ವಾಡಿ: ರಾಮ ಜನ್ಮಭೂಮಿ ಅಯೋಧ್ಯ ನಗರದಲ್ಲಿ ನೂತನವಾಗಿ ನಿರ್ಮಿಸಲಾದ ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣವೆಂದು ನಾಮಕರಣ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮವನ್ನು ಮಹರ್ಷಿ ವಾಲ್ಮೀಕಿ ಸಮಾಜದ ಚಿತ್ತಾಪುರ ತಾಲೂಕು ಅಧ್ಯಕ್ಷ, ಬಿಜೆಪಿ ಹಿರಿಯ ಮುಖಂಡ ಭೀಮರಾವ ದೊರೆ ಸ್ವಾಗತಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಬಹು ವರ್ಷಗಳ ಕನಸ್ಸಾಗಿದ್ದ ಅಯೋಧ್ಯ ರಾಮ ಮಂದಿರ ಬಹುತೇಕ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧವಾಗಿರುವುದು ಹರ್ಷದ ಸಂಗತಿಯಾಗಿದೆ. ಶ್ರೀರಾಮನ ಮೂರ್ತಿ ಸ್ಥಾಪನೆಯ ಸಂದರ್ಭದಲ್ಲೇ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯ ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ಘೋಷಿಸಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ.
ರಾಮಾಯಣ ಮಹಾಕಾವ್ಯವನ್ನು ರಚಿಸಿ ಇಡೀ ಜಗತ್ತಿಗೆ ಶ್ರೀರಾಮಚಂದ್ರನ ದರ್ಶನ ಮಾಡಿಸಿರುವ ಮಹರ್ಷಿ ವಾಲ್ಮಿಕಿ ಋಷಿಗಳ ಪಾಂಡಿತ್ಯಕ್ಕೆ ಕೇಂದ್ರ ಸರ್ಕಾರ ಗೌರವ ನೀಡಿರುವುದು ನಿಜಕ್ಕೂ ಶ್ಲಾಘನಿಯ ಕಾರ್ಯ ಎಂದು ಪ್ರತಿಕ್ರೀಯಿಸಿದ್ದಾರೆ.