ಶಹಾಪುರ: ಬಸವಮಾರ್ಗ ಪ್ರತಿಷ್ಠಾನ ಪ್ರತಿ ತಿಂಗಳು ನಡೆಸುವ ಬಸವ ಬೆಳಕು ಕಾರ್ಯಕ್ರಮವನ್ನು ನಾನು ಬೆರಗು ಮತ್ತು ಆಶ್ಚರ್ಯವನ್ನುಂಟು ಮಾಡಿವೆ ಎಂದು ಅಂತರಾಷ್ಟ್ರೀಯ ಖ್ಯಾತಿಯ ಬರಹಗಾರ ಡಾ. ಕಾಶಿನಾಥ ಅಂಬಲಗಿ ನುಡಿದರು.
ಸ್ಥಳಿಯ ಬಸವ ಮಾರ್ಗ ಪ್ರತಿಷ್ಠಾನ ತಿಂಗಳ ಬಸವ ಬೆಳಕು -90 ಏರ್ಪಡಿಸಿದ್ದ ಲಿಂ.ಶರಣಬಸ್ಸಪ್ಪ ಹೊನ್ಕಲ್ ಅವರ 5 ನೇ ಪುಣ್ಯ ಸ್ಮರಣೆಯ ನಿಮಿತ್ಯ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಶರಣರು ಕಟ್ಟ ಬಯಸಿದ ಸಮಾಜ ಎಂಬ ವಿಷಯ ಕುರಿತು ಮಾತನಾಡುತ್ತ, ಹನ್ನೆರಡನೆಯ ಶತಮಾನದಲ್ಲಿ ಶರಣರು ಕಂಡುಂಡ ಸತ್ಯವನ್ನು ವಚನಗಳ ಮೂಲಕ ಬರೆದಿಟ್ಟರು. ವಚನಗಳನ್ನೇ ತಮ್ಮ ಬದುಕಾಗಿಸಿದರು. ಸಮಾಜದ ಬಹುಸಂಖ್ಯಾತ ಜನಗಳು ಓದಬಾರದು, ಬರೆಯಬಾರದು, ಕೇಳಬಾರದು ಎಂಬ ಶಾಸನಗಳಿದ್ದ ಸಂದರ್ಭದಲ್ಲಿ ಅದನ್ನು ಮೀರಿ ಜನ ಸಮುದಾಯದತ್ತ ಹೊರಟ ಶರಣರು ಸಮ ಸಮಾಜವನ್ನು ಕಟ್ಟಬಯಸಿದ್ದರು. ಶರಣರ ಆಶೋತ್ತರಗಳನ್ನು ಇಂಬಿಟ್ಟುಕೊಂಡು ಹೊರಟ ಶಹಾಪುರದ ನೆಲದಲ್ಲಿ ನಿರಂತರವಾಗಿ ವಚನ ಪ್ರಜ್ಞೆಯನ್ನು ಕಾಯ್ದುಕೊಂಡು ಹೋಗುವುದು ನಿಜಕ್ಕೂ ಸಂತಸದ ಸಂಗತಿಯಾಗಿದೆ ಎಂದವರು ಬಣ್ಣಿಸಿದರು.
ಮುಂದುವರೆದು ಮಾತನಾಡಿದ ಅವರು , ವಚನಕಾರರು ಅರಿವಿನ ಸಮಾಜವನ್ನು ಕಟ್ಟಲು ಯತ್ನಿಸಿದರು. ದುಡಿಯುವವನು ದೊಡ್ಡವನಲ್ಲ. ವೇದ ಶಾಸ್ತ್ರ ಪುರಾಣ ಬರೆದ ಪಂಡಿತರೆ ದೊಡ್ಡವನು ಎಂಬ ನಂಬಿಕೆಯನ್ನು ಅಳಿಸಿ ಹಾಕಿದರು. ಸ್ವತಃ ದೇವರು ಸಹ ಕಾಯಕ ಮಾಡಿದಾಗಲೆ ಆತ ನಮಗೆಲ್ಲ ಶ್ರೇಷ್ಠನಾಗಿ ಕಾಣುತ್ತಾನೆ ಎಂದು ಹೇಳುವ ಮೂಲಕ ಜಗತ್ತಿನಲ್ಲಿ ಇವತ್ತಿಗೂ ಘಟಿಸಲಾಗದ ಅರಿವಿನ ಸಮಾಜವನ್ನು ಶರಣರು ಕಟ್ಟಬಯಸಿದ್ದರು. ಭಾರತದ ಚರಿತ್ರೆಯಲ್ಲಿಯೆ ಮೊಟ್ಟ ಮೊದಲ ಸಲ ಕೆಳ ಸ್ಥರದ ಜನಗಳು ಒಟ್ಟೊಟ್ಟಿಗೆ ಮಾತನಾಡಲು ಶುರು ಮಾಡಿದರು.ಪ್ರಶ್ನೆ ಮಾಡುವ, ಆಧ್ಯಾತ್ಮದ ಕುರಿತು ವಿಚಾರ ಮಾಡುವ ಅವಕಾಶ ಸಿಕ್ಕಿತು. ಸೂಳೆ ಸಂಕವ್ವೆ, ದನಗಾಯಿ ರಾಮಣ್ಣನಂಥವರೂ ಮಾತಾಡಿದ್ದು ಹನ್ನೆರಡನೆಯ ಶತಮಾನದ ವೈಶಿಷ್ಟ್ಯವಾಗಿದೆ ಎಂದು ತಿಳಿಸಿದರು.
ಮೂರು ದೇಶ ನೂರೊಂದು ಅನುಭವ ಮತ್ತು ಮಾನಯ್ಯ ಗೋನಾಲರ ಹೊನ್ಕಲ್ ಕಥಾಲೋಕ ಎಂಬ ಸಿದ್ಧರಾಮ ಹೊನ್ಕಲ್ ರ ಕೃತಿಯನ್ನು ರಾಷ್ಟ್ರೀಯ ಖ್ಯಾತಿಯ ಲೇಖಕ ಡಾ. ಕಾಶಿನಾಥ ಅಂಬಲಗೆ ಬಿಡುಗಡೆ ಮಾಡಿದರು. ಈ ಎರಡೂ ಪುಸ್ತಕ ಕುರಿತು ಪತ್ರಕರ್ತ ಶಿವರಂಜನ ಸತ್ಯಂಪೇಟೆ ಮಾತನಾಡಿ, ಸಿದ್ಧರಾಮ ಹೊನ್ಕಲ್ ಅದ್ಭುತವಾಗಿ ಲಲಿತಕಲೆ ಹಾಗೂ ಪ್ರಬಂಧಗಳನ್ನು ಬರೆಯುವ, ಕಥೆ ಬರೆಯುವ ಕಥನ ಕಲೆ ಇವರಿಗೆ ಸಿದ್ದಿಸಿದೆ. ಪ್ರವಾಸ ಬರೆಯುವುದೆಂದರೆ ಇವರಿಗೆ ನೀರು ಕುಡಿದಷ್ಟು ಸಲೀಸು. ಪಂಚನದಿಗಳ ನಾಡಿನಲ್ಲಿ, ಕೃತಿಯಿಂದ ಆರಂಭಗೊಂಡ ಪ್ರವಾಸ ಕಥನ ವಿದೇಶಗಳಿಗೂ ವಿಸ್ತರಿಸಿರುವುದು ಸಂತಸ. ದೇಶ ತಿರುಗು ಕೋಶ ಓದು ಎಂಬಂತೆ ಹೊನ್ಕಲ್‍ರ ಕೃತಿ ನಮ್ಮನ್ನು ವಿದೇಶದ ಸಂಸ್ಕøತಿಯನ್ನು, ಅಲ್ಲಿನ ಇತಿಹಾಸವನ್ನು, ಪೌರಾಣಿಕ ಘಟನೆಗಳನ್ನು ಹೇಳುವ ಮೂಲಕ ಆಯಾ ದೇಶಕ್ಕೆ ನಮ್ಮನ್ನು ಕರೆದೊಯ್ಯುತ್ತದೆ ಎಂದು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದರು.
ಇದೆ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸಿದ್ಧಲಿಂಗಪ್ಪ ಆನೇಗುಂದಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಡಾ. ಚಂದ್ರಶೇಖರ ಸುಬೇದಾರ ವಹಿಸಿದ್ದರು. ಆರಂಭದಲ್ಲಿ ರಾಜು ಕುಂಬಾರ ಸ್ವಾಗತಿಸಿದರು. ಕಾಂತಮ್ಮ ಹೊನ್ಕಲ್ ದೀಪ ಮುಡಿಸುವ ಮೂಲಕ ಉದ್ಘಾಟಿಸಿದರು. ಮಹಾದೇವಪ್ಪ ಗಾಳೆನೋರ ಮತ್ತು ಚೆನ್ನಮಲ್ಲಿಕಾರ್ಜುನ ಗುಂಡಾನೋರ ವಚನ ಗಾಯನ ಮಾಡಿದರು. ವಿಶ್ವಾರಾಧ್ಯ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಣ್ಣ ಇಜೇರಿ ನಿರೂಪಿಸಿದರು. ಇದೆ ಸಂದರ್ಭದಲ್ಲಿ ಮಾನಯ್ಯ ಗೋನಾಲ ಅವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಅಡಿವೆಪ್ಪ ಜಾಕಾ, ರಾಜಾಸಾಹೇಬ ಬಾಗವಾನ್, ತಿಪ್ಪಣ್ಣ ಬಸವಕಲ್ಯಾಣ, ವಿರುಪಾಕ್ಷಿ ಸಿಂಪಿ, ಬಸವರಾಜ ಅರುಣಿ, ಗುರಣ್ಣ ಮದರಿ, ಡಾ.ಮೋನಪ್ಪ ಶಿರವಾಳ, ಹತ್ತಿ ಸರ್, ವಿಜಯ ಕುಮಾರ ಹೊನ್ಕಲ್, ರಮೇಶ ವಜ್ಜಲ, ಚಂದ್ರು ಜಾಕಾ, ಚಂದ್ರಶೇಖರ ಹಯ್ಯಾಳ, ಮಲ್ಲಿಕಾರ್ಜುನ ಪೂಜಾರಿ, ಶಿವಶರಣಪ್ಪ ಆವಂಟಿ ನೂರಾರು ಮಹಿಳೆಯರು ಭಾಗವಹಿಸಿದ್ದರು.