ಸುರಪುರ:ಯಾವುದೇ ಮನುಷ್ಯನು ಗರ್ಭದಲ್ಲಿರುವಾಗಿನಿಂದ ಹಿಡಿದು ಸಾವಿನ ನಂತರದ ಅಂತ್ಯಸಂಸ್ಕಾರದ ವರೆಗೆ ಆತನನ್ನು ಈ ದೇಶದ ಕಾನೂನುಗಳು ಕಾಪಾಡುತ್ತವೆ ಎಂದು ನ್ಯಾಯಾಧೀಶ ಮಲ್ಲಿಕಾರ್ಜುನ ಈಶ್ವರಪ್ಪ ಕಮತಗಿ ತಿಳಿಸಿದರು.
ನಗರದ ನ್ಯಾಯಾಲಯ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ,ತಾಲೂಕು ವಕೀಲರ ಸಂಘ,ತಾಲೂಕು ಆಡಳಿತ ಇವರುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ಪ್ರತಿಯೊಬ್ಬ ಮನುಷ್ಯನಿಗೆ ಕಾನೂನುಗಳು ತುಂಬಾ ಅಗತ್ಯವಾಗಿವೆ,ಇಂದು ಎಲ್ಲರು ಕಾನೂನುಗಳ ಅಡಿಯಲ್ಲಿಯೇ ಜೀವಿಸಬೇಕಾಗಿದೆ,ಅದರಿಂದಾಗಿಯೆ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯನ್ನು 1985ರ ನವೆಂಬರ್ 9 ರಂದು ಆರಂಭಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮತ್ತೋರ್ವ ನ್ಯಾಯಾಧೀಶ ಮಾರುತಿ ಕೆ ಅವರು ಮಾತನಾಡಿ,ಜನ ಸಾಮಾನ್ಯರಿಗೆ ಕಾನೂನಿನ ಅರಿವು ಮೂಡಿಸುವುದು,ಜನರಿಗೆ ಕಾನೂನಿನ ನೆರವು ನೀಡುವುದು,ಲೋಕ ಅದಾಲತ್ ಮೂಲಕ ನ್ಯಾಯಾಲಯ ಅಥವಾ ಇತರೆ ಕಚೇರಿಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸುವುದು,ಕಾನೂನು ಅರಿವು ನೆರವು ಕಾರ್ಯಕ್ರಮವೂ ಕೂಡ ಈ ರಾಷ್ಟ್ರೀಯ ಕಾನೂನುಗಳ ಅಧಿನಿಯಮಗಳಲ್ಲಿಯೇ ಬರುತ್ತದೆ ಎಂದು ತಿಳಿಸಿದರು.
1987ರ ಕಾನೂನು ಅಧಿನಿಯಮದ ಪ್ರಕಾರ ಕಾನೂನಿನ ನೆರವು ಪಡೆಯಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು,ಮಾನಸಿಕ ಅಶ್ವಸ್ಥ ವ್ಯಕ್ತಿಗಳು,ಕೈಗಾರಿಕೆಗಳ ಕಾರ್ಮಿಕರು,ಮಹಿಳೆ ಮತ್ತು ಮಕ್ಕಳು ಉಚಿತ ಕಾನೂನಿನ ನೆರವು ಪಡೆಯಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಿರಿಯ ವಕೀಲ ನಿಂಗಣ್ಣ ಚಿಂಚೋಡಿ ರಾಷ್ಟ್ರೀಯ ಕಾನೂನು ಸೇವೆಗಳ ಕುರಿತು ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ತಾಲೂಕು ಅಧ್ಯಕ್ಷ ರಮಾನಂದ ಕವಲಿ ಮಾತನಾಡಿದರು.ವೇದಿಕೆ ಮೇಲೆ ಸಹಾಯಕ ಸರ್ಕಾರಿ ಅಭಿಯೋಜಕರಾದ ಸುರೇಶ ಪಾಟೀಲ್,ಮರೆಪ್ಪ ಹೊಸ್ಮನಿ ಇದ್ದರು.ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನಂದಕುಮಾರ ಕನ್ನೆಳ್ಳಿ ನಿರೂಪಿಸಿದರು,ಸಂತೋಷಕುಮಾರ ಗಾರಂಪಳ್ಳಿ ವಂದಿಸಿದರು.ಕಾರ್ಯಕ್ರಮದಲ್ಲಿ ಅನೇಕ ಜನ ವಕೀಲರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.