ಕಲ್ಯಾಣ ಕರ್ನಾಟಕ ಉತ್ಸವ; ರಂಗಭೂಮಿಯ ಹೊಸ ಸಾಧ್ಯತೆಗಳ ಬಗ್ಗೆ ಅಧ್ಯಯನ ಅಗತ್ಯ

0
9

ಕಲಬುರಗಿ; ರಂಗಭೂಮಿ ಕುರಿತಾದ ಸ್ಥಾಪಿತ ವಿಚಾರಗಳ ಹೊರತಾಗಿ ರಂಗಭೂಮಿಯ ಹಲವು ಸಾಧ್ಯತೆಗಳಿದ್ದು, ಆ ಹಿನ್ನೆಲೆಯಲ್ಲಿ ಜಾನಪದ ರಂಗಭೂಮಿಯ ಅಧ್ಯಯನ ಮಾಡುವ ಮತ್ತು ಮುರಿದು ಕಟ್ಟುವ ಕೆಲಸ ಆಗಬೇಕಿದೆ ಎಂದು ಡಾ. ಅರುಣ ಜೋಳದ ಕೂಡ್ಲಗಿ ತಿಳಿಸಿದರು.

ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಶನಿವಾರ ಗುಲಬರ್ಗಾ ವಿ.ವಿ.ಯ ಕಾರ್ಯಸೌಧದಲ್ಲಿ ನಡೆದ ರಂಗಭೂಮಿ ದರ್ಶನ ಗೋಷ್ಠಿಯಲ್ಲಿ ಜನಪದ ರಂಗಭೂಮಿ ವಿಷಯ ಕುರಿತು ತಮ್ಮ ಪ್ರಬಂಧ ಮಂಡಿಸಿದ ಅವರು, ಜಾನಪದ ಅನ್ನುವುದು ಒಂದು ಮಾಧ್ಯಮ. ಜನರು ತಮ್ಮ ತಿಳಿವಳಿಕೆಯನ್ನು ಅಭಿವ್ಯಕ್ತಿಗೊಳಿಸುತ್ತ ಬಂದಿದ್ದಾರೆ ಎಂದು ಹೇಳಿದರು.

Contact Your\'s Advertisement; 9902492681

ಪುರಾಣದ ಎಳೆಗಳು ಜನಪದದಲ್ಲಿ ಸೇರಿಕೊಂಡಿವೆ.‌ ಜನಪದ ಸೃಜನಶೀಲತೆಯನ್ನು ಅಮೂರ್ತಗೊಳಿಸಿ ಸಾಮೂಹಿಕ ರಚನೆ ಎಂದು ನಂಬಿಸಿ ಅವರ ಹೆಸರು ಹೇಳದೆ ವ್ಯವಸ್ಥಿತವಾಗಿ ಮೋಸಗೊಳಿಸಲಾಗಿದೆ. 17ನೇ ಶತಮಾನದ ನಂತರ ಜನಪದ ಪರಂಪರೆಯಲ್ಲಿ ಬಂಡಾಯ ಹುಟ್ಟಿಕೊಂಡು ಈ ಲಾವಣಿ, ಈ ಹಾಡು ನನ್ನ ರಚನೆ ಎಂದು ಹೇಳಲು ಆರಂಭಿಸಿದರು. ಹಗಲು ವೇಷಗಾರರು, ಬೀದಿ ರಂಗಭೂಮಿ ಕುರಿತು ಈವರೆಗೆ ಹೆಚ್ಚು ಚರ್ಚೆ ನಡೆದಿಲ್ಲ. ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು ಎಂದು ವಿವರಿಸಿದರು.

ವೃತ್ತಿ ರಂಗಭೂಮಿ ಕುರಿತು ಮಲ್ಲಿಕಾರ್ಜುನ ಕಡಕೋಳ ಮಾತನಾಡಿ, 12ನೇ ಶತಮಾನದ ಬಹುರೂಪಿ ಚೌಡಯ್ಯ ವೃತ್ತಿ ರಂಗಭೂಮಿಯ ಮೊದಲ ಕಲಾವಿದ. ರಂಗಭೂಮಿ ಭಾರತದ ಸ್ವಾತಂತ್ರ್ಯಕ್ಕೆ ಬಹು ಮಹತ್ವದ ಕೊಡುಗೆ ನೀಡಿದೆ ಎಂದು ಹೇಳಿದರು.

ವೃತ್ತಿ ರಂಗಭೂಮಿಯು ಸ್ವಾತಂತ್ರ್ಯ ನಂತರವೂ ತನ್ನ ಸಾಂಸ್ಥಿಕತೆ ಮತ್ತು ಸಾಂಸ್ಕೃತಿಕ ಬದ್ಧತೆಯನ್ನು ಉಳಿಸಿಕೊಂಡಿತ್ತು. ಆದರೆ ಆನಂತರ ಸ್ಥಿತ್ಯಂತರ ಗತಿ ತಲುಪಿತು ಎಂದರು. ರಂಗಭೂಮಿಯ ನಟ-ನಟಿ, ಸಂಗೀತ ಹಾಗೂ ರಂಗ ಸಜ್ಜಿಕೆ ಈ ಮೂರು ಪರಂಪರೆಗಳಿಗೆ ಧಕ್ಕೆ ಬಂದಿತು ಎಂದು ವಿಷಾದ ವ್ಯಕ್ತಪಡಿಸಿದರು.

ಹವ್ಯಾಸಿ ರಂಗಭೂಮಿ ಕುರಿತು ಮಾತನಾಡಿದ ಡಾ. ಅಮೃತಾ ಕಟಕೆ, ಜನಪದ ರಂಗಭೂಮಿಯಲ್ಲೇ ಹವ್ಯಾಸಿ ರಂಗ ಭೂಮಿಯ ಲಕ್ಷಣ ಕಾಣಬಹುದು ಎಂದು ತಿಳಿಸಿದರು.

ಕಲಬುರಗಿ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಎಚ್.ಟಿ. ಪೋತೆ ಇದ್ದರು. ಅವಿನಾಶ ಬೋರಂಚಿ, ಡಾ. ಚಿದಾನಂದ ಚಿಕ್ಕಮಠ ನಿರೂಪಿಸಿದರು. ಡಾ. ಕಪಿಲ್ ಚಕ್ರವರ್ತಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here