ಕಲಬುರಗಿ: ಕಾಟಾಚಾರದ ಬೆಳೆ ಪರಿಹಾರ ಬೇಡ, ಬರಲಗಾಲದಿಂದ ಬದುಕು ಬರಡಾಗಿದ್ದು, ಕೂಡಲೇ ರೈತರ ಸಾಲಮನ್ನಾ ಮಾಡುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ವಿಪಕ್ಷ ನಾಯಕ ಆರ್. ಅಶೋಕ ಅವರ ಮುಂದೆ ರೈತರು ಬೇಡಿಕೆಯಿಟ್ಟು ಅಳಲು ತೋಡಿಕೊಂಡರು.
ತಾಲೂಕಿನ ಕಡಗಂಚಿ ಗ್ರಾಮದ ಹೊಲಗಳಿಗೆ ಬರ ವೀಕ್ಷಣೆಗೆ ಆಗಮಿಸಿದ್ದ ವೇಳೆ ಬಿಜೆಪಿ ರೈತ ಮೋರ್ಚಾ ಮುಖಂಡರು ಹಾಗೂ ರೈತರು ಸೇರಿ ಬೇಡಿಕೆಯ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಡಗಂಚಿ ಹಿರಿಯ ರೈತ ದೇವಿಂದ್ರಪ್ಪ ಡೆಂಕಿ ಎಂಬುವರು, ಸಾಲಮನ್ನಾ ಮಾಡಿ ಪರಿಹಾರ ಕೊಡಬೇಕು. ಪರಿಹಾರಕ್ಕಾಗಿ ಸಲ್ಲಿಸುವ ಕಾಗದ ಪತ್ರದ ಸಂಗ್ರಹಿಸಿಕೊಡಲು ಸಾಕಾಗದು, ಸಾಲಮನ್ನಾ ಮಾಡುವಂತಾಗಬೇಕು ಎಂದರು.
ರೈತ ರೇವಣಸಿದ್ಧ ಅವರು ಮುಂಗಾರು ಬೆಳೆ ಹಾಳಾಗಿ ಹೋದರು ಇನ್ನೂ ಬೆಳೆ ಪರಿಹಾರ ಬಂದ್ರಿಲ್ರಿಯಪ್ಪ, ಬೀಜ, ಗೊಬ್ಬರಕ್ಕೆ ಹಣ ಖರ್ಚಾಗಿ ಕೈಯಲ್ಲಿ ಕಾಸಿಲ್ಲದೆ ಸಂಸಾರ ನಡೆಸುವುದು ಕಷ್ಟವಾಗಿದೆ. ನೀರಿಲ್ಲದಕ್ಕೆ ಕಬ್ಬು ಒಣಗಿ ಹೋಗಿದೆ. ಸಾಲನ್ನಾ ಮಾಡಬೇಕು ಎಂದು ಆರ್. ಅಶೋಕ ಅವರ ಮುಂದೆ ಹೇಳಿಕೊಂಡರು.
ಬಸವರಾಜ ಬಿರಾದಾರ ನೆಲ್ಲೂರ ಅವರು, ಪಂಪಸೆಟ್ ರೈತರಿಗೆ ವಿದ್ಯುತ ಸಮಸ್ಯೆ ನಿವಾರಿಸುತ್ತಿಲ್ಲ. ಟಿಸಿ ಸುಟ್ಟರೆ ರೈತರ ಖರ್ಚಿನಲ್ಲೇ ದುರಸ್ಥಿ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಟಿಸಿಗಳ ಮೇಲೆ ಬಾರ ಹೆಚ್ಚಾಗಿ ಪದೇ ಪದೇ ಟ್ರಿಪ್ ಆಗುತ್ತಿದೆ. ಜೆಸ್ಕಾಂನವರು ಸರಿಪಡಿಸಲು ಎಲ್‍ಸಿ ತೆಗೆದುಕೊಂಡ ಒಂದೆರಡು ಗಂಟೆ ತಡವಾಗುತ್ತದೆ. ಪದೇ ಪದೇ ಟಿಸಿ ಸುಡುತ್ತಿವೆ. ಸುಟ್ಟ ಟಿಸಿ ದುರಸ್ಥಿಗೆ ರೈತರೆ ಖರ್ಚು ಕೊಡಬೇಕು ಎನ್ನುತ್ತಿದ್ದಾರೆ. ಹೀಗಾದರೆ ರೈತರಿಗೆ ದಾರಿ ತೋರದಂತಾಗಿದೆ ಎಂದು ಹೇಳಿಕೊಂಡರು.
ಇನ್ನೊರ್ವ ರೈತ ವಿಠ್ಠಲ ಜಮಾದಾರ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕೃಷಿ ಮತ್ತು ವಿದ್ಯುತ್ ಪೂರೈಕೆ ಕಚೇರಿಗಳ ಸ್ಪಂದನೆಯಿಲ್ಲವಾಗಿದೆ. ಮಳೆ ಕೈಕೊಟ್ಟಿದೆ. ಸ್ಪಿಂಕ್ಲರ್ ಕೇಳಿದರೆ ಅಧಿಕಾರಿಗಳು ಶಾಸಕರ ಹಿಂಬಾಲಕರಿಗೆ ಕೊಡುತ್ತಿದ್ದಾರೆ ಅಂದಾದುಂದಿ ನಡೆದಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಕಾರ್ಯಾಧ್ಯಕ್ಷ ಆಧಿನಾಥ ಹೀರಾ, ಕಾರ್ಯದರ್ಶಿ ಶರಣು ಮುರಮೆ ಹೋದಲೂರ ನೇತೃತ್ವದಲ್ಲಿ ಅನೇಕರು ಆರ್ ಅಶೋಕ ಅವರ ಮುಂದೆ ಬರ ಪರಿಸ್ಥಿತಿ ಮತ್ತು ನಿವಾರಣೆಗೆ ಸರ್ಕಾರದ ಮೇಲೆ ಒತ್ತಡ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ವಿಪಕ್ಷ ನಾಯಕ ಆರ್. ಅಶೋಕ ಅವರು, ರೈತರ ಮತ್ತು ಸ್ಥಳೀಯ ಮುಖಂಡರ ಹೇಳಿಕೊಂಡ ರೈತರ ಸಮಸ್ಯೆಗಳನ್ನು ಸಮಾದಾನದಿಂದ ಆಲಿಸಿದರು ಅಲ್ಲದೆ ಬೇಡಿಕೆಯ ಮನವಿ ಸ್ವೀಕರಿಸಿದ ಅವರು, ಇದಕ್ಕೆ ಅಧಿವೇಶನದಲ್ಲಿ ಧ್ವನಿ ಎತ್ತು ಕ್ರಮಕ್ಕೆ ಒತ್ತಾಯಿಸಿ ನ್ಯಾಯಕ್ಕಾಗಿ ಬಿಜೆಪಿ ಹೋರಾಡಲು ರೈತರ ಬೆನ್ನಿಗಿದೆ ಎಂದು ಅವರು ಹೇಳಿದರು.