ದಾಸೋಹ ಭಾವನೆಯಿಂದ ಸಾಮಾಜಿಕ ಸಮನ್ವಯತೆ ಸಾಧ್ಯ

0
19

ಕಲಬುರಗಿ: ಕೆಲಸವನ್ನು ಕಾಯಕಕ್ಕೆ, ದಾನವನ್ನು ದಾಸೋಹ ತತ್ವಕ್ಕೆ ಎತ್ತರಿಸಿದ ಕೀರ್ತಿ ಶರಣರಿಗೆ ಸಲ್ಲುತ್ತದೆ.‌ ಕಾಯಕ ಮಾಡುವುದು, ಪ್ರಸಾದ ಸೇವಿಸುವುದು, ಅರಿವು ಸಂಪಾದಿಸುವುದು, ಅನುಭಾವ ಪಡೆಯುವುದು ಇವೆಲ್ಲವೂಗಳ ಗುರಿ ದಾಸೋಹ ಭಾವನೆಯಾಗಿದೆ ಎಂದು ಪತ್ರಕರ್ತ- ಸಾಹಿತಿ ಡಾ. ಶಿವರಂಜನ ಸತ್ಯಂಪೇಟೆ ತಿಳಿಸಿದರು.

ಆಳಂದ ತಾಲ್ಲೂಕಿನ ಜಿಡಗಾ ಕ್ಷೇತ್ರದಲ್ಲಿ ಗುರುವಾರ ನಡೆದ 19ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಕೃಷಿ ಗ್ರಾಮೀಣ ಕರ ಕುಶಲತೆ- ಸುಭದ್ರ ದೇಶದ ಆಶಾಕಿರಣ ಎರಡನೇ ಗೋಷ್ಠಿಯಲ್ಲಿ ದಾಸೋಹ ಮತ್ತು ಸಮಾಜಿಕ ಸಮನ್ವಯತೆ ವಿಷಯ ಕುರಿತು ಮಾತನಾಡಿದ ಅವರು, ಒಂದು ಲೆಕ್ಕಾಚಾರದ ಪ್ರಕಾರ ಶೇ. 25 ರಷ್ಟು ಆಹಾರ ಪೋಲಾಗುತ್ತಿದೆ. ಆಹಾರ ಕೂಡ ಇಂದಿನ ಮಾರಾಟದ ಸರಕಾಗಿದೆ. ಜಗತ್ತಿನ 120 ದೇಶಗಳ ಹಸಿವಿನ ಸೂಚ್ಯಂಕದಲ್ಲಿ ಭಾರತ 107ನೇ ಸ್ಥಾನದಲದಲ್ಲಿರುವುದು ಆತಂಕದ ವಿಷಯ ಎಂದು ಹೇಳಿದರು.

Contact Your\'s Advertisement; 9902492681

ಕಾಯಕ ಮತ್ತು ಆರ್ಥಿಕ ಸ್ವಾವಲಂಬಿ ಜೀವನ ಕುರಿತು ಡಾ. ಟಿ.ಆರ್. ಗುರುಬಸಪ್ಪ ಮಾತನಾಡಿ, ಭೂಮಿಯ ಮೇಲಿರುವ ಅತ್ಯಂತ ಪರಾವಲಂಬಿ ಜೀವಿ ಮನುಷ್ಯ.‌ ಕಾಯಕದಿಂದ ವಿಮುಖರಾಗಿರುವ ಇಂದಿನ ವಿಷಮ ಪರಿಸ್ಥಿತಿಯಲ್ಲಿ ಆರ್ಥಿಕ ಸಂಕಷ್ಟ ಎದುರಾಗುತ್ತಿರುವುದು ಸಹಜ.‌ ಆದರೆ ಸ್ವಾವಲಂಬಿ ಬದುಕು ಬದುಕಬಹುದು ಎಂದು ತಿಳಿಸಿದರು.

ನಮ್ಮ ಶಾಲಾ, ಕಾಲೇಜುಗಳು ನಿರುದ್ಯೋಗಿಗಳನ್ನು ನಿರ್ಮಾಣ ಮಾಡುವ ಫ್ಯಾಕ್ಟರಿಗಳಾಗಿವೆ. ಹೀಗಾಗಿ ನಾವು ಮತ್ತೆ ಕರ ಕುಶಲತೆದೆಡೆಗೆ ಹೋಗಬೇಕಾಗಿದೆ. ಶರಣ ಸಾಹಿತ್ಯದ ಕಡೆ ಗಮನಹರಿಸುವುದು ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

ಗ್ರಾಮೀಣ ಕೃಷಿ ಕೌಶಲ್ಯ-ಅಭಿವೃದ್ದಿ ಮಾತನಾಡಿದ ಆದಿನಾಥ ಹೀರಾ, ಸಿರಿಧಾನ್ಯಗಳನ್ನು ಬಳಸಬೇಕು ಹಾಗೂ ನೀರು ಸಂಗ್ರಹ ಮಾಡಬೇಕು ಎಂದು ವಿವರಿಸಿದರು. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪುರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯಳಸಂಗಿಯ ಪರಮಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಪ್ರಭುಲಿಂಗ ನೀಲೂರೆ, ಮಲ್ಲಿಕಾರ್ಜುನ ಖಜೂರಿ ವೇದಿಕೆಯಲ್ಲಿದ್ದರು. ರವಿ ಎಲ್. ಹೂಗಾರ ನಿರೂಪಿಸಿದರು. ಸುರೇಶ ದೇಶಪಾಂಡೆ ಸ್ವಾಗತಿಸಿದರು. ಸಿದ್ಧಲಿಂಗಪ್ಪ ಬಾಗಲಕೋಟೆ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here