ಶಹಾಪುರ: ಬಸವಣ್ಣನವರು ವಿಶ್ವದ ಬಹುದೊಡ್ಡ ಜ್ಞಾನ ರತ್ನ. ಸದುವಿನಯ ಸಂಪನ್ನ. ಸಮ ಸಮಾಜದ ಕನಸುಗಳನ್ನು ಬಿತ್ತಿ ಬೆಳೆದ ಗಾರುಡಿಗ. ಜನ ಸಾಮಾನ್ಯರು ನಿತ್ಯ ಮಾಡುವ ಕೆಲಸವನ್ನು ಕಾಯಕ ತತ್ವಕ್ಕೇರಿಸಿ ಉದಾರಿಕರಿಸಿದರು ಎಂದು ಮತ್ತೆ ಕಲ್ಯಾಣ ವೇದಿಕೆಯ ಚಿಂತಕ, ಬರಹಗಾರ ವಿಶ್ವಾರಾಧ್ಯ ಸತ್ಯಂಪೇಟೆ ನುಡಿದರು.
ಸ್ಥಳೀಯ ಎಸ್.ಎಂ.ಸಿ. ಜೈನ್ ಶಾಲೆಯಲ್ಲಿ ಸಮಸಮಾಜದಿಂದ ಏರ್ಪಡಿಸಿದ್ದ ಮತ್ತೆ ಕಲ್ಯಾಣ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು ಒಂದು ದೇಶದ ಪ್ರಧಾನಿಯಾಗಿಯೂ ಆ ಹಮ್ಮು ತಲೆಯೊಳಗೆ ಬಿಟ್ಟುಕೊಳ್ಳಲಿಲ್ಲ. ವೈಜ್ಞಾನಿಕವಾಗಿ, ವೈಚಾರಿಕವಾಗಿ ಸಮಾಜವನ್ನು ಕಟ್ಟಬೇಕು ಎಂಬ ತುಡಿತ ಹೊಂದಿದ ಮಹಾನೀಯ. ಜಾತಿ ಮತ ಪಂಥವೆನ್ನದೆ ಹೆಣ್ಣು ಗಂಡು ಎಂಬ ಭೇದವನ್ನು ಪರಿಗಣಿಸದೆ ಎಲ್ಲರಿಗೂ ಒಳಿತಾಗಲಿ ಎಂದು ಬಯಸಿದರು. ನೋವಿರುವ ಕಡೆಗೆ ಸದಾ ನಾಲಿಗೆ ಹರಿಯುವಂತೆ ದೀನ ದಲಿತರು ದುಃಖಿತರೆಡೆಗೆ ಅವರ ಮನಸ್ಸು ಹಾತೊರೆಯುತ್ತಿತ್ತು. ಸರಳವಾದ ವಚನ ರಚನೆಯ ಮೂಲಕ ಸಮಾಜದಲ್ಲಿ ಬೇರುಬಿಟ್ಟ ಅಸಮಾನತೆಯನ್ನು ಕಿತ್ತೊಗೆಯಲು ಅಹರ್ನಿಶಿ ಪ್ರಯತ್ನಿಸಿದರು. ಹನ್ನೆರಡನೆಯ ಶತಮಾನದಲ್ಲಿ ರಚಿಸಿದ ವಚನಗಳು ಇಂದಿಗೂ ಪ್ರಸ್ತುತವಾಗಿವೆ. ಮನದ ಕೊಳೆಯನ್ನು ತೊಳೆಯುವ, ನಮ್ಮೊಳಗೆ ಮೂಡಿರುವ ಅಂಧಕಾರವನ್ನು ಕಿತ್ತೊಗೆಯುವ ಶಕ್ತಿ ವಚನಗಳಿಗೆ ಇದೆ ಎಂದು ವಿವರಿಸಿದರು.
ಬಸವಾದಿ ಶರಣರ ವಚನಗಳನ್ನು ಓದುತ್ತಿದ್ದರೆ ನಮಗರಿವಿಲ್ಲದೆ ನಮ್ಮೊಳಗೆ ಇರುವ ಕಲ್ಮಶ ತಂತಾನೆ ಕಿತ್ತು ಹೋಗುತ್ತದೆ. ಇವನಾರವ ಎನ್ನದೆ ಇವ ನಮ್ಮವ ಎಂದು ಎಲ್ಲರನ್ನೂ ತಬ್ಬಿಕೊಳ್ಳುವ ಭಾವ ಉಂಟಾಗುತ್ತದೆ ಎಂದು ಶರಣರ ವಚನಗಳನ್ನು ಉದಾಹರಿಸಿ ಬಣ್ಣಿಸಿದರು. ಕಾರ್ಯಕ್ರಮದ ಅತಿಥಿಯಾಗಿ ಮಾತನಾಡಿದ ಬಸವಮಾರ್ಗ ಪ್ರತಿಷ್ಠಾನದ ಸಂಚಾಲಕ ಶಿವಣ್ಣ ಇಜೇರಿ, ಜೀವನವನ್ನು ನಾವು ಯಾರೂ ಕಡೆಗಣಿಸಬಾರದು. ಬಾಲ್ಯ ಯೌವ್ವನ, ಹಾಗೂ ವೃದ್ದ್ಯಾಪ್ಯಗಳು ನಮಗೆ ಅರಿವಿಲ್ಲದೆ ಬಂದು ಹೋಗುತ್ತವೆ. ಮಸಣಕ್ಕೆ ಹೋಗುವ ಸಂದರ್ಭದಲ್ಲಿ ಅರಿವಿಗೆ ಒಳಗಾಗಿ ಪರಿತಪಿಸುವುದಕ್ಕಿಂತ ಚಿಕ್ಕವರಿದ್ದಾಗಿನಿಂದಲೆ ಶರಣರ ವಚನಗಳ ಓದು ಮಾಡಬೇಕು. ಬದುಕಿಗೆ ವಚನಗಳು ಸಂಜೀವಿನಿಯಂತೆ ಇವೆ. ಮಕ್ಕಳಿಗೆ ತಿಳಿದರೂ ತಿಳಿಯದೆ ಇದ್ದರೂ ವಚನಗಳನ್ನು ಒತ್ತಾಯದಿಂದಾದರೂ ಓದಿಸಬೇಕು. ಇಂದು ವಚನಗಳನ್ನು ಓದಿದ ಮಗು ಮುಂದೊಂದು ದಿನ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತಾನೆ.
ಶರಣರ ವಚನಗಳು ಅತ್ಯಂತ ಸರಳ ಮತ್ತು ನೇರವಾಗಿವೆ. ಸಮಾಜದ ಡೊಂಕುಗಳನ್ನು ತಿದ್ದುತ್ತಲೆ ಅವು ನಮ್ಮನ್ನೂ ಸಹ ತಿದ್ದುತ್ತ ಅಜ್ಞಾನದಿಂದ ಜ್ಞಾನದ ಕಡೆಗೆ ನಮ್ಮನ್ನು ಕರೆದುಕೊಂಡು ಹೋಗುತ್ತದೆ. ಮತ್ತೆ ಕಲ್ಯಾಣವೆಂದರೆ ಬಸವ ಕಲ್ಯಾಣಕ್ಕೆ ಹೋಗುವುದಲ್ಲ. ಸಕಲ ಜೀವರಾಶಿಗೂ ಒಳಿತಾಗಲಿ ಎಂದು ಹಾರೈಸುವುದು ಮತ್ತು ಅದರಂತೆ ಬದುಕುವುದು ಎಂದು ವಿವರಿಸಿದರು.
ವೇದಿಕೆಯ ಮೇಲೆ ಪಂಪಣ್ಣಗೌಡ ಮಾಲಿ ಪಾಟೀಲ ಮಳಗ ಉಪಸ್ಥಿತರಿದ್ದರು. ಎಸ್.ಎಂ.ಸಿ. ಜೈನ್ ಶಾಲೆಯ ಪ್ರಾಚಾರ್ಯರಾದ ಭಾವಿಕಾ ಎಸ್.ಲಾಡ್ ಅಧ್ಯಕ್ಷ ವಹಿಸಿದ್ದರು. ಗಂಗಾಧರ ಹೊಟ್ಟಿ ವಚನ ಪ್ರಾರ್ಥನೆ ಮಾಡಿದರು. ಹಣಮಂತ ಚೆನ್ನೂರ ನಿರ್ವಹಿಸಿದರು. ವೆಂಟೇಶ ತುಳೇರ ವಂದಿಸಿದರು. ಜ್ಯೋತಿ ಕುಲ್ಕರ್ಣಿ ಸ್ವಾಗತಿಸಿದರು. ಸಭೆಯಲ್ಲಿ ಜೈನ ಶಾಲೆಯ ರಾಜೇಶ್ವರಿ, ಅನ್ನಪೂರ್ಣ, ಪಾರ್ವತಿ,ಅನಿಲ, ಪಾಂಡುರಂಗ, ಪ್ರವೀಣ ಕುಲ್ಕರ್ಣಿ ಮೊದಲಾದವರು ಹಾಗೂ ಶಾಲೆಯ ನೂರಾರು ಮಕ್ಕಳು ಭಾಗವಹಿಸಿದ್ದರು.