ಕಲಬುರಗಿ: ಚಿತ್ತಾಪುರ ಪಟ್ಟಣದ ತಹಶೀಲ್ದಾರ್ ಕಚೇರಿಯ ಕಟ್ಟಡದ ಮೇಲೆ ಪೊಲೀಸ್ ಕಾನ್ ಸ್ಟೆಬಲ್ ಒಬ್ಬರು 303 ರೈಫಲ್ ನಿಂದ ಗುಂಡು ಹಾರಿಸಿಕೊಂಡು ಗುರುವಾರ ಬೆಳಗಿನ ಜಾವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಚಿತ್ತಾಪುರ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಮಲ್ಲಿಕಾರ್ಜುನ ಮೃತಪಟ್ಟವರು ಎಂದು ತಿಳಿದು ಬಂದಿದ್ದು ತಹಶೀಲ್ದಾರ್ ಕಚೇರಿಯಲ್ಲಿ ಕಸಗುಡಿಸುವವರು ಕಟ್ಟಡದ ಮೇಲೆ ಬಂದಾಗ ಈ ದುರ್ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಗಂಟಲಿನ ಮೂಲಕ ನುಗ್ಗಿದ ಗುಂಡು ನೆತ್ತಿಯ ಮೂಲಕ ಹೊರಗೆ ಬಂದಿದೆ. ಕೈಯಲ್ಲಿ ಬಂದೂಕು ಹಿಡಿದುಕೊಂಡಿರುವ ಸ್ಥಿತಿಯಲ್ಲಿ ಮೃತದೇಹದ ಪತ್ತೆಯಾಗಿದ್ದು ಬಂದೂಕಿನಿಂದ ಆಕಸ್ಮಿಕ ಗುಂಡು ಹಾರಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಘಟನೆಗೆ ಸಂಬಂಧಪಟ್ಟಂತೆ ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ಇಶಾ ಪಂತ್, ‘ಚುನಾವಣಾ ಕರ್ತವ್ಯದ ನಿಮಿತ್ತ ಮಲ್ಲಿಕಾರ್ಜುನ ಅವರು ಫೈಯಿಂಗ್ ಸ್ಕ್ಯಾಡ್ ತಂಡದಲ್ಲಿದ್ದರು. ರಾತ್ರಿ 2.30ರ ಸಮಯದಲ್ಲಿ ಮೇಲೆ ಹೋಗಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಆಕಸ್ಮಿಕ ಗುಂಡು ಹಾರಿದೆಯೋ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಎನ್ನುವುದು ಪರಿಶೀಲನೆಯ ನಂತರ ತಿಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಪೊಲೀಸ್ ಪೇದೆ ಸಾವನ್ನಪ್ಪಿದ ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಚಿತ್ತಾಪುರ ಪೋಲಿಸ್ ಠಾಣೆಯಲ್ಲಿ ಸುಮಾರು ನಾಲ್ಕು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಮಲ್ಲಿಕಾರ್ಜುನ ಪತೆಪೂರ್ ಅವರು ಕಳೆದ ಕೆಲ ದಿನಗಳಿಂದ ಚುನಾವಣೆಯ ನಿಮಿತ್ಯವಾಗಿ ತಹಶೀಲ್ ಕಛೇರಿಯಲ್ಲಿ ಫ್ಲೈಯಿಂಗ್ ಸ್ಕ್ವಾಡ್ ತಂಡದಲ್ಲಿ ಭದ್ರತಾ ಕಾರ್ಯ ನಿರ್ವಹಿಸುತ್ತಿದ್ದರು.
ರಾತ್ರಿ ಗಸ್ತಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಲ್ಲಿಕಾರ್ಜುನ ಅವರು ಸುಮಾರು ಮೂರು ಗಂಟೆಯ ವೇಳೆಗೆ ತಮ್ಮ ಬಳಿಯಿದ್ದ 303 ಬಂದೂಕಿನಿಂದ ಗುಂಡು ಹಾರಿಸಿಕೊಂಡ ಸ್ಥಿತಿಯಲ್ಲಿ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಮೃತ ಮಲ್ಲಿಕಾರ್ಜುನ ತಾಯಿ,ಹೆಂಡತಿ ಮತ್ತು ಸಂಬಂಧಿಕರು ಧಾವಿಸಿದ್ದ ಅವರ ಆಕ್ರಂದನ ಮುಗಿಲು ಮುಟ್ಟಿತ್ತು.
ಶೋಕದಲ್ಲಿ ಮುಳುಗಿದ ಸಂಬಂಧಿಕರಿಗೆ ಕಲ್ಬುರ್ಗಿ ವರಿಷ್ಠಾಧಿಕಾರಿ ಈಶಾ ಪಂತ್ ಅವರು ಸಾಂತ್ವನ ಹೇಳಿದರು.
ಮದುವೆಯಾಗಿ ಸುಮಾರು ಏಳು ವರ್ಷಗಳಿಂದ ಯಾವುದೇ ಕಲಹವಿಲ್ಲದೆ ಎರಡು ಮಕ್ಕಳೊಂದಿಗೆ ಸುಖ ಸಂಸಾರ ಸಾಗಿಸುತ್ತಿದೆವು ನಿನ್ನೆ ಕರ್ತವ್ಯಕ್ಕೆ ತೆರಳಿದ್ದು ಇಂದು ಮೃತ ಪಟ್ಟಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಆಘಾತ ಉಂಟಾಗಿದೆ.- ತಾರಾ ಮೃತ ಪೇದೆ ಮಲ್ಲಿಕಾರ್ಜುನ ಪತ್ನಿ