-
ಮೀಸಲಾತಿ ಮುಂದುವರೆಸದಿದ್ದರೆ ನ್ಯಾಯಾಲಯದ ಮೋರೆ
ಕಲಬುರಗಿ: ಮುಸ್ಲಿಂ ರಿಗೆ ಇದ್ದ 2 ಬಿ ಪ್ರವರ್ಗ ಮೀಸಲಾತಿ ರದ್ದುಗೊಳಿಸಿರುವ ರಾಜ್ಯ ಸರ್ಕಾರದ ನಿರ್ಧಾರ ಕ್ಕೆ ಅಖಿಲ ಭಾರತ ಮಿಲ್ಲಿ ಕೌನ್ಸಿಲ್ ನ ರಾಷ್ಟ್ರೀಯ ಕಾರ್ಯದರ್ಶಿಯಾಗಿರುವ ಕುಡಾ ಮಾಜಿ ಅಧ್ಯಕ್ಷ ಡಾ. ಮೊಹಮ್ಮದ ಅಜಗರ ಚುಲ್ ಬುಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮುಸ್ಲಿಂ ಸಮುದಾಯ ಗುರುತಿಸುವ ಮೀಸಲಾತಿ ಪ್ರವರ್ಗ ರದ್ದುಪಡಿಸುವ ಮುಖಾಂತರ ಮುಸ್ಲಿಂ ಧರ್ಮವೇ ಅಸ್ತಿತ್ವ ಇಲ್ಲ ಎನ್ನುವಂತೆ ಮಾಡಲಾಗಿದೆ. ಇದು ಮುಸ್ಲಿಂ ರನ್ನು ಹತ್ತಿಕ್ಕುವ ಷಡ್ಯಂತ್ರ ವಾಗಿದೆಯಲ್ಲದೇ ಬಿಜೆಪಿ ಮುಸ್ಲಿಂ ರ ವಿರೋಧಿ ಎಂಬುದನ್ನು ಈ ಮೂಲಕ ನಿರೂಪಿಸಲಾಗಿದೆ ಎಂದು ಗುಡುಗಿದ್ದಾರೆ.
2ಬಿ ಪ್ರವರ್ಗ ರದ್ದುಪಡಿಸಿ ಮುಸ್ಲಿಂ ರಿಗೆ ಆರ್ಥಿಕವಾಗಿ ಹಿಂದುಳಿದ ( ಇಡಬ್ಯುಎಸ್) ವರ್ಗಕ್ಕೆ ಸೇರಿಸಿರುವುದು ಅನ್ಯಾಯದ ಪರಮಾವಧಿಯಾಗಿದೆ. ಮುಸ್ಲಿಂ ವರ್ಗ ಮೊದಲೇ ಶೈಕ್ಷಣಿಕ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದಿದೆ. ಇಡಬ್ಯುಎಸ್ ದಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಮುಂದುವರೆದವರು ಇದ್ದಾರೆ. ಅವರೊಂದಿಗೆ ಮುಸ್ಲಿಂ ಜನಾಂಗ ಸ್ಪರ್ಧೆ ಮಾಡೋದು ಕಠಿಣ ವಾಗುತ್ತದೆ. ಪ್ರಮುಖವಾಗಿ ಶಿಕ್ಷಣ ಹಾಗೂ ಉದ್ಯೋಗ ಪಡೆಯುವುದು ದುಸ್ಥರವಾಗುತ್ತದೆ. ಹೀಗಾಗಿ ಮುಸ್ಲಿಂ ಸಮುದಾಯ ಮತ್ತೆ ಪಾತಾಳಕ್ಕೆ ಇಳಿಯುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಶೇ. 15ರಷ್ಟು ಇರುವ ಮುಸ್ಲಿಂ ಜನಾಂಗಕ್ಕೆ ಮೀಸಲಾತಿ ಪ್ರವರ್ಗ ಇರದಿರುವುದು ನಿಜಕ್ಕೂ ಸಮುದಾಯಕ್ಕೆ ಮಾಡಿರುವ ಅವಮಾನ ಹಾಗೂ ಶೋಷಣೆಯಾಗಿದೆ. ಸಾಚಾರ ವರದಿಯಲ್ಲಿ ಮುಸ್ಲಿಂ ಸಮುದಾಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಿಂತಲೂ ಹಿಂದುಳಿದಿದ್ದಾರೆ ಎಂಬ ವರದಿ ಉಲ್ಲೇಖವಾಗಿದೆ. ಇಷ್ಟಿದ್ದ ಮೇಲೂ ರಾಜ್ಯ ಬಿಜೆಪಿ ಸರ್ಕಾರದ ಮುಸ್ಲಿಂ ಸಮುದಾಯದ 2 ಬಿ ಪ್ರವರ್ಗ ಮೀಸಲಾತಿ ರದ್ದು ಮಾಡಿರುವುದು ಯಾವ ನ್ಯಾಯ? ಸರ್ಕಾರದ ಮುಸ್ಲಿಂ ಸಮುದಾಯದ ಮೀಸಲಾತಿ ಪ್ರವರ್ಗ ರದ್ದುಪಡಿಸಿರುವ ವಿರುದ್ದ ವ್ಯಾಪಕವಾದ ಹೋರಾಟದ ಜತೆಗೇ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುವುದು ಎಂದು ಚುಲ್ ಬುಲ್ ತಿಳಿಸಿದ್ದಾರೆ.
ಮುಸ್ಲಿಂ ರ ಮೀಸಲಾತಿ ಕಲ್ಪಿಸುವ 2ಬಿ ಪ್ರವರ್ಗ ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಧಾರ್ಮಿಕ ಗುರುಗಳ, ಮುಖಂಡರ, ವಿವಿಧ ಸಂಘ ಸಂಸ್ಥೆಗಳ ಸದಸ್ಯರ ಸಭೆ ಕರೆದು ಚರ್ಚಿಸಲಾಗಿದ್ದು, ಸರ್ಕಾರದ ಧೋರಣೆ ವಿರುದ್ದ ಬೀದಿಗಿಳಿದು ಹೋರಾಟ ರೂಪಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ಪ್ರವರ್ಗ ಹಿಂದುಳಿದ ವರ್ಗಗಳ ನಾಯಕ ದೇವರಾಜ ಅರಸು ಕಾಲ. 1975 ರಿಂದ ಬಂದಿದೆ.1975ರಲ್ಲಿ ಹಾವನೂರ ಆಯೋಗ, 1983 ರ ಟಿ. ವೆಂಕಟಸ್ವಾಮಿ ಆಯೋಗ, ಅದೇ ರೀತಿ ಚಿನ್ನಪ್ಪ ರೆಡ್ಡಿ ಮತ್ತು ರವಿವರ್ಮಕುಮಾರ ಆಯೋಗಗಳು ಮೀಸಲಾತಿ ಮುಂದುವರೆಸುವಂತೆ ಹೇಳಿವೆ. ಆದರೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ರದ್ದುಪಡಿಸಿರುವುದು ಸರ್ವಾಧಿಕಾರಿಧೋರಣೆಯಾಗಿದೆ ಎಂದು ಕಿಡಿ ಕಾರಿದ್ದಾರೆ.