ಕಲಬುರಗಿ: KRIDL ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ದಿ ನಿಗಮ ಅಡಿಯಲ್ಲಿ ಒಟ್ಟು 2000 ಕಾಮಗಾರಿ ನಡೆಸಿರುವ ಬಗ್ಗೆ ತನಿಖೆ ನಡೆಸಬೇಕಿದೆ. ಕೇವಲ 5 % ಆಡಿಟ್ ಮಾಡಿದಕ್ಕೆ 400 ಕೋಟಿ ಭ್ರಷ್ಟಾಚಾರ ಕಂಡು ಬಂದಿದೆ. KRIDL ನಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತಂತೆ ಜಸ್ಟಿಸ್ ನಾಗಮೋಹನ ದಾಸ್ ಸಮಿತಿ ತನಿಖೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
KRIDL, KEONICS ಸಂಸ್ಥೆಯನ್ನು ಸರಿದಾರಿಗೆ ತರಲು ಕನಿಷ್ಠ ಒಂದು ಆರ್ಥಿಕ ವರ್ಷ ಬೇಕಾಗುತ್ತದೆ. ಭ್ರಷ್ಟಾಚಾರಿಗಳನ್ನು ಕ್ಷಮಿಸುವುದಿಲ್ಲ ಎಂದರು.
ಪ್ರಸಕ್ತ ವರ್ಷ ಹಸಿ ಬರಗಾಲ ಆವರಿಸಿ ಜಿಲ್ಲೆಯಾದ್ಯಂತ ಎಲ್ಲಾ ತಾಲೂಕು ಬರಪೀಡಿತ ತಾಲೂಕು ಘೋಷಿಸಲಾಗಿದೆ. ಜಿಲ್ಲೆಯಾದ್ಯಂತ ಎಲ್ಲಿಯೂ ಕುಡಿಯುವ ನೀರು, ಮೇವು ತೊಂದರೆಯಾಗದಂತೆ ತಹಶೀಲ್ದಾರರು, ತಾಲೂಕ ಪಂಚಾಯತ್ ಇ.ಓ ಗಳು ವಿಶೇಷ ಗಮನ ಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕುಡಿಯುವ ನೀರು, ಮೇವು ಕುರಿತಂತೆ ಕಂಟಿಜೆನ್ಸಿ ಪ್ಲ್ಯಾನ್ ಸಿದ್ದಪಡಿಸಿಕೊಂಡು ಪ್ರಸ್ತಾವನೆ ಸಲ್ಲಿಸಬೇಕು. ಕಂಟಿಜೆನ್ಸ್ ಪ್ಲ್ಯಾನ್ ಇಲ್ಲದಿದ್ದರೆ ಹಣ ಬಿಡುಗಡೆಯಾಗುವುದಿಲ್ಲ. ಈಗಾಗಲೆ ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ ಹಣ ಲಭ್ಯ ಇದ್ದು, ಇದನ್ನು ಬಳಸುವಂತೆ ಸೂಚಿಸಿದರು.
ತಹಶೀಲ್ದಾರರು 15 ದಿನಕ್ಕೊಮ್ಮೆ ಕುಡಿಯುವ ನೀರಿನ ಕುರಿತು ಪರಿಶೀಲನೆ ಮಾಡಬೇಕು. ಪ್ರತಿಯೊಂದಕ್ಕು ಸರ್ಕಾರದ ಅದೇಶ ಕಾಯದೆ ಕುಡಿಯುವ ನೀರು ಒದಗಿಸುವತ್ತ ಗಮನಹರಿಸಬೇಕು ಎಂದರು.
ಶಾಸಕ ಎಂ.ವೈ.ಪಾಟೀಲ ಮಾತನಾಡಿ ಅಫಜಲಪೂರ ತಾಲೂಕಿನಲ್ಲಿ 28 ಗ್ರಾಮಗಳ ಕುಡಿಯುವ ನೀರು ಯೋಗ್ಯವಲ್ಲ ಎಂದು ವರದಿ ಇದೆ. 65 ಆರ್.ಓ ಪ್ಲ್ಯಾಂಟ್ ಪೈಕಿ 32 ಚಾಲ್ತಿಯಲ್ಲಿವೆ ಎಂದಾಗ, ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ ಇದು ಅಲ್ಪ ಮಾಹಿತಿ. ರಾಜ್ಯದಾದ್ಯಂತ 18 ಸಾವಿರ ಪೈಕಿ ಕೇವಲ 3 ಸಾವಿರ ಚಾಲ್ತಿಯಲ್ಲಿವೆ ಎಂದರು.