ಕೇಂದ್ರ ಸರ್ಕಾರದ ಪ್ರಾಯೋಜಿತದ ರಾಜ್ಯದ 60,711 ಫಲಾನುಭವಿಗಳಿಗೆ ಸೌಲಭ್ಯ ವಿತರಣೆ
ಕಲಬುರಗಿ; ಕೇಂದ್ರ ಸರ್ಕಾರ ಜನರ ವಿಕಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸವಲತ್ತು ದೊರಕಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಾ ಬಂದಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಮತ್ತು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ರಾಜ್ಯ ಖಾತೆ ಸಚಿವ ಡಾ.ವಿ.ಕೆ.ಸಿಂಗ್ ಅವರು ಗುಣಗಾನ ಮಾಡಿದರು.
ಕಲಬುರಗಿಯ ಗುಲಬರ್ಗಾ ವಿವಿ ಆವರಣದಲ್ಲಿ ಬುಧವಾರ ನಡೆದ ಕೇಂದ್ರ ಸರ್ಕಾರದ ಪ್ರಾಯೋಜಿತ ಹಾಗೂ ರಾಜ್ಯ ಸರ್ಕಾರದ ಫಲಾನುಭವಿಗಳ ಸಮ್ಮೇಳನವನ್ನು ಅವರು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ದೇಶದ ಬಡ ಜನರ, ಕೂಲಿ ಕಾರ್ಮಿಕರ ಹಾಗೂ ಮಧ್ಯಮ ವರ್ಗಗಳ ಅಭಿವೃದ್ಧಿ ಸಲುವಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಅದರ ಲಾಭವನ್ನು ಇಂದು ತಾವು ಪಡೆದುಕೊಳ್ಳುತ್ತಿದ್ದಿರಿ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರು , ರಾಜ್ಯದ ಸಮಗ್ರ ಅಭಿವೃದ್ಧಿ ನಿಟ್ಟಿನಲ್ಲಿ ರಾಜ್ಯದ ಐದು ಕಡೆ ವಿಮಾನ ನಿಲ್ದಾಣ ನಿರ್ಮಿಸಲಾಗುತ್ತದೆ ಎಂದು ಹೇಳಿದರು.
ದಾವಣಗೆರೆ, ಬಾಗಲಕೋಟ ಜಿಲ್ಲೆಯ ಬಾದಾಮಿ, ಕೊಪ್ಪಳ, ರಾಯಚೂರು ಹಾಗೂ ಚಿಕ್ಕಮಗಳೂರಿನಲ್ಲಿ ವಿಮಾನ ನಿಲ್ದಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ವಿವರಣೆ ನೀಡಿದರು.
ಹಾಸನ ಮತ್ತು ವಿಜಯಪುರ ವಿಮಾನ ನಿಲ್ದಾಣ ಕಾರ್ಯ ಭರದಿಂದ ಸಾಗಿದ್ದು, ಶೀಘ್ರದಲ್ಲೇ ಇವುಗಳ ಉದ್ಘಾಟನೆ ನೆರವೇರಿಸಲಾಗುವುದು ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಪೂರಕವಾಗುವ ಮೆಗಾ ಟೆಕ್ಸ್‍ಟೈಲ್ ಪಾರ್ಕ್ ಸ್ಥಾಪನೆಗೆ ಕೇಂದ್ರ ಸರ್ಕಾರ ಮಂಜೂರಾತಿ ನೀಡಿದೆ. ಈ ಉದ್ಯಮ ಪ್ರಾರಂಭವಾದಲ್ಲಿ 25 ಸಾವಿರಕ್ಕೂ ಅಧಿಕ ಜನರಿಗೆ ಉದ್ಯೋಗ ದೊರಕಲಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದರು.
ನೆಟ್ಟೆರೋಗ ದಿಂದ ಹಾಳಾಗಿರುವ ತೊಗರಿಗೆ ಪರಿಹಾರ ಹಣ ವಾರದೊಳಗೆ ರೈತರ ಖಾತೆಗೆ ಜಮಾ ಆಗಲಿದೆ. ಹೆಕ್ಟೇರ್ ಗೆ 10 ಸಾವಿರ ನೀಡುವ ಕುರಿತು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆಯಲ್ಲದೇ, ಪರಿಹಾರ ಬಿಡುಗಡೆಗೆ ರಾಜ್ಯ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ. ಹೀಗಾಗಿ ವಾರದೊಳಗೆ ಹಣ ರೈತರ ಕೈಗೆ ಸೇರಲಿದೆ ಎಂದು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್‍ನ ಸದಸ್ಯ ರವಿಕಿಮಾರ್, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಅವರು ಮಾತನಾಡಿದರು.
60,711 ಪಲಾನುಭವಿಗಳಿಗೆ ಸವಲತ್ತು: ಇಂದು 15 ಇಲಾಖೆಗಳಿಂದ ಸಾಂಕೇತಿಕವಾಗಿ ಆಯಾ ಇಲಾಖೆಯ ಐದು ಫಲಾನುಭವಿಗಳಿಗೆ ಪುರಸ್ಕಾರ ನೀಡಲಾಯಿತು. ಬಳಿಕ ಆಯಾ ಇಲಾಖೆಯ ಅಧಿಕಾರಿಗಳು ಎಲ್ಲಾ ಫಲಾನುಭವಿಗಳಿಗೆ ಸವಲತ್ತು ವಿತರಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 10 ಸಾವಿರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 10 ಸಾವಿರ, ಕೃಷಿ ಇಲಾಖೆಯಿಂದ 5 ಸಾವಿರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಖೆಯಿಂದ 5 ಸಾವಿರ, ಸಹಕಾರ ಇಲಾಖೆಯ 5 ಸಾವಿರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 3 ಸಾವಿರ, ಸಮಾಜ ಕಲ್ಯಾಣ ಇಲಾಖೆಯ 3,250 ಫಲಾನುಭವಿಗಳು ಸೇರಿದಂತೆ ಒಟ್ಟು 60,711 ಫಲಾನುಭವಿಗಳು ಸಮ್ಮೇಳನದಲ್ಲಿ ಸರ್ಕಾರದ ಸವಲತ್ತು ವಿತರಿಸಲಾಯಿತು.
ಕೃಷಿ ಇಲಾಖೆ ವತಿಯಿಂದ ರೈತ ಮಕ್ಕಳು ಮತ್ತು ಕೃಷಿ ಕಾರ್ಮಿಕ ಮಕ್ಕಳಿಗೆ ರೈತ ವಿದ್ಯಾನಿಧಿ, ಪಿ.ಎಂ.ಕಿಸಾನ್, ಸಮಾಜ ಕಲ್ಯಾಣ ಇಲಾಖೆಯ ವಸತಿ ಯೋಜನೆ ಹಕ್ಕು ಪತ್ರ, ಆರೋಗ್ಯ ಇಲಾಖೆ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮೃಧ್ದಿ ಯೋಜನೆ, ಆಹಾರ ಇಲಾಖೆ ಅನ್ಯಭಾಗ್ಯ ಯೋಜನೆಯಡಿ ಹೊಸದಾಗಿ ಪಡಿತರ ಚೀಟಿ ವಿತರಣೆ, ತೋಟಗಾರಿಕೆ ಇಲಾಖೆಯ ರಾಷ್ಟ್ರೀಯ ತೋಟಗಾರಿಕೆ ಮಿಷನ್, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಿಂದ ಗ್ರಾಮೀಣ ರೈತ ಮಹಿಳೆಯರಿಗೆ ಐದು ವಾರದ 20 ನಾಟಿ ಕೋಳಿ ಮರಿಗಳ ಉಚಿತವಾಗಿ ವಿತರಿಸುವ ಯೋಜನೆ, ವಿತರಣೆ ಕಾರ್ಮಿಕ ಇಲಾಖೆಯಿಂದ ಟ್ಯಾಬ್, ಇ-ಶ್ರಮ್ ಕಾರ್ಡ್, ಸಹಕಾರ ಇಲಾಖೆಯಿಂದ ಯಶಸ್ವಿನಿ ಆರೋಗ್ಯ ಯೋಜನೆ ಸೇರಿದಂತೆ ಕೇಂದ್ರ ಸರ್ಕಾರ ಪ್ರಾಯೋಜಿತದ ವಿವಿಧ ಯೋಜನೆಗಳ ಸವಲತ್ತುಗಳನ್ನು ರಾಜ್ಯದ ಫಲಾನುಭವಿಗಳಿಗೆ ವಿತರಿಸಲಾಯಿತು.
ಕಲಬುರಗಿ ದಕ್ಷಿಣ ಶಾಸಕ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ದತ್ತಾತ್ರೇಯ ಸಿ. ಪಾಟೀಲ ರೇವೂರ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕಲಬುರಗಿ-ಯಾದಗಿರಿ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರು ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ಚಿಂಚೋಳಿ ಕ್ಷೇತ್ರದ ಶಾಸಕ ಡಾ. ಅವಿನಾಶ ಜಾಧವ, ವಿಧಾನ ಪರಿಷತ್ ಶಾಸಕರಾದ ಶಶೀಲ ಜಿ. ನಮೋಶಿ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಅಧ್ಯಕ್ಷ ಚಂದ್ರಕಾಂತ ಜಿ. ಪಾಟೀಲ (ಚಂದು ಪಾಟೀಲ), ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅವಿನಾಶ ಕುಲಕರ್ಣಿ, ಕುಸುನೂರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನಿಂಗಮ್ಮ, ಕಲಬುರಗಿ ನಗರ ಪೆÇಲೀಸ್ ಆಯುಕ್ತ ಚೇತನ್. ಆರ್., ಜಿಲ್ಲಾಧಿಕಾರಿ ಯಶವಂತ ವಿ.ಗುರುಕರ್, ಜಿಲ್ಲಾ ಪಂಚಾಯತ್ ಮುಖ್ಯನಿರ್ವಾಹಣಾಧಿಕಾರಿಗಳಾದ ಡಾ. ಗಿರೀಶ್ ದಿ. ಬದೋಲೆ, ಅಪರ ಜಿಲ್ಲಾಧಿಕಾರಿ ಭೀಮಾಶಂಕರ್ ತೆಗ್ಗೆಳ್ಳಿ ಮುಂತಾದ ಹಿರಿಯ ಅಧಿಕಾರಿಗಳು ಹಾಜರಿದ್ದರು.