ಯಾದಗಿರಿ; ಬೇಡಿಕೆ ಈಡೇರಿಸುವಂತೆ ನೂತನ ಮುಖ್ಯಮಂತ್ರಿಗಳ ಭೇಟಿಗೆ ನಿಯೋಗ ತೆರಳಲು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ ನಿರ್ಧರಿಸಿದೆ.
ಈಚೆಗೆ ಕಲ್ಬುರ್ಗಿ ಕನ್ನಡ ಭವನದಲ್ಲಿ ಜರುಗಿದ ರಾಜ್ಯ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ರಾಜ್ಯಾಧ್ಯಕ್ಷ ವಿಶ್ವಾರಾಧ್ಯ ಎಚ್. ಯಮೋಜಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಭೆಯಲ್ಲಿ ಇದುವರೆಗೆ ಆದ ಬೆಳವಣಿಗೆಗಳನ್ನು ಕುರಿತು ಚರ್ಚಿಸಲಾಯಿತು. ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ. ಕುಮಾರಸ್ವಾಮಿ ತಮ್ಮ ಸಂಘದ ನಿಯೋಗ ಬರಹೇಳಿದ್ದರೂ ಎರಡು ಬಾರಿ ಸಭೆ ಮುಂದೂಡಿದ ಪ್ರಯುಕ್ತ ನಮ್ಮ ಬೇಡಿಕೆಗಳ ಕುರಿತು ಸರ್ಕಾರ ಮಟ್ಟದಲ್ಲಿ ಯಾವುದೇ ಸ್ಪಂದನೆ ಸಿಗದೇ ಇರುವುದರಿಂದ ಈದೀಗ ಸರ್ಕಾರವೇ ಬದಲಾಗಿ ಹೊಸ ಮುಖ್ಯಮಂತ್ರಿಗಳು ಬಂದಿರುವುದರಿಂದ ಅವರಿಗೆ ಭೇಟಿ ಮಾಡಿ ನಿಯೋಗ ಹೋಗಿ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡುವ ಬಗ್ಗೆ ಸಭೆ ತೀರ್ಮಾನಿಸಿದೆ.
ನೂತನ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಅಧಿಕಾರ ವಹಿಸಿಕೊಂಡಲ್ಲಿ ಅವರನ್ನು ಭೇಟಿಯಾಗಿ ಸಮಸ್ಯೆಗಳನ್ನು ಬೇಡಿಕೆಗಳ ಕುರಿತು ಮನವರಿಕೆ ಮಾಡಿಕೊಡಲು ತೀರ್ಮಾನಿಸಲಾಯಿತು. ಇದಲ್ಲದೇ ಸೆಪ್ಟೆಂಬರ್ ತಿಂಗಳಲ್ಲಿ ಕೇಂದ್ರ ಆರೋಗ್ಯ ಸಚಿವರು ಮತ್ತು ರಾಷ್ಟ್ರೀಯ ಆರೋಗ್ಯ ಮಿಷನಗ್ (ಎನ್.ಎಚ್.ಎಂ.) ಅಧಿಕಾರಿಗಳನ್ನು ದೆಹಲಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.
ಈ ವಾರದಲ್ಲಿಯೇ ಬೆಂಗಳೂರಿಗೆ ನಿಯೋಗ ತೆರಳಲಿದ್ದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಸ್ವಾಮಿ, ಶೇಖರ ದತ್ತುರಗಿ, ಸುರೇಶ ದೊಡ್ಡಮನಿ, ಡಾ|| ಪ್ರಮೋದ, ಫಕೀರಪ್ಪ, ವೆಂಕಟೇಶ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಪಾಲ್ಗೊಂಡರು.