ಸರ್ಕಾರದ ಆದೇಶ ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಲು ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ

0
34

ಬೆಂಗಳೂರು: ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ವಾರಕ್ಕೊಮ್ಮೆ ಕಡ್ಡಾಯವಾಗಿ ತಾಲ್ಲೂಕು ಕೇಂದ್ರಗಳಿಗೆ ಹಾಗೂ ಗ್ರಾಮ ಪಂಚಾಯತಿ ಕಚೇರಿಗಳಿಗೆ ಭೇಟಿ ನೀಡಬೇಕೆಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಸೂಚಿಸಿದರು.

ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಸಚಿವರು ಇಂದು ಬೆಂಗಳೂರಿನಿಂದ (2024 ಜನವರಿ 02) ವಿಡಿಯೊ ಸಭೆ ನಡೆಸಿ ಜಿಲ್ಲೆಗಳಲ್ಲಿ ಆಗಿರುವ ಪ್ರಗತಿ ಪರಿಶೀಲಿಸಿ ಸೂಚನೆ, ಸಲಹೆಗಳನ್ನು ನೀಡಿದರು.

Contact Your\'s Advertisement; 9902492681

ಗ್ರಾಮೀಣ ಭಾಗದಲ್ಲಿ ಸರ್ಕಾರದ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವಲ್ಲಿ ಮಹತ್ತರ ಪಾತ್ರವಹಿಸಿರುವ ಜಿಲ್ಲಾ ಪಂಚಾಯತಿ ಅಧಿಕಾರಿಗಳು ಕ್ಷೇತ್ರ ಮಟ್ಟದಲ್ಲಿ ಯೋಜನೆಗಳ ಆಶಯ ಹಾಗೂ ಅವುಗಳ ಅಗತ್ಯತೆ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಿದ್ದಲ್ಲಿ ಕಾರ್ಯಕ್ರಮಗಳನ್ನು ಮತ್ತಷ್ಟು ಜನಸ್ನೇಹಿಯಾಗಿ ರೂಪಿಸಲು ಅನುಕೂಲವಾಗಬಲ್ಲದು ಎಂದು ಸಚಿವರು ಹೇಳಿದರು.

ಕೆಲವು ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸರ್ಕಾರದ ಆದೇಶ ಸೂಚನೆಗಳಿಗೆ ಮಹತ್ತ್ವ ನೀಡದೆ, ತಮ್ಮದೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಸರ್ಕಾರದ ಆದೇಶಗಳನ್ನು ಪಾಲಿಸದೇ ಇರುವ ಅಧಿಕಾರಿಗಳಿಗೆ ನೋಟಿಸು ಜಾರಿ ಮಾಡಲು ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.

ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಇನ್ನಿತರ ಅಧಿಕಾರಿಗಳ ವಿರುದ್ಧ ಇರುವ ಇಲಾಖಾ ತನಿಖೆಗಳು ಹಾಗೂ ಲೋಕಾಯುಕ್ತ ತನಿಖೆಗಳ ಸಂಬಂಧದಲ್ಲಿ ತ್ವರಿತ ಕ್ರಮ ಆಗದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸಚಿವರು ವಿಳಂಬ ಮಾಡದೆ ಕ್ರಮ ಕೈಗೊಂಡು ಪ್ರಕರಣಗಳಿಗೆ ಅಂತ್ಯ ಹಾಡಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿದರು. 253 ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, 130 ಪಂಚಾಯತಿ ಕಾರ್ಯದರ್ಶಿಗಳು ಹಾಗೂ ಇತರ 32 ಸಿಬ್ಬಂದಿ ವಿರುದ್ಧ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಇಲಾಖಾ ತನಿಖೆ ಬಾಕಿಯಿದೆ.

14 ಹಾಗೂ 15ನೆ ಹಣಕಾಸು ಆಯೋಗದ ಅನುದಾನದಲ್ಲಿ ಬಾಕಿ ಇರುವ ಕಾಮಗಾರಿಗಳ ವಿವರಗಳನ್ನು ಪರಿಶೀಲಿಸಿದ ಸಚಿವರು ಕೆಲವು ಜಿಲ್ಲೆಗಳಲ್ಲಿ ಪ್ರಗತಿ ಕುಂಠಿತವಾಗಿರುವುದನ್ನು ಗಮನಿಸಿ ತಕ್ಷಣವೆ ಕಾಮಗಾರಿಗಳನ್ನು ಚುರುಕುಗೊಳಿಸಿ ಮುಂದಿನ ಮೂರು ತಿಂಗಳ ಅವಧಿಯಲ್ಲಿ ಅನುದಾನವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಂತೆ ಸೂಚನೆ ನೀಡಿದರು.

ಸುಸಜ್ಜಿತ ಕಟ್ಟಡಗಳನ್ನು ಹೊಂದಿಲ್ಲದ ಗ್ರಾಮ ಪಂಚಾಯತಿ ಕಚೇರಿಗಳಿಗೆ ಕಟ್ಟಡ ನಿರ್ಮಾಣಕ್ಕಾಗಿ ತಲಾ 20 ಲಕ್ಷ ರೂ. ಅನುದಾನ ನೀಡಲಾಗುತ್ತಿದ್ದು, ಕಟ್ಟಡ ನಿರ್ಮಾಣದ ಪ್ರಗತಿಯನ್ನು ಸಚಿವ ಪ್ರಿಯಾಂಕ್‌ ಖರ್ಗೆ ಪರಿಶೀಲಿಸಿದರು. 247 ಗ್ರಾಮ ಪಂಚಾಯತಿ ಕಟ್ಟಡ ನಿರ್ಮಾಣಕ್ಕೆ ಮಂಜಾರಾತಿ ನೀಡಲಾಗಿದ್ದು ಈ ಪೈಕಿ 283 ಕಟ್ಟಡಗಳು ನಿರ್ಮಾಣಗೊಂಡಿವೆ, 151 ಕಟ್ಟಡಗಳ ನಿರ್ಮಾಣ ವಿವಿಧ ಹಂತಗಳಲ್ಲಿವೆ, 22 ಗ್ರಾಮಗಳಲ್ಲಿ ನಿವೇಶನ ಲಭ್ಯವಾಗಬೇಕಾಗಿದೆ ಎಂದು ಸಚಿವರ ಗಮನಕ್ಕೆ ತರಲಾಯಿತು.

ರಾಜ್ಯದ ಗ್ರಾಮ ಪಂಚಾಯತಿ ಕಚೇರಿಗಳಲ್ಲಿ 46655 ಸಿಬ್ಬಂದಿಯಿದ್ದು, ಇಲ್ಲಿಯವರೆವಿಗೂ ಶೇ 63ರಷ್ಟು ಮಂದಿ ಮಾತ್ರ ಇ-ಹಾಜರಿಯನ್ನು ಬಳಸುತ್ತಿರುವುದನ್ನು ಗಮನಿಸಿದ ಸಚಿವರು ಕೂಡಲೇ ನೂರಕ್ಕೆ ನೂರರಷ್ಟು ಸಿಬ್ಬಂದಿಯನ್ನು ಇ ಹಾಜರಾತಿ ತೆಕ್ಕೆಗೆ ತರಲು ಹೇಳಿದರಲ್ಲದೆ, ಈ ವ್ಯವಸ್ಥೆಗೆ ಬಾರದ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಲೂವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಇ-ಸ್ವತ್ತು ದಾಖಲೆಗಳ ವಿತರಣೆಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಸಚಿವ ಪ್ರಿಯಾಂಕ್‌ ಖರ್ಗೆ ಆಕ್ಷೇಪ ವ್ಯಕ್ತಪಡಿಸಿ ಜನೋಪಯೋಗಿ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ಆದ್ಯತೆ ನೀಡುವಂತೆ ನೌಕರರನ್ನು ಸಜ್ಜುಗೊಳಿಸಲು ನಿರ್ದೇಶನ ನೀಡಿದರು.

ರಾಜ್ಯದಾದ್ಯಂತ 4000 ಕೂಸಿನಮನೆ ಘಟಕಗಳನ್ನು ಆರಂಭಿಸುವ ಉದ್ದೇಶವಿದ್ದು, ಗ್ರಾಮೀಣ ದುಡಿಯುವ ಮಹಿಳೆಯರಿಗೆ ಅನುಕೂಲವಾಗುವ ಈ ಕಾರ್ಯಕ್ರಮವನ್ನು ನರೇಗ ಅಡಿ ಕಾರ್ಯಗತಗೊಳಿಸಲಾಗುತ್ತಿದೆ, ಆದಷ್ಟು ತ್ವರಿತವಾಗಿ ತರಬೇತಿ ಮುಂತಾದ ಪ್ರಕ್ರಿಯೆಗಳನ್ನು ಮುಗಿಸಬೇಕೆಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ಬಾಪೂಜಿ ಸೇವಾಕೇಂದ್ರಗಳಿಂದ ಗ್ರಾಮೀಣ ಜನರಿಗೆ ಸಾಕಷ್ಟು ಪ್ರಯೋಜನ ದೊರೆತಿದ್ದು ಮತ್ತಷ್ಟು ಸೌಲಭ್ಯಗಳು ಈ ಕೇಂದ್ರಗಳಲ್ಲಿ ಲಬ್ಯವಾಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರಿಗೆ ತಿಳಿಸಲಾಯಿತು.

ಸಭೆಯಲ್ಲಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹೇಶ್ವರನ್‌, ಪ್ರಧಾನ ಕಾರ್ಯದರ್ಶಿ ಅಂಜುಂ ಪರವೇಜ್‌, ಆಯುಕ್ತರಾದ ಪ್ರಿಯಾಂಕಾ ಮೆರಿ ಫ್ರಾನ್ಸಿಸ್‌, ಪಿ.ಪ್ರದೀಪ್‌, ಪವನ್‌ ಕುಮಾರ್‌, ರಾಜ್ಯದ ಎಲ್ಲಾ ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪಾಲ್ಗೊಂಡಿದ್ದರು. ನರೆಗಾ ವಿಭಾಗದವರು ಹೊರ ತಂದಿರುವ ವಾರ್ಷಿಕ ದಿನಚರಿಯನ್ನು ಸಚಿವರು ಬಿಡುಗಡೆ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here