ಸುರಪುರ: ತಾಲೂಕಿನ ಯಕ್ತಾಪುರದ ಕಸ್ತೂರಿಬಾ ವಸತಿ ಶಾಲೆ ವಿದ್ಯಾರ್ಥಿಗಳು ಹಾಗೂ ಹುಣಸಗಿ ತಾಲೂಕಿನ ಕನ್ನಳ್ಳಿ ಗ್ರಾಮದಲ್ಲಿ ಜನರು ಕಲುಷಿತ ನೀರು ಸೇವಿಸಿ. ವಾಂತಿ ಭೇದಿಯಾಗಿ ಹಲವಾರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಈ ಘಟನೆಗೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಇಓ ಅವರು ಕಾರಣ ಎಂದು ಆರೋಪಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಬಿ.ಕೃಷ್ಣಪ್ಪ ಬಣದ ಮುಖಂಡರು ನಗರದ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕ ನಿಂಗಣ್ಣ ಎಮ್ ಗೋಪಾಲ ಮಾತನಾಡಿ,ಕಲುಷಿತ ನೀರು ಕುಡಿದ ಘಟನೆಯಲ್ಲಿ ಕೆಲವೊಂದು ಮಕ್ಕಳ ಸ್ಥತಿ ಚಿಂತಾಜನಕವಾಗಿದೆ. ಇನ್ನೂ ಕೆಲವು ಪೋಷಕರು ತಮ್ಮ ಮಕ್ಕಳನ್ನು ಸಾಲ ಶೂಲ ಮಾಡಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿಸಿ ಚಿಕಿತ್ಸೆ ಕೊಡೆಸುತ್ತಿದ್ದಾರೆ. ಕೆಲವೊಂದು ಮಕ್ಕಳು ಚೇತರಿಸಿಕೊಂಡಿದ್ದಾರೆ.
ವಾಂತಿ ಭೇದಿಯಿಂದ ಅಸ್ವಸ್ಥಗೊಂಡ ಮಕ್ಕಳ ಪಾಲಕರು, ಪೋಷಕರು, ಸಂಬಂಧಿಗಳು ಕಡು ಬಡವರಾಗಿದ್ದರಿಂದ ಆರ್ಥಿಕವಾಗಿ ಅನಾನುಕೂಲತೆ ಹೊಂದಿರುವುದರಿಂದ ಸರ್ಕಾರವೇ ಆಸ್ಪತ್ರೆಯ ಖರ್ಚು ವೆಚ್ಚವನ್ನು ಭರಿಸಬೇಕು ಹಾಗೂ ಸರ್ಕಾರದಿಂದ ಕುಡಿಯುವ ನೀರಿಗಾಗಿ ಸಾಕಷ್ಟು ಅನುದಾನವನ್ನು ಜಾರಿಗೆ ತಂದರು ಕೂಡಾ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಸಮರ್ಪಕವಾಗಿ ಬಳಕೆಯಾಗದೆ ಇರುವುದರಿಂದ ಈ ಒಂದು ದುರ್ಘಟನೆಯಾಗಿದೆ.
ಈ ಘಟನೆಗೆ ಯಾದಗಿರಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡುವಂತೆ ಆಗ್ರಹಿಸಿದರು. ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ್ ವಿಜಯಕುಮಾರ್ ಕೆ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಯಾದಗಿರಿ ಜಿಲ್ಲಾ ಪದಾಧಿಕಾರಿಗಳಾದ ಹಣಮಂತ ಕೆ ಪೇಟ ಅಮ್ಮಾಪುರ್, ನಾಗರಾಜ ಓಕಳಿ, ಧರ್ಮಣ್ಣ ಹೊಸಮನಿ, ಹೆಚ್.ಆರ್ ಬಡಿಗೇರ್,ಹಾಗೂ ಸುರಪುರ ತಾಲೂಕು ಸಂಚಾಲಕ ರಮೇಶ ಪೂಜಾರಿ, ಮುಖಂಡ ನಾಗು ಗೋಗಿಕೇರಿ, ಸದಾಶಿವ ಬೊಮ್ಮನಹಳ್ಳಿ, ಶಿವಣ್ಣ ನಾಗರಾಲಕ, ಅನಿಲ ಕುಮಾರ್, ಬಸವರಾಜ ನಾಟೇಕಾರ್, ಸೋಮು ಬಂದೊಡ್ಡಿ, ಸಾಬಣ್ಣ ಎಂಟಮನಿ, ಜಿಂದಾವಲಿ ಇತರರು ಉಪಸ್ಥಿತರಿದ್ದರು.