ವಾಡಿ: ದುಡ್ಡಿಗಾಗಿ ಮೌಲ್ಯ ನೈತಿಕತೆ ಕಳೆದುಕೊಂಡು ನಟಿಸುವ ಸಿನೆಮಾ ತಾರೆಯರು ಹೀರೋಗಳಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೀವತೆತ್ತ ಕ್ರಾಂತಿಕಾರಿಗಳು ನಮ್ಮ ನಿಜವಾದ ಹೀರೋಗಳು ಎಂದು ಆಲ್ ಇಂಡಿಯಾ ಡೆಮಾಕ್ರೇಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‍ಒ) ರಾಜ್ಯ ಉಪಾಧ್ಯಕ್ಷೆ ಅಭಯ ದಿವಾಕರ್ ಹೇಳಿದರು.
ಹಳಕರ್ಟಿ ಗ್ರಾಮದಲ್ಲಿ ಎಐಡಿಎಸ್‍ಒ ವತಿಯಿಂದ ಏರ್ಪಡಿಸಲಾಗಿದ್ದ ಗ್ರಾಮೀಣ ವಿದ್ಯಾರ್ಥಿ ಶಿಬಿರ ಉದ್ದೇಶಿಸಿ ಅವರು ಮಾತನಾಡಿದರು. ಶೋಷಣೆ, ದಬ್ಬಾಳಿಕೆ, ಅನ್ಯಾಯ, ಅನಾಚಾರಗಳಿಂದ ಕೂಡಿದ ಬ್ರಿಟೀಷ್ ವ್ಯವಸ್ಥೆಯನ್ನು ಕಿತ್ತೆಸೆದು ಸಮಾಜವಾದಿ ಚಿಂತನೆಯ ಶೋಷಣೆ ರಹಿತ ಸಮಾಜ ಕಟ್ಟುವ ಗುರಿಯೊಂದಿಗೆ ಸಂಧಾನತೀತವಾಗಿ ಹೋರಾಡಿ ಹುತಾತ್ಮರಾದ ಭಗತ್‍ಸಿಂಗ್, ನೇತಾಜಿ, ಅಶ್ಪಾಖುಲ್ಲಾ ಖಾನ್, ಖುದಿರಾಮ್ ಬೋಸ್, ಚಂದ್ರಶೇಖರ ಆಜಾದ್ ರಂತಹ ಮಹಾನ್ ಕ್ರಾಂತಿಕಾರಿಗಳ ಜೀವನವನ್ನು ವಿದ್ಯಾರ್ಥಿ-ಯುವಜನರು ಆದರ್ಶವಾಗಿ ಸ್ವೀಕರಿಸಬೇಕು. ಜಾತಿ ಧರ್ಮ ತೊರೆದು ಸರ್ವ ಜನಾಂಗದ ಮುಕ್ತಿಗಾಗಿ ಹೋರಾಡುವವರೇ ನಿಜವಾದ ಹೀರೋಗಳು ಎಂಬುದನ್ನು ಅರಿಯಬೇಕು ಎಂದರು.
ಉನ್ನತ ಶಿಕ್ಷಣ ಎಂಬುದು ಹಣ ಉಳ್ಳವರ ಸ್ವತ್ತಾಗಿದೆ. ಕಲಿಕೆಗೆ ಮೀಸಲಿರುವ ಪ್ರಸಕ್ತ ಶಿಕ್ಷಣ ವ್ಯವಸ್ಥೆ ಪ್ರಜಾಸತ್ತಾತ್ಮಕವಾಗಿಲ್ಲ. ಧರ್ಮಾತೀತ ಚಿಂತನೆಗಳನ್ನು ಅದು ಹೊಂದಿಲ್ಲ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸದ ಅವೈಜ್ಞಾನಿಕ ಶಿಕ್ಷಣ ಪಡೆಯುವುದರಿಂದ ಮಕ್ಕಳು ವೈಚಾರಿಕ ಚಿಂತನೆಯಿಂದ ವಂಚಿತರಾಗುತ್ತಿದ್ದಾರೆ. ಸಿನೆಮಾ ಸಾಹಿತ್ಯದ ಮೂಲಕ ವ್ಯಾಪಕವಾಗಿ ಅಶ್ಲೀಲತೆ ಹರಡಲಾಗುತ್ತಿದೆ. ವಿದ್ಯಾರ್ಥಿ ಯುವಜನರ ನೈತಿಕ ಬೆನ್ನೆಲು ಮುರಿಯಲಾಗುತ್ತಿದೆ. ಪರಿಣಾಮ ಸಮಾಜದಲ್ಲಿ ಅತ್ಯಾಚಾರ, ಕೊಲೆ, ದೌರ್ಜನ್ಯ, ಲೈಂಗಿಕ ಕಿರುಕುಳಗಳಂತಹ ಘಟನೆಗಳು ಸಂಭವಿಸುತ್ತಿವೆ. ಇಂತಹ ಮನುಷ್ಯ ವಿರೋಧಿ ಅಸಮಾನತೆಯ ವ್ಯವಸ್ಥೆಯನ್ನು ಬದಲಿಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ವಿವರಿಸಿದರು.
ಎಐಡಿಎಸ್‍ಒ ನಗರ ಸಮಿತಿ ಅಧ್ಯಕ್ಷ ವೆಂಕಟೇಶ ದೇವದುರ್ಗ, ಕಾರ್ಯದರ್ಶಿ ಗೋವಿಂದ ಯಳವಾರ, ಸಿದ್ದಾರ್ಥ ತಿಪ್ಪನೋರ, ಜೈಭೀಮ, ಗೋದಾವರಿ ಕಾಂಬಳೆ, ಸುದೀಪ, ಮಲ್ಲಿನಾಥ, ರೇಣುಕಾ, ಚೇತನಾ, ಭಾಗ್ಯಶ್ರೀ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.