ಕಲಬುರಗಿ: ವಕೀಲರು ಹೆಚ್ಚು ಹೆಚ್ಚು ರಾಜಕೀಯಕ್ಕೆ ಬರುವುದರಿಂದ ಸಂಸತ್ತಿನಲ್ಲಿ ರೂಪಿಸಲ್ಪಡುವ ಕಾಯಿದೆಗಳ ಕುರಿತು ಸುದೀರ್ಘ ಚರ್ಚೆಯಲ್ಲಿ ಭಾಗವಹಿಸಿ ಜನಹಿತ ಕಾಪಾಡುವ ಕಾನೂನು ತರಲು ಸಹಕಾರಿಯಾಗುತ್ತದೆ ಎಂದು ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಅವರು ಅಭಿಪ್ರಾಯಪಟ್ಟರು.
ವಕೀಲರ ಸಂಘದಲ್ಲಿ ಪ್ರಚಾರ ಸಭೆ ನಡೆಸಿ ಅವರು ಮಾತನಾಡಿ, ತಾವು ವಕೀಲರಾಗಿ ಕಲಬುರಗಿಯಲ್ಲಿ ಜೀವನ ಪ್ರಾರಂಭಿಸಿದ ಬಗ್ಗೆ ಮೆಲುಕು ಹಾಕಿದ ಖರ್ಗೆ ಅವರು ತಮ್ಮ ರಾಜಕೀಯ ವೃತ್ತಿ ಬದುಕಿಗೆ ವಕೀಲಿಗೆ ಮಹತ್ವದ ತಿರುವು ಕೊಟ್ಟಿತ್ತು. ಹಾಗಾಗಿ, ಕಲಬುರಗಿ ಜಿಲ್ಲಾ ವಕೀಲರೆಂದರೆ ತಮಗೆ ವಿಶೇಷ ಪ್ರೀತಿ ಎಂದರು. ಕಲಬುರಗಿ ಹೈಕೋರ್ಟ್ ವ್ಯಾಪ್ತಿಗೆ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳನ್ನು ಸೇರ್ಪಡಿಸುವ ಕುರಿತು ಚುನಾವಣೆ ನಂತರ ಪರೀಶಿಲನೆ ಮಾಡಲಾಗುವುದು ಎಂದರು. ತಾವು ಚುನಾವಣೆಗೆ ಸ್ಪರ್ಧಿಸಿದ್ದು ಮತ್ತೊಮ್ಮೆ ಆರಿಸಿ ಸಂಸತ್ತಿಗೆ ಕಳಿಸುವಂತೆ ವಕೀಲರಲ್ಲಿ ಮನವಿ ಮಾಡಿದರು.
ವೇದಿಕೆಯ ಮೇಲೆ ವಕೀಲರ ಸಂಘದ ಅಧ್ಯಕ್ಷರಾದ ಆರ್ ಕೆ ಹಿರೇಮಠ, ವಕೀಲರಾದ ಬಿಆರ್ ಪಾಟೀಲ್, ಕಾಶೀನಾಥ್ ಮೋತಕಪಲ್ಲಿ, ಬಾಬುರಾವ್ ಮಂಗಾಣೆ, ಸಂತೋಷ ಪಾಟೀಲ್ ಹಾಗೂ ಮಾರುತಿ ಮಾಲೆ ಸೇರಿದಂತೆ ಮತ್ತಿತರಿದ್ದರು.