ಕೀಟನಾಶಕಗಳ ಸಿಂಪರಣೆ ಸಮಯದಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಿ

0
20

ಶಹಾಬಾದ: ಕೀಟನಾಶಕಗಳ ಸಿಂಪರಣೆಯಿಂದ ಜಿಲ್ಲೆಯಲ್ಲಿ ಕೆಲವೊಂದು ರೈತರಿಗೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ, ರೈತರು ಕೀಟನಾಶಕಗಳ ಸಿಂಪರಣೆ ಮುನ್ನ ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಳ್ಳಬೇಕೆಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕಾಶಿನಾಥ ದಂಡೋತಿ ತಿಳಿಸಿದ್ದಾರೆ.

ರೈತರು ಅವಧಿ ಮೀರಿದ ಪೀಡೆನಾಶಕಗಳನ್ನು ಖರೀದಿಸಬಾರದು ಮತ್ತು ಬಳಸಬಾರದು.ಪೀಡೆನಾಶಕಗಳನ್ನು ಖರೀದಿಸುವಾಗ ಪಾವತಿಯನ್ನು ಅಗತ್ಯವಾಗಿ ಪಡೆಯಿರಿ.ಸಿಂಪರಣಾ ನಾಝಲ್ ರಂಧ್ರ ಕಟ್ಟಿದಾಗ ಬಾಯಿಯಿಂದ ಊದಬೇಡಿ. ಬಾಟಲಿಯ ಮುಚ್ಚಳವನ್ನು ಎಚ್ಚರದಿಂದ ತೆಗೆಯಿರಿ. ಹೊರ ಆವರಣ (ಅಂಗಳ) ಮತ್ತು ಸರಿಯಾಗಿ ಗಾಳಿಯಾಡುವ ಪ್ರದೇಶದಲ್ಲಿ ರಾಸಾಯನಿಕಗಳನ್ನು ಮಿಶ್ರ ಮಾಡಿರಿ (ಆ ಸಮಯಕ್ಕೆ ಬೇಕಾದ ಪ್ರಮಾಣದ ವಿಷವನ್ನು ಮಾತ್ರ ಮಿಶ್ರಣ ಮಾಡಿ).ಹೆಚ್ಚಿನ ಗಾಳಿ ಒತ್ತಡದಿಂದ ಅನಗತ್ಯವಾಗಿ ಗಾಳಿಯಲ್ಲಿ ಹೋಗುವ ವಿಷವಸ್ತು ತಡೆಯಲು ಸಿಂಪರಣೆಗೆ ಸೂಕ್ತ ವಾತಾವರಣ ವಿದೆಯೋ ಇಲ್ಲವೋ ಪರೀಕ್ಷಿಸಿ.ಗಾಳಿ ಇರುವಾಗ ಪೀಡೆ ನಾಶಕಗಳನ್ನು ಮಿಶ್ರಣ ಮಾಡುವುದಾಗಲಿ ಅಥವಾ ಯಂತ್ರದಲ್ಲಿ ತುಂಬುವುದಾಗಲಿ ಮಾಡಬಾರದು.

Contact Your\'s Advertisement; 9902492681

ಎರಡು ಅಥವಾ ಎರಡಕ್ಕಿಂತ ಹೆಚ್ಚು ಕೃಷಿ ರಾಸಾಯನಿಕಗಳನ್ನು ಮಿಶ್ರಣ ಮಾಡುವಾಗ ಅವು ಯಾವುದೇ ರಾಸಾಯನಿಕ ಕ್ರಿಯೆಗೆ ಒಳಗಾಗದೆ ಹೊಂದಿಕೊಳ್ಳುವಂತಿರಬೇಕು.ನೇರವಾಗಿ ಕೈಯಿಂದ ಪೀಡೆನಾಶಕಗಳನ್ನು ಮಿಶ್ರಣ ಮಾಡಬೇಡಿರಿ ಅದಕ್ಕಾಗಿ ಕೋಲು ಉಪಯೋಗಿಸಿರಿ. ಕೃಷಿ ರಾಸಾಯನಿಕಗಳನ್ನು ಉದ್ದೇಶಿತ ಕಾರ್ಯಕ್ಕೆ ಮಾತ್ರ ಬಳಸಿರಿ.ಸಿಂಪರಣೆ ಸಮಯದಲ್ಲಿ ತಿನ್ನುವುದಾಗಲಿ, ಕುಡಿಯುವುದಾಗಲಿ ಅಥವಾ ಧೂಮ್ರಪಾನ ಮಾಡಕೂಡದು.ಪೀಡೆನಾಶಕಗಳನ್ನು ಮಕ್ಕಳು ಮಿಶ್ರಣಮಾಡದಂತೆ ತಡೆಯಿರಿ.ಗಾಳಿಯ ವಿರುದ್ಧ ದಿಕ್ಕಿನಲ್ಲಿ ಸಿಂಪರಣೆ ಅಥವಾ ಧೂಳಿಕರಣ ಮಾಡಬಾರದು.

ಮೋಡ ಹಾಗೂ ಅತಿಯಾದ ತೇವಾಂಶವಿದ್ದಲ್ಲಿ ಪೀಡನಾಶಕ ಬಳಸುವುದನ್ನು ಮುಂದೂಡಿ. ಪೀಡೆನಾಶಕವನ್ನು ನಿಗದಿತ ಪ್ರಮಾಣದಲ್ಲಿ ನೀರಿನಲ್ಲಿ ಕರಗಿಸಿ ಉಪಯೋಗಿಸಿ,ನಾವು ಸೇವಿಸುವ ದವಸಧಾನ್ಯಗಳು ಹಾಳಾದ ಪಕ್ಷದಲ್ಲಿ ಯಾವುದೇ ಕಾರಣಕ್ಕೂ ಪೀಡೆನಾಶಕ ಸಿಂಪಡಿಸಿ ಜಾನುವಾರುಗಳಿಗೆ ಹಾಕಬೇಡಿ.ಮೈಮೇಲೆ ಹುಣ್ಣು ಅಥವಾ ಗಾಯಗಳಿದ್ದಲ್ಲಿ ಪೀಡೆನಾಶಕಗಳನ್ನು ಬಳಸಬೇಡಿ.

ಪೀಡೆನಾಶಕಗಳ ಸಿಂಪರಣೆ ಅಥವಾ ಧೂಳಿಕರಣ ಮಾಡುವ ಸಮಯದಲ್ಲಿ ಒಂದು ವೇಳೆ ವಿಷಕಾರದ ದುಷ್ಪರಿಣಾಮಗಳು ವ್ಯಕ್ತಿಯಲ್ಲಿ ಕಂಡ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆ ಪಡೆಯಿರಿ.ಎಲ್ಲಾ ರೈತರು ಕಡ್ಡಾಯವಾಗಿ ಮಾಸ್ಕ್ ಹಾಗು ಕೈಗವಸು ಹಾಕಿಕೊಂಡೆ ಸಿಂಪರಣೆ ಮಾಡಬೇಕು. ಈ ರೀತಿ ನಮ್ಮ ರೈತ ಬಾಂಧವರು ಪೀಡೆನಾಶಕಗಳ ಬಳಕೆಯಲ್ಲಿ ಅನುಸರಿಸಿದ್ದಾದರೆ ತಮ್ಮ ಆರೋಗ್ಯ ಕಾಪಾಡಿಕೊಳ್ಳವದರ ಜೊತೆಗೆ ಪೀಡೆನಾಶಕಗಳ ಸಮರ್ಪಕ ಬಳಕೆಯೊಂದಿಗೆ ಪರಿಸರ ನೈರ್ಮಲ್ಯವನ್ನು ಕಾಪಾಡಿಕೊಂಡು ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here