ಸುರಪುರ: ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿನ ಮೂರು ಜಿಲ್ಲೆಗಳಲ್ಲಿ ಕುರುಬ ಸಮುದಾಯವನ್ನು ಎಸ್.ಟಿ ಗೆ ಸೇರಿಸಲು ಆಗ್ರಹಿಸಿ ಎಲ್ಲಾ ಜಿಲ್ಲೆಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕುರುಬ ಸಮುದಾಯದ ಹಿರಿಯ ಮುಖಂಡ ಶಿವರಾಯ ಕಾಡ್ಲೂರ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,ಕರ್ನಾಟಕ ಪ್ರದೇಶ ಕುರುಬರ ಸಂಘದ ನೇತೃತ್ವದಲ್ಲಿ ಸುರಪುರ ನಗರದಲ್ಲಿ ಜನೆವರಿ 4 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ,ಅಂದು ನಗರದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಆವರಣ ದಿಂದ ದರಬಾರ ರಸ್ತೆ ಮಾರ್ಗವಾಗಿ ಮಹಾತ್ಮ ಗಾಂಧಿ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಮಹಾತ್ಮ ಗಾಂಧಿ ವೃತ್ತದಲ್ಲಿ ಬಹಿರಂಗ ಸಮಾವೇಶ ನಡೆಸಿ ಕೇಂದ್ರ ಸರಕಾರ ಗೊಂಡ ಕುರುಬ ಕಾಡು ಕುರಬ ಜೇನು ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದೆ,ಆದರೆ ಈ ಭಾಗದ ಜಿಲ್ಲೆಗಳಲ್ಲಿರುವ ಕುರುಬ ಸಮುದಾಯ ಆ ಭಾಗದ ಗೊಂಡ ಕುರುಬ ಎಲ್ಲವೂ ಒಂದೇ ಆಗಿದೆ,ಆದರೆ ಗೊಂಡ ಕುರುಬಕ್ಕೆ ಎಸ್.ಟಿ ಪ್ರಮಾಣ ಪತ್ರ ನೀಡುತ್ತಿದ್ದು,ಈ ಭಾಗದ ಕುರುಬ ಸಮುದಾಯಕ್ಕೂ ಎಸ್.ಟಿ ಎಂದು ಪರಿಗಣಿಸಬೇಕು ಎಂದು ಹೊರಾಟದ ಮೂಲಕ ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಜನೆವರಿ 4 ರಂದು ನಡೆಯುವ ಪ್ರತಿಭಟನೆಯಲ್ಲಿ ಸಾವಿರಾರು ಜನರು ಭಾಗವಹಿಸಿ ಎಸ್.ಟಿ ಪ್ರಮಾಣ ಪತ್ರಕ್ಕಾಗಿ ಸರಕಾರಕ್ಕೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಹೋರಾಟದ ಕರ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡ ರಂಗನಗೌಡ ಪಾಟೀಲ್ ದೇವಿಕೇರ ಮಾತನಾಡಿದರು.ಮುಖಂಡರಾದ ಕಾಳಪ್ಪ ಕವಾತಿ,ರವಿಚಂದ್ರ ಆನಂದ ಸಾಹುಕಾರ,ಭೀರಲಿಂಗ ಬಾದ್ಯಾಪುರ,ಕೃಷ್ಣಾ ಬಾದ್ಯಾಪುರ,ನಿಂಗಣ್ಣ ಕಾಡ್ಲೂರ,ರಾಘವೇಂದ್ರ ಮಾಚಗುಂಡಾಳ,ಗಾಳೆಪ್ಪ ಹಾದಿಮನಿ,ನಿಂಗೂ ಐಕೂರ ಸೇರಿದಂತೆ ಹಲವರು ಇದ್ದರು.