ಶ್ರಮಿಕ ಹೆಣ್ಣು ಮಕ್ಕಳು ಹೋರಾಟದ ಹಾದಿ ತುಳಿಯಲು ಸಂಕಲ್ಪ ದಿನ

0
3

ಸುರಪುರ: ಮಾರ್ಚ್ 8 ಅಂತಾರಾಷ್ಟ್ರೀಯ ಮಹಿಳಾ ದಿನ, ಶ್ರಮಿಕ ಹೆಣ್ಣು ಮಕ್ಕಳಿಗೆ ಹೋರಾಟದ ಹಾದಿ ತುಳಿಯಲು ಸಂಕಲ್ಪ ಮೂಡಿಸುವ ದಿನವಾಗಿದೆ ಎಂದು ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಅಧ್ಯಕ್ಷರಾದ
ಕೆ ಸೋಮಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಸುರಪುರ ನಗರದ ಗರುಡಾದ್ರಿ ಕಲಾ ಮಂದಿರ ಸಭಾಂಗಣದಲ್ಲಿ ಎ.ಐ.ಯು.ಟಿ.ಯು.ಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ(ರಿ)ದ ಸುರಪುರ ತಾಲೂಕ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಅವರು , 1908 ಮಾರ್ಚ್ 8 ರಂದು ಉತ್ತಮ ವೇತನ ಹಾಗೂ ಉತ್ತಮ ದುಡಿಯುವ ಪರಿಸ್ಥಿತಿಗೆ ಆಗ್ರಹಿಸಿ 20 ಸಾವಿರಕ್ಕೂ ಹೆಚ್ಚು ಹೆಣ್ಣು ಮಕ್ಕಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು.

Contact Your\'s Advertisement; 9902492681

ಇದಕ್ಕೂ ಮುಂಚೆ 1857 ಮಾರ್ಚ್ 08 ರಂದು ನ್ಯೂಯಾರ್ಕ್ ನಗರದ ಜವಳಿ ಕಾರ್ಖಾನೆಗಳ ಹೆಣ್ಣು ಮಕ್ಕಳು ಇದೆ ಕಾರಣಕ್ಕೆ ಪ್ರತಿಭಟಿಸಿದ್ದರು. ಅಂದಿನ ಸರ್ಕಾರ ಹೋರಾಟವನ್ನು ಹತ್ತಿಕ್ಕಲು ಪೊಲೀಸ್ ದೌರ್ಜನ್ಯ ಎಸಗಿದ ಇತಿಹಾಸದ ದಿನವಾಗಿದೆ. ಎರಡು ವರ್ಷಗಳ ಬಳಿಕ ಮಾರ್ಚ್ ತಿಂಗಳಿನಲ್ಲೇ ಈ ಮಹಿಳೆಯರು ತಮ್ಮ ಮೊಟ್ಟ ಮೊದಲ ಕಾರ್ಮಿಕ ಸಂಘಟನೆಯನ್ನು ಕಟ್ಟಿ 1909 ರಲ್ಲಿ ಜವಳಿ ಕಾರ್ಖಾನೆಯ ಮಹಿಳಾ ಕಾರ್ಮಿಕರು ಹೋರಾಟದ ಕಣಕ್ಕಿಳಿದರು.

ಈ ಹೋರಾಟವನ್ನು ಸ್ಮರಣೀಯವಾಗಿಸಲು ಮತ್ತು ಎಲ್ಲಾರೀತಿಯ ಶೋಷಣೆಯ ವಿರುದ್ಧ ಜಗತ್ತಿನ ಶ್ರಮಿಕ ಹೆಣ್ಣು ಮಕ್ಕಳಿಗೆ ಹೋರಾಟದ ಹಾದಿ ತುಳಿಯಲು ಸ್ಫೂರ್ತಿ ತುಂಬುವ ದಿನ ಎಂದು 1910 ರಲ್ಲಿ ಶ್ರಮಿಕ ಮಹಿಳೆಯರ ಎರಡನೇ ಸಮ್ಮೇಳನದಲ್ಲಿ ಸಮಾಜವಾದಿ ನಾಯಕಿ ಕ್ಲಾರಾ ಜೆಟ್ಕಿನ್ ಹಾಗೂ ರೋಜಾ ರುಕ್ಸಂ ಬರ್ಗ್ ಅವರು ಮಾರ್ಚ್ 08 ಅಂತಾರಾಷ್ಟ್ರೀಯ ಮಹಿಳಾ ದಿನ ಎಂದು ಆಚರಿಸಲು ಕರೆನೀಡಿದರು” ಎಂದು ಇತಿಹಾಸವನ್ನು ಮೆಲಕು ಹಾಕುತ್ತಾ, ಸ್ವಾತಂತ್ರ್ಯ ಸಮಾನತೆಗಳ ಹೊಸ ಕನಸು ಮೂಡಿಸಿ ದುಡಿಯಲು ಮಹಿಳೆಯರನ್ನು ಸ್ವಾತಂತ್ರ್ಯ ಗೊಳಿಸುವ ಪ್ರಜಾತಂತ್ರ ಚಳುವಳಿ ಹುಸಿಗೊಳಿಸಿ ಹಿಂದಿನ ಬಂಡವಾಳಶಾಹಿ ಸರ್ಕಾರಗಳು ಶತಮಾನಗಳ ಹಿಂದೆಯಿದ್ದ ಮಹಿಳೆಯರ ಮೇಲಿನ ಶೋಷಣೆ ಮುಂದುವರೆಸುವ ತಯಾರಿಯಲ್ಲಿದ್ದಾರೆ. ಕೇವಲ ವೇತನ ಕೂಲಿಗಾಗಿ ಮಹಿಳೆಯರನ್ನು ಪುಡಿಗಾಸಿಗೆ ದುಡಿಸಿಕೊಳ್ಳುತ್ತಿದ್ದಾರೆ. ಯಾವುದೇ ಚರ್ಚೆಗೆ ಆಸ್ಪದ ನೀಡದೆ ಕಾರ್ಖಾನೆಗಳಲ್ಲಿ 12 ತಾಸು ದಿನದ ದುಡಿತದ ಅವಧಿ ಎಂದು ಮಸೂದೆ ಅಂಗೀಕರಿಸಿದೆ.

ಮತ್ತೊಂದೆಡೆ ಕೋಟ್ಯಂತರ ದುಡಿಯುವ ಹೆಣ್ಣು ಮಕ್ಕಳು ಜೀವನ ಯೋಗ್ಯ ವೇತನವಿಲ್ಲದೆ ಪರಿತಪಿಸುತ್ತಿದ್ದಾರೆ. ಆಶಾ, ಅಂಗನವಾಡಿ, ಬಿಸಿಯೂಟ ಸೇರಿದಂತೆ ಮುಂತಾದ ಯೋಜನೆಗಳ ಕೆಲಸ ಮಾಡುತ್ತಿರುವ ಮಹಿಳೆಯರ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಅನೇಕ ಕುಟುಂಬಗಳಲ್ಲಿ ಒಂಟಿ ಹೆಣ್ಣು ಮಕ್ಕಳೇ ಇದ್ದು ದಿನಕ್ಕೆ ಎರಡು ಕೆಲಸ ಮಾಡಿಕೊಂಡು ಸಂಸಾರ ನಿರ್ವಹಿಸಬೇಕಾಗಿದೆ. ಒಂದೆಡೆ ಆರೋಗ್ಯ ಹದಗೆಟ್ಟರೆ ಹೊಟ್ಟೆಗೆ ತಣ್ಣೀರಿ ಬಟ್ಟೆಯೇ ಗತಿ ಎಂಬ ಪರಿಸ್ಥಿತಿ ಇದೆ. ದೇಶದಲ್ಲಿ ಅಪೌಷ್ಠಿಕತೆ ಕಾರಣದಿಂದ ಶೇ.66.4ರಷ್ಟು ಮಹಿಳೆಯರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಇನ್ನು ಅನೇಕ ಕುಟುಂಬಗಳಲ್ಲಿ ಇಬ್ಬರು ದುಡಿದರು ಮನೆ ಬಾಡಿಗೆ, ದಿನಸಿ ಸಾಮಗ್ರಿಗಳು, ಅಡಿಗೆ ಅನಿಲ ಹೊಂದಿಸಿ ಕುಟುಂಬದ ಹಸಿವನ್ನು ನೀಗಿಸಲು ಹಾಗೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಭವಿಷ್ಯ ರೂಪಿಸಲು ತಮ್ಮ ಜೀವನವೇ ಸವಿಸುವಂತಾಗಿದೆ.

ಆದ್ದರಿಂದ ಮಹಿಳೆಯರಿಗೆ ಜೀವನ ಯೋಗ್ಯ ವೇತನ, ಉತ್ತಮ ಸೇವಾ ವಾತಾವರಣಕ್ಕಾಗಿ ಹೋರಾಡಲು ಮಹಿಳಾ ದಿನದ ಇತಿಹಾಸದಿಂದ ಸ್ಫೂರ್ತಿ ಪಡೆದು ಹೆಣ್ಣು ಮಕ್ಕಳಿಗೆ ನ್ಯಾಯಬದ್ಧವಾಗಿ ಸಿಗಬೇಕಾದ ಹಕ್ಕುಗಳಿಗಾಗಿ ಹೋರಾಡುತ್ತಾ ಅಂತಿಮವಾಗಿ ಶೋಷಣಾರಹಿತ ಸಮಾಜ ನಿರ್ಮಾಣಕ್ಕೆ ಮುಂದಾಗುವಂತೆ ಕರೆ ನೀಡಿದರು.

ಸಂಘದ ಜಿಲ್ಲಾ ಮುಖಂಡ ರಾಮಲಿಂಗಪ್ಪ ಬಿ.ಎನ್ ಸಹ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕ ಅಧ್ಯಕ್ಷೆ ಪುಷ್ಪಲತಾ ವಹಿಸಿದ್ದರು. ಕಾರ್ಯದರ್ಶಿ ಅಶ್ವಿನಿ ನಿರೂಪಿಸಿದರು. ಗೌರವಾಧ್ಯಕ್ಷೆ ಶಾಂತವ್ವ ಸ್ವಾಗತಿಸಿದರು. ಲಕ್ಷ್ಮಿ ವಂದಿಸಿದರು. ಪ್ರೇಮಲತಾ ಹಾಗೂ ಸುಲೋಚನಾ ವೇದಿಕೆ ಮೇಲೆ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಹಲವು ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here