ಬೆಂಗಳೂರು; ಯಾವುದೇ ದೇಶ ಮತ್ತು ಸಮಾಜದ ಅಭಿವೃದ್ಧಿಯು ಮಹಿಳೆಯರ ಅಭಿವೃದ್ಧಿಗೆ ನೇರವಾಗಿ ಸಂಬಂಧಿಸಿದೆ, ಮಹಿಳೆಯರಿಲ್ಲದೆ ವೈಯಕ್ತಿಕ, ಕುಟುಂಬ ಮತ್ತು ಸಮಾಜದ ಅಭಿವೃದ್ಧಿಯನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.
ನಗರದ ಸೆಂಟ್ರಲ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಮೊದಲನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತವು ತನ್ನ ಇತಿಹಾಸ ಮತ್ತು ಸಂಸ್ಕøತಿಯಿಂದಾಗಿ ಇಡೀ ಪ್ರಪಂಚದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ನಮ್ಮ ದೇಶವು ಸಾಂಸ್ಕೃತಿಕ, ರಾಜಕೀಯ, ಆರ್ಥಿಕ, ಮಿಲಿಟರಿ ಶಕ್ತಿ ಇತ್ಯಾದಿಗಳಲ್ಲಿ ವಿಶ್ವದ ಪ್ರಮುಖ ದೇಶಗಳಲ್ಲಿ ಸೇರಿದೆ. ಭಾರತೀಯ ಇತಿಹಾಸದಲ್ಲಿ ಮತ್ತು ನಮ್ಮ ಧರ್ಮಗ್ರಂಥಗಳು ಮತ್ತು ಪುರಾಣಗಳಲ್ಲಿ ಮಹಿಳೆಯರಿಗೆ ಗೌರವ ನೀಡುವ ಉಲ್ಲೇಖವಿದೆ. ಲಿಂಗ ಸಮಾನತೆಯ ತತ್ವವನ್ನು ಭಾರತೀಯ ಸಂವಿಧಾನದ ಪೀಠಿಕೆ, ಮೂಲಭೂತ ಹಕ್ಕುಗಳು, ಮೂಲಭೂತ ಕರ್ತವ್ಯಗಳು ಮತ್ತು ನಿರ್ದೇಶನ ತತ್ವಗಳಲ್ಲಿ ಪ್ರತಿಪಾದಿಸಲಾಗಿದೆ. ಸಂವಿಧಾನವು ಮಹಿಳೆಯರಿಗೆ ಸಮಾನ ಸ್ಥಾನಮಾನವನ್ನು ಒದಗಿಸುತ್ತದೆ ಮತ್ತು ಮಹಿಳೆಯರ ಪರವಾಗಿ ‘ದೃಢೀಕರಣ’ ಕ್ರಮಗಳನ್ನು ಕೈಗೊಳ್ಳಲು ರಾಜ್ಯಗಳಿಗೆ ಅಧಿಕಾರ ನೀಡುತ್ತದೆ ಎಂದು ತಿಳಿಸಿದರು.
ಮಹಿಳಾ ಸಬಲೀಕರಣದ ಕೆಲಸವನ್ನು ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಬೇಟಿ ಬಚಾವೋ ಬೇಟಿ ಪಢಾವೋ, ಉಜ್ವಲ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯದಂತಹ ಅನೇಕ ಯೋಜನೆಗಳ ಮೂಲಕ ಮಾಡುತ್ತಿವೆ. ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡಲು ಮತ್ತು ಸಮಾಜ ಮತ್ತು ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಮಹಿಳಾ ಮೀಸಲಾತಿಗೆ ನಿಬಂಧನೆಗಳನ್ನು ಮಾಡಲಾಗಿದೆ ಎಂದು ಹೇಳಿದರು.
ದೇಶದ ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯಾನಂತರದ ಪ್ರಗತಿಯಲ್ಲಿ ಮಹಿಳೆಯರ ಕೊಡುಗೆ ಪ್ರಮುಖವಾಗಿದೆ. ಇಂದು ಮಹಿಳೆಯರು ವೈದ್ಯಕೀಯ, ಇಂಜಿನಿಯರಿಂಗ್, ಶಿಕ್ಷಣ, ಭದ್ರತೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಹೆಸರನ್ನು ಪ್ರಸಿದ್ಧಿಗೊಳಿಸುತ್ತಿದ್ದಾರೆ ಮತ್ತು ದೇಶ ಮತ್ತು ಸಮಾಜದ ಅಭಿವೃದ್ಧಿಯಲ್ಲಿ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ನಮ್ಮ ಆರ್ಥಿಕತೆಯು ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಅದನ್ನು ಮತ್ತಷ್ಟು ಬಲಪಡಿಸುವ ಮೂಲಕ ದೇಶವನ್ನು ವಿಶ್ವದ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡಲು ನಿರ್ಧರಿಸಲಾಗಿದೆ. ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವಲ್ಲಿ ಹಾಗೂ ಪರಿಸರ ಸಂರಕ್ಷಣೆ ಮಾಡುವಲ್ಲಿ ಮಹಿಳೆಯರ ಭಾಗವಹಿಸುವಿಕೆ ಪ್ರಮುಖವಾಗಿರುತ್ತದೆ ಎಂದರು.
2019 ರಲ್ಲಿ ಸ್ಥಾಪನೆಯಾದ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯವು ತನ್ನ ಮೊದಲ ಘಟಿಕೋತ್ಸವವನ್ನು ಆಯೋಜಿಸಿರುವುದು ಬಹಳ ಸಂತೋಷದ ವಿಷಯವಾಗಿದೆ. ಕರ್ನಾಟಕದಲ್ಲಿ ಮಹಿಳಾ ಮತ್ತು ಮಹಿಳಾ ಸಬಲೀಕರಣದ ಉನ್ನತ ಶಿಕ್ಷಣಕ್ಕಾಗಿ, ಮಹಾರಾಣಿ ಕಾಲೇಜನ್ನು ಅಂದಿನ ಮೈಸೂರು ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ತಾಯಿಯ ನೆನಪಿಗಾಗಿ ಪ್ರಾರಂಭಿಸಿದರು.
1948 ರವರೆಗೆ ಸ್ಥಾಪನೆಯಾದ ಮಹಾರಾಣಿ ಮಹಿಳಾ ಕಾಲೇಜು ಬೆಂಗಳೂರಿನಲ್ಲಿ ಮಹಿಳೆಯರಿಗೆ ವಸತಿ ಕಾಲೇಜಿನ ರೂಪದಲ್ಲಿ ಉನ್ನತ ಶಿಕ್ಷಣವನ್ನು ಒದಗಿಸುವ ಏಕೈಕ ಸಂಸ್ಥೆಯಾಗಿದೆ ಎಂದು ಗಮನಿಸುವುದು ಹರ್ಷದಾಯಕವಾಗಿದೆ. ಮಹಾರಾಣಿ ಶಿಕ್ಷಣ ಸಂಸ್ಥೆಗಳು ಒಡೆಯರ್ ಕುಟುಂಬದ ಮಾರ್ಗದರ್ಶನದಲ್ಲಿ ಮೊದಲಿನಿಂದಲೂ ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಖ್ಯಾತಿಯನ್ನು ಉಳಿಸಿಕೊಂಡಿವೆ. ಈ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರು ತಮ್ಮ ಪ್ರತಿಭೆ ಮತ್ತು ಸಾಮಥ್ರ್ಯದಿಂದ ರಾಜ್ಯ ಮತ್ತು ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ವಿದ್ಯಾರ್ಥಿನಿಯರು ಕ್ರೀಡೆ, ಸಾಂಸ್ಕೃತಿಕ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಅನೇಕ ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿರುವುದು ಪ್ರಶಂಸನೀಯ ಎಂದು ಹೇಳಿದರು.
ಶಿಕ್ಷಣ, ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೆಲಸ ಮಾಡಿದ ಶ್ರೀಮತಿ ಸುಧಾ ಮೂರ್ತಿ ಮತ್ತು ಪದ್ಮನಾಭನ್ ಬಲರಾಮ್ ಅವರಿಗೆ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿರುವುದು ಸಂತೋಷದ ವಿಷಯ. ಸಮಾಜಕ್ಕಾಗಿ ಅವರ ಸೇವೆ ನಿರಂತರವಾಗಿರಲಿ ಎಂದು ಆಶಿಸುತ್ತೇನೆ ಎಂದ ಅವರು, ಪದವಿ ಪಡೆದ ವಿದ್ಯಾರ್ಥಿನಿಯರಿಗೆ ಅಭಿನಂದಿಸಿ, ಉಜ್ವಲ ಭವಿಷ್ಯಕ್ಕಾಗಿ ಹಾರೈಸಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಎಂ.ಸಿ. ಸುಧಾಕರ್, ಸುಧಾ ಮೂರ್ತಿ, ಮುಖ್ಯ ಅತಿಥಿ ಪದ್ಮನಾಭನ್ ಬಲರಾಮ್, ಕುಲಪತಿ ಎಲ್. ಗೋಮತಿ ದೇವಿ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.