ಮಾದನಹಿಪ್ಪರಗಿ: ಸಮುದ್ರಕ್ಕೆ ಹೋಗಿ ನಾಲ್ಕು ಕಟ್ಟಿ ಪೂಜಿ ಮಾಡಿ ಬರೋದ್ರೊಳಗೆ ಇದಮಾಯಿ ಎದುರಿಗೆ ಬಂತಲೇ ತಮ್ಮಾ.. ಹಿಂಗಾರು ಮುಂಗಾರು ಸಮ ಆದ್ರೆ ಶಿಶುವಿಗೆ ಜ್ವಾಕಿ ಮಾಡಲೇ ತಮ್ಮಾ… ಇಲ್ಲಾಂದರ ಹಾದಿ ಬೀದಿ ಹೆಣ ಬಿದ್ದಾವು. ರೈತ ಮಗಾ ಗಾಬರಿ ಬೀಳಬ್ಯಾಡ ಬಸವಗ ಪೀಡಾ ಹಿಂದಾ ಹೋಯಿತಲೇ ತಮ್ಮಾ.. ಎಂದು ಕೇರೂರ ಬೀರಲಿಂಗೇಶ್ವರ ಜಾತ್ರೆಯಲ್ಲಿ ಹೇಳಿಕೆ ಆದವು.
ಇಲ್ಲಿಗೆ ಸಮೀಪದ ಕೇರೂರ ಗ್ರಾಮದಲ್ಲಿ ಯುಗಾದಿ ಹಬ್ಬದಂದು ಜರಗುವ ಬೀರಲಿಂಗೇಶ್ವರ ಪಲ್ಲಕ್ಕಿಯಂದು ಪೂಜಾರಿಗಳು ಡೊಳ್ಳುಗಳ ಕುಣಿತಕ್ಕೆ ಉಕ್ಕಿನ ಗುಂಡುಗಳಿಂದ ಮೈಗೆ ದಂಡಿಸಿಕೊಳ್ಳುತ್ತ ದೇವರು ತಮ್ಮ ಮೈಯೊಳಗೆ ಪ್ರವೇಶಿಸಿದಂತೆ ಒಬ್ಬಬ್ಬರಾಗಿ ಹೇಳಿದರು. ಹಿಂದು ಧರ್ಮದ ಪ್ರಕಾರ ಹೊಸ ವರ್ಷದ ಯುಗಾದಿ ಹಬ್ಬದ ಈ ಹೇಳಿಕೆಗಳು ರೈತರ ಪಾಲಿಗೆ ಭವಿಷ್ಯವಾಣಿ ಎಂದು ಈ ಭಾಗದ ಜನ ನಂಬಿಕೆಯಿಟ್ಟಿದ್ದಾರೆ.
ಪೂಜಾರಿಗಳ ಈ ಹೇಳಿಕೆಗಳು ಕೇಳಲೆಂದೇ ಸುತ್ತಮತ್ತಲಿನ ಅನೇಕ ಗ್ರಾಮಗಳ ರೈತಾಪಿ ಜನ ಆಲಿಸಲು ಬರುತ್ತಾರೆ. ಗ್ರಾಮದ ಹೊರವಲಯದ ಬೀರಲಿಂಗೇಶ್ವರ ಗುಡಿಯ ಆವರಣದಲ್ಲಿ ನಡೆಯುವ ಜಾತ್ರೆಯ ಹೇಳಿಕೆಗಳು ಬಹಳ ಮಹತ್ವ ಪಡೆದುಕೊಳ್ಳುತ್ತಿವೆ. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಬೀರಣ್ಣ ಕಡಗಂಚಿ, ಕಲ್ಯಾಣಿ ಬ್ಯಾಗೇಳಿ, ಅಮೃತ ಪಾಟೀಲ, ಕಲ್ಯಾಣಿ ಉದ್ದನಶೆಟಿ, ಗುಂಡೆರಾವ ಉದ್ದನಶೆಟ್ಟಿ, ಮುಂತಾದವರಿದ್ದರು.