ಕಲಬುರಗಿ; ಮಹ್ಮದ ಹಸನಖಾನ್ ಸ್ಮಾರಕ ಭವನದಲ್ಲಿ ಕೆಂಪು ಪುಸ್ತಕ ದಿನವನ್ನು ಓದು ಅಭಿಯಾನದ ಮೂಲಕ ಉದ್ಘಾಟನೆ ಮಾಡಲಾಯಿತು. ಕಮ್ಯುನಿಸ್ಟ್ ಪ್ರಣಾಳಿಕೆಯ ಪ್ರಮುಖ ಭಾಗವನ್ನು ಓದುವ ಮೂಲಕ ಡಾ.ಪ್ರಭು ಖಾನಾಪುರೆಯವರು ಉದ್ಘಾಟನೆ ಮಾಡಿದರು.
‘ಮಾನವರ ಇತಿಹಾಸವು ವರ್ಗ ಸಂಘರ್ಷದ ಇತಿಹಾಸವಾಗಿದೆ. ಖಾಸಗಿ ಆಸ್ತಿಯೊಂದಿಗೆ ಸಮಾಜದ ಮೇಲೆ ಹಿಡಿತ ಹೊಂದಿದ ವರ್ಗವು ಶ್ರಮಿಕರ ಶ್ರಮವನ್ನು ಬಿಟ್ಟಿಯಾಗಿ ಲೂಟಿಗೈದು ಲಾಭದ ಪ್ರಮಾಣವನ್ನು ಹಿಗ್ಗಿಸಿಕೊಳ್ಳುತ ಬಂದಿದೆ. ಈ ಸತ್ಯವನ್ನು ವಾಸ್ತವದ ಚಿತ್ರಣವನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ಬದಲಾವಣೆಯ ಸಾಧ್ಯತೆಗಳನ್ನು ಜಗತ್ತಿನ ಮುಂದೆ ಇಟ್ಟಿದ್ದು ಮಹಾನ್ ತತ್ವಜ್ಞಾನಿಗಳಾದ ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಎಂಗೆಲ್ಸ್. ನೂರ ಎಪ್ಪತ್ತೈದು ವರ್ಷಗಳ ನಂತರವೂ ಸಮಾನತೆಯ ನಾಡಿಗಾಗಿ ಒದಗಿ ಬರುವ ಏಕೈಕ ತತ್ವವಾಗಿ ಕಮ್ಯುನಿಜಂ ನಮ್ಮ ಮುಂದೆ ಇದೆ’ ಎಂದು ಹೇಳಿದರು.
ಬಂಡವಾಳಕ್ಕೆ ಲಾಭವೇ ಗುರಿಯಾಗಿದೆ. ತನ್ನ ಲಾಭಕ್ಕಾಗಿ ಅದು ಸಮಾಜವನ್ನು ಅತ್ಯಂತ ದಯನೀಯ ಸ್ಥಿತಿಗೆ ತಳ್ಳುವ ಕ್ರೌರ್ಯದ ಗುಣವಿದೆ. ಶ್ರಮಿಕರ ಶ್ರಮವನ್ನು ಅಗ್ಗದ ಬೆಲೆಯಲ್ಲಿ ದೊರಕಿಸಿಕೊಳ್ಳಲು ತೀವ್ರತರವಾದ ನಿರುದ್ಯೋಗ, ಬಡತನ ಮತ್ತು ಆರ್ಥಿಕ ಬಿಕ್ಕಟ್ಟು ಸೃಷ್ಟಿಸುತ್ತದೆ. ಮಾನವರ ಉಗಮ ವಿಕಾಸ, ಚಾರಿತ್ರಿಕ ಭೌತವಾದ, ದ್ವಂದ್ವಮಾನ ಭೌತವಾದ, ರಾಜಕೀಯ ಅರ್ಥಶಾಸ್ತ್ರ ಮುಂತಾದ ಸಮಗ್ರ ವಿಷಯಗಳನ್ನು ವೈಜ್ಞಾನಿಕ ವಾಸ್ತವಿಕ ನೆಲೆಯಲ್ಲಿ ತಾತ್ವಿಕ ಸಿದ್ಧಾಂತ ಕಟ್ಟಿಕೊಟ್ಟ ಮಾರ್ಕ್ಸ್ ಮತ್ತು ಎಂಗೆಲ್ಸ್ ಅವರ ಶ್ರಮವು ಸಮತೆಯ ನಾಡಿನ ಉದಯದ ಬೀಜಗಳು. ಭಾವನಾವಾದದ ಮೂಲಕ ಜನತೆಯನ್ನು ಮೌಢ್ಯಕ್ಕೆ ದೂಡುವ ಆಳುವ ವರ್ಗದ ಹುನ್ನಾರವನ್ನು ಬಯಲುಗೊಳಿಸಿ ವೈಜ್ಞಾನಿಕ ಬೌತವಾದದ ಬೆಳಕು ತೋರಿದ ಪ್ರಣಾಳಿಕೆ ಇದಾಗಿದೆ ಅಭಿಪ್ರಾಯ ವ್ಯಕ್ತಪಡಿಸಿದರು.
ಜಗದ ಶ್ರಮಿಕರೆಲ್ಲ ಸಂಘಟಿತರಾಗಿ ಹೋರಾಟ ಮಾಡಿದಲ್ಲಿ ಕಳೆದುಕೊಳ್ಳುವುದು ಕಾಲಿಗೆ ಬಿಗಿದ ಬೇಡಿಗಳನ್ನು. ಆದರೆ ಗೆಲ್ಲಲು ನಮ್ಮ ಮುಂದೆ ಜಗತ್ತೇ ಇದೆ ಎಂದು ತೋರಿಸಿ ಕೊಟ್ಟರು. ಆದ್ದರಿಂದ ಜಗದ್ವಿಖ್ಯಾತ ವಿಜ್ಞಾನಿಗಳು, ಸಾಹಿತಿಗಳು, ಕಲಾವಿದರು, ತತ್ವಶಾಸ್ತ್ರಜ್ಞರು ಕಮ್ಯುನಿಸ್ಟರಾಗಿದ್ದಾರೆ. ಏಕೆಂದರೆ ಕಮ್ಯುನಿಜಂ ವಿಜ್ಞಾನವಾಗಿದೆ. ಆಯಾ ದೇಶ ಕಾಲದ ಪರಿಸ್ಥಿತಿಯನ್ನು ಅದ್ಯಯನ ಮಾಡಿ ಕಮ್ಯುನಿಜಂ ಅನ್ವಯಿಸುವ ಎಲ್ಲ ಸಾಧ್ಯತೆಗಳನ್ನು ಈ ಪ್ರಣಾಳಿಕೆ ಒಳಗೊಂಡಿದೆ. ಆದ್ದರಿಂದಲೇ ಕಾರ್ಪೋರೆಟ್ ಕಾಲದಲ್ಲೂ ಕಮ್ಯುನಿಸ್ಟ್ ಪ್ರಣಾಳಿಕೆ ಪ್ರಸ್ತುತವಾಗಿದೆ. ಹೀಗಾಗಿ ಜಗತ್ತಿನಲ್ಲಿ ಅತಿ ಹೆಚ್ಚು ಮಾರಾಟವಾಗುವ ಪುಸ್ತಕ ಕಮ್ಯುನಿಸ್ಟ್ ಪ್ರಣಾಳಿಕೆಯಾಗಿದೆ ಎಂದು ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಅವರು ಕಮ್ಯುನಿಜಂ ಪ್ರಣಾಳಿಕೆ ಕುರಿತು ಪರಿಚಯಾತ್ಮಕ ಮಾತನಾಡಿ ಹೇಳಿದರು.
ಭಾರತವು ಅತ್ಯಂತ ಅಸಮಾನತೆಯಿಂದ ಕೂಡಿದ ನಾಡಾಗಿದೆ. ಕಮ್ಯುನಿಸ್ಟ್ ಪ್ರಣಾಳಿಕೆಯನ್ನು ಅರಿತುಕೊಳ್ಳುವ ಮೂಲಕ ಚಿಂತನೆ ಚಳುವಳಿಯು ಜೊತೆಜೊತೆಗೆ ಹೋಗುತ್ತ ಸಮಗ್ರ ಚಳುವಳಿ ಗಟ್ಟಿಗೊಳಿಸಬೇಕಿದೆ ಎಂದು ಅಧ್ಯಯನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೀಮಂತ ಬಿರಾದಾರ ಹೇಳಿದರು.
ಕಾ.ಪಾಂಡುರಂಗ ಮಾವಿನಕರ ಸ್ವಾಗತಿಸಿ ನಿರ್ವಹಣೆ ಮಾಡಿದರು. ಕಾ.ಶರಣಬಸವ ಮಮಶೆಟ್ಟ, ಸುಧಾಮ ಧನ್ನಿ ವೇದಿಕೆ ಮೇಲಿದ್ದರು.