ಕಲಬುರಗಿ; ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸಾಧಕ ಪತ್ರಕರ್ತರಿಗೆ ಜು.25 ರಂದು ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಲಬುರಗಿ ಜಿಲ್ಲೆಯ ಹಿರಿಯ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ಅವರನ್ನು ಸತ್ಕರಿಸಲಾಗುವುದು.
ಕರ್ನಾಟಕದ ಸುಮಾರು 20 ಜನ ಸಾಧಕ ಪತ್ರಕರ್ತರನ್ನು ಸತ್ಕರಿಸುವ ಈ ಸಮಾರಂಭದಲ್ಲಿ ಭಾರತೀಯ ಪತ್ರಕರ್ತರ ಒಕ್ಕೂಟದ 132 ನೇ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ಹಾಗೂ ಪತ್ರಿಕಾ ದಿನಾಚರಣೆ ಹಿನ್ನೆಲೆಯಲ್ಲಿ ಜು.25 ರಂದು ಬೆಂಗಳೂರಿನ ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಕಾರ್ಯಕ್ರಮ ನಡೆಯಲಿದೆ. ಬೆಳಗಿನ 10.30ಕ್ಕೆ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಒಕ್ಕೂಟದ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ, ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಡಗೂರು ಸೇರಿದಂತೆ ಅನೇಕರು ಭಾಗವಹಿಸುವರು.
ಮಧ್ಯಾಹ್ನ 3.30 ಕ್ಕೆ ನಡೆಯಲಿರುವ ಪತ್ರಿಕಾ ದಿನಾಚರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ, ಸಾರಿಗೆ, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಪ್ರಿಯಕೃಷ್ಣ, ವಾರ್ತಾ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಡಿ.ಡೊಳ್ಳಿನ್, ಕೆಯುಡಬ್ಲ್ಯೂಜೆ ಕಾರ್ಯದರ್ಶಿ ಬಿ.ಸಿ.ಲೋಕೇಶ, ಶೇಷಚಂದ್ರಿಕ ಭಾಗವಹಿಸುವರು.
ಸುಮಾರು 20 ಜನ ಪತ್ರಕರ್ತ ಸಾಧಕರನ್ನು ಸತ್ಕರಿಸಲಿದ್ದು, ಕಲಬುರಗಿ ಜಿಲ್ಲೆಯ ಹಿರಿಯ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ಅವರನ್ನು ಸಹ ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.