ಮತ ಎಣಿಕೆಗೆ ಸಿದ್ಧತೆ ಜಿಲ್ಲಾಧಿಕಾರಿಗಳಿಂದ ಕೌಟಿಂಗ್ ಕೇಂದ್ರಗಳ ವೀಕ್ಷಣೆ

0
118

ಕಲಬುರಗಿ: ಗುಲಬರ್ಗಾ (ಮೀಸಲು) ಲೋಕಸಭಾ ಕ್ಷೇತ್ರ ಹಾಗೂ ೪೨-ಚಿಂಚೋಳಿ (ಪ.ಜಾ. ಮೀಸಲು) ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆಗೆ ಸಂಬಂಧಿಸಿದಂತೆ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ವೆಂಕಟೇಶ್‌ಕುಮಾರ್ ಅವರು ಗುರುವಾರ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ತೆರಳಿ ಮತ ಎಣಿಕಾ ಕಾರ್ಯಗಳ ಪೂರ್ವ ಸಿದ್ಧತೆಗಳ ಪರಿಶೀಲನೆ ನಡೆಸಿದರು.

ಕೌಂಟಿಂಗ್ ಕೇಂದ್ರಗಳಲ್ಲಿ ಟೇಬಲ್ ವ್ಯವಸ್ಥೆ, ಮತ ಎಣಿಕಾ ಕೇಂದ್ರಗಳಿಗೆ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್, ಎನ್‌ಐಸಿ ಸಂಪರ್ಕ, ಸಿಸಿಟಿವಿ, ಬ್ಯಾರಿಕೇಡ್ ವ್ಯವಸ್ಥೆ, ಅಧಿಕಾರಿಗಳು, ಅಭ್ಯರ್ಥಿಗಳ ಹಾಗೂ ಕೌಟಿಂಗ್ ಏಜೆಂಟರು ಮತ ಎಣಿಕಾ ಕೇಂದ್ರಕ್ಕೆ ಒಳ ಪ್ರವೇಶಿಸುವ ಪ್ರತ್ಯೇಕ ಮಾರ್ಗ, ಸ್ಟ್ರಾಂಗ್ ರೂಂ ನಿಂದ ಮತ ಎಣಿಕಾ ಕೇಂದ್ರಕ್ಕೆ  ಮತಯಂತ್ರಗಳನ್ನು ತರುವ ವ್ಯವಸ್ಥೆಗಳ ಬಗ್ಗೆ ಕೌಟಿಂಗ್ ಕೇಂದ್ರಗಳ ನಿರ್ಮಾಣದ ಉಸ್ತುವಾರಿ ಕೈಗೊಂಡಿರುವ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಅಮೀನ್ ಮುಖ್ತಾರ್ ಅವರಿಂದ ಇಂಚಿಂಚೂ ಮಾಹಿತಿಯನ್ನು ಪಡೆದರು.

Contact Your\'s Advertisement; 9902492681

ಪರೀಕ್ಷಾ ವಿಭಾಗದ ಹಾಲ್‌ನಲ್ಲಿ ಚಿತ್ತಾಪುರ. ಕಲಬುರಗಿ ಗ್ರಾಮೀಣ ಹಾಗೂ ಜೇವರ್ಗಿ ವಿಧಾನಸಭಾ ಕ್ಷೇತ್ರ, ಒಳಾಂಗಣ ಕ್ರೀಡಾಂಗಣದಲ್ಲಿ ಕಲಬುರಗಿ ಉತ್ತರ ಮತ್ತು ಗುರುಮಠಕಲ್ ಮತಕ್ಷೇತ್ರ, ಗಣಿತಶಾಸ್ತ್ರ ವಿಭಾಗದದಲ್ಲಿ ಅಫ್ಜಲಪುರ, ಸಸ್ಯಶಾಸ್ತ್ರ ವಿಭಾಗದಲ್ಲಿ ಕಲಬುರಗಿ ದಕ್ಷಿಣ ಮತಕ್ಷೇತ್ರ ಹಾಗೂ ಕನ್ನಡ ಅಧ್ಯಯನ ಕೇಂದ್ರ ಸಭಾಂಗಣ(ನೆಲಮಹಡಿ)ದಲ್ಲಿ ಸೇಡಂ ಕ್ಷೇತ್ರಗಳ ಮತಗಳ ಎಣಿಕೆ ನಡೆಯಲಿದೆ.

ಲೋಕಸಭಾ ಚುನಾವಣೆಯ ಮತಗಳನ್ನು ಆಯಾ ವಿಧಾನಸಭಾವಾರು ಕೌಟಿಂಗ್ ಕೇಂದ್ರ ತೆರೆದು ಎಣಿಕೆ ಮಾಡುತ್ತಿದ್ದು,  ಈಗಾಗಲೇ ಆಯಾ ಕ್ಷೇತ್ರದ ಕೌಟಿಂಗ್ ಕೇಂದ್ರಗಳಿಗೆ ಹೊಂದಿಕೊಂಡಂತೆ ಸ್ಟ್ರಾಂಗ್ ರೂಂಗಳ ಸಿದ್ಧಗೊಳಿಸಲಾಗಿದೆ. ಕೊಠಡಿಗಳಿಗೆ ಕಿಟಕಿ ಮುಂತಾದವುಗಳನ್ನು ಇಟ್ಟಿಗೆಗಳ ಮೂಲಕ ಮುಚ್ಚಿ ಭದ್ರಪಡಿಸಿರುವುದನ್ನು ಖುದ್ದು ವೀಕ್ಷಿಸಿದ ಜಿಲ್ಲಾ ಚುನಾವಣಾಧಿಕಾರಿಗಳು ಆಗಬೇಕಾದ ಕೆಲಸಗಳನ್ನು ತುರ್ತಾಗಿ ಮುಗಿಸುವಂತೆ ಸೂಚಿಸಿದರು.

ಏನೇ ಸಣ್ಣ-ಪುಟ್ಟ ಕೆಲಸಗಳಿದ್ದರೂ ಏಪ್ರಿಲ್ ೨೨ ರೊಳಗೆ ಮುಗಿಸಬೇಕು. ಏಪ್ರಿಲ್ ೨೨ರಂದು ಸಂಜೆ ಮತ ಎಣಿಕಾ ಕೇಂದ್ರಗಳನ್ನು ಪ್ಯಾರಾ ಮಿಲಿಟರಿ ಪಡೆ ವಶಕ್ಕೆ ನೀಡಿದರೆ, ಯಾವುದೇ ಕೆಲಸಗಳ ನಡೆಸಲು ಅವಕಾಶ ಸಿಗುವುದಿಲ್ಲ. ಹಾಗಾಗಿ ಶೀಘ್ರ ಮುಗಿಸಬೇಕು ಎಂದು ಸೂಚಿಸಿದ ಅವರು, ಅಧಿಕಾರಿಗಳು ಪ್ರತಿದಿನ ಬಂದು ಸಿದ್ಧತೆಗಳನ್ನು ಪರಿಶೀಲಿಸಬೇಕು ಎಂದು ಅವರು ಲೋಕೋಪಯೋಗಿ ಇಲಾಖೆ ಇಂಜಿಯರ್‌ಗಳಿಗೆ ತಿಳಿಸಿದರು.

42-ಚಿಂಚೋಳಿ (ಪ.ಜಾ. ಮೀಸಲು) ವಿಧಾನಸಭಾ ಕ್ಷೇತ್ರ: ಚಿಂಚೋಳಿ (ಪ.ಜಾ. ಮೀಸಲು) ವಿಧಾನಸಭಾ ಕ್ಷೇತ್ರದ ಮತದಾನ ಮೇ ೧೯ ರಂದು ನಡೆದು ಅಂದು ಸಂಜೆ ಕನ್ನಡ ಅಧ್ಯಯನ ಕೇಂದ್ರ ಸಭಾಂಗಣದ ಮೊದಲ ಮಹಡಿಯ ಸ್ಟ್ರಾಂಗ್ ರೂಂಗಳಲ್ಲಿ ಮತಯಂತ್ರಗಳನ್ನು ತಂದಿಡುವ ವ್ಯವಸ್ಥೆ ಮಾಡಬೇಕು. ಮೇ ೨೩ ರಂದು ಮತಗಳ ಎಣಿಕೆ ನಡೆಯಬೇಕು. ಹಾಗೆಯೇ ಮೇ ೨೩ರಂದೇ ಕನ್ನಡ ಅಧ್ಯಯನ ಕೇಂದ್ರ ಸಭಾಂಗಣದ ನೆಲಮಹಡಿಯಲ್ಲಿ ಲೋಕಸಭಾ ಚುನಾವಣೆಯ ಸೇಡಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಳ ಎಣಿಕೆ ನಡೆಯಲಿದೆ. ಹಾಗಾಗಿ ಪ್ರತ್ಯೇಕ ಬ್ಯಾರಿಕೇಡ್ ನಿರ್ಮಿಸುವ ಮೂಲಕ ಸುಗಮ ಮತೆಣಿಕೆಗೆ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್,  ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ(ಮೌಲ್ಯಮಾಪನ) ಪ್ರೊ.ಡಿ.ಎಂ. ಮದರಿ, ಪ್ರೊಬೇಷನರಿ  ಐಎಎಸ್ ಅಧಿಕಾರಿ  ಸ್ನೇಹಲ್ ಸುಧಾಕರ ಲೋಖಂಡೆ, ಎನ್‌ಐಸಿ ಕೇಂದ್ರದ ಅಧಿಕಾರಿ ಸುಧೀಂದ್ರ ಅವಧಾನಿ, ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಮಹ್ಮದ್ ಕಲೀಮುದ್ದೀನ್, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ (ವಿದ್ಯುತ್) ಭೀಮರಾವ ಗೋಗಿ, ಬಿಎಸ್‌ಎನ್‌ಎಲ್ ಸಬ್ ಡಿವಿಜನ್ ಇಂಜಿನಿಯರ್  ಎಂ.ಎಸ್. ಮಳಖೇಡ, ಶಿಷ್ಟಾಚಾರ ತಹಸೀಲ್ದಾರ್ ಪ್ರಕಾಶ್ ಚಿಂಚೋಳಿಕರ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here