಷ ನಾಗಯ್ಯ ಗುತ್ತೇದಾರ ಕರದಾಳ, ಪ್ರಧಾನ ಕಾರ್ಯದರ್ಶಿ ಕಾಶಿನಾಥ ಗುತ್ತೇದಾರ ಅವರು ಅಭಿನಂದನೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.
ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಶ್ರೀ ಡಾ.ಪ್ರಣಾವನಂದ ಮಹಾಸ್ವಾಮಿಗಳು ಈಡಿಗ ಸಮಾಜದ ಅಭಿವೃದ್ದಿಗಾಗಿ ಶ್ರೀ ನಾರಾಯಣ ಗುರು ಅಭಿವೃದ್ದಿ ನಿಗಮ ಸ್ಥಾಪನೆ ಹಾಗೂ ಕಲುವೃತ್ತಿ ಶೇಂದಿ ಪುನರಾರಂಭ ಮಾಡುವುದು ಸೇರಿದಂತೆ 13 ಬೇಡಿಕೆಗಳ ಈಡೇರಿಕೆಗಾಗಿ ಈ ಹಿಂದೆ ಚಿಂಚೋಳಿ ಕಲಬುರಗಿ 158 ಕಿ.ಮೀ ಪಾದಯಾತ್ರೆ, ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಉಪವಾಸ ಸತ್ಯಾಗ್ರಹ ಹಾಗೂ ಇಚೇಗೆ ಮಂಗಳೂರು ಕುದ್ರೋಳಿ ದೇವಸ್ಥಾನದಿಂದ ಬೆಂಗಳೂರು ಫ್ರೀಡಂ ಪಾರ್ಕ್ ವರೆಗೆ 658 ಕಿ.ಮೀ ಐತಿಹಾಸಿಕ ಪಾದಯಾತ್ರೆ ಕೈಗೊಂಡು ಫೆ.14 ರಂದು ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡು ಸರಕಾರದ ಗಮನ ಸೆಳೆದಿದ್ದರು ಇದರಿಂದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಫೆ.20 ರಂದು ಶ್ರೀ ನಾರಾಯಣ ಗುರು ಅಭಿವೃದ್ದಿ ನಿಗಮ ಸ್ಥಾಪಿಸಿ ಆದೇಶಿಸಿದ್ದಾರೆ. ಕೊನೆಗೂ ಸ್ವಾಮಿಜಿ ಹೋರಾಟಕ್ಕೆ ಗೆಲುವು ಲಭಿಸಿದೆ ಹೀಗಾಗಿ ನಿಗಮ ಸ್ಥಾಪನೆಯ ಆದೇಶ ಹೊರಬಿಳುವಲ್ಲಿ ಡಾ.ಪ್ರಣಾವನಂದ ಮಹಾಸ್ವಾಮಿಗಳ ಶ್ರಮ ಯಾರೂ ಮರೆಯುವಂತಿಲ್ಲ, ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ನಿಗಮ ಮಾಡುವುದು ನನ್ನ ಜವಾಬ್ದಾರಿ ಬಿಟ್ಟುಬಿಡಿ ಎಂದು ಹೇಳಿದ ಪ್ರಕಾರ ಮುಖ್ಯಮಂತ್ರಿ ಮೇಲೆ ಒತ್ತಡ ಹೇರಿ ನಿಗಮ ಸ್ಥಾಪನೆ ಮಾಡಿಸುವ ಮೂಲಕ ಕೊಟ್ಟ ಭರವಸೆಯಂತೆ ಮಾಡಿ ತೋರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಈಡಿಗರ ಬಹುದಿನಗಳ ಬೇಡಿಕೆ ಈಗ ಈಡೇರಿದಂತಾಗಿದೆ. ಸರಕಾರ ನಿಗಮವೇನೋ ಸ್ಥಾಪನೆ ಮಾಡಿದೆ ಇದಕ್ಕೆ 500 ಕೋಟಿ ಅನುದಾನ ನೀಡಿ ನಿಗಮಕ್ಕೆ ಅಧಿಕಾರ ನೀಡಿದಾಗ ಮಾತ್ರ ಈಡಿಗ, ಬಿಲ್ಲವ ಸೇರಿದಂತೆ 26 ಒಳಪಂಗಡಗಳ ಸಮಗ್ರ ಅಭಿವೃದ್ದಿಯಾಗಲಿದೆ ಈ ನಿಟ್ಟಿನಲ್ಲಿ ಸರಕಾರ ಕೂಡಲೇ ನಿಗಮಕ್ಕೆ ಅನುದಾನ ನೀಡುವ ಮೂಲಕ ಜೊತೆಗೆ ಸ್ವತಂತ್ರ ಅಧಿಕಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
“ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಶ್ರೀ ಡಾ.ಪ್ರಣಾವನಂದ ಮಹಾಸ್ವಾಮಿಗಳ ಅವಿರತ ಹೋರಾಟ, ಪಾದಯಾತ್ರೆ ಹಾಗೂ ಉಪವಾಸ ಸತ್ಯಾಗ್ರಹದ ಪರಿಣಾಮ ಕೊನೆಗೂ ಸರಕಾರ ಶ್ರೀ ನಾರಾಯಣ ಗುರು ಅಭಿವೃದ್ದಿ ನಿಗಮ ಸ್ಥಾಪಿಸಿ ಆದೇಶ ಹೊರಡಿಸಿದೆ ಇದು ಗುರುಗಳ ಹೋರಾಟಕ್ಕೆ ಸಂದ ಜಯವಾಗಿದೆ”.-ಕಾಶಿನಾಥ ಗುತ್ತೇದಾರ ಪ್ರಧಾನ ಕಾರ್ಯದರ್ಶಿ ಈಡಿಗ ಸಮಾಜ ಚಿತ್ತಾಪುರ.