ನಿರಂತರವಾಗಿ ಶರಣಬಸವರು ಕಾಪಾಡುತ್ತಿದ್ದಾರೆ

0
66

ಮಹಾದಾಸೋಹಿ ಶರಣಬಸವೇಶ್ವರರು ತಮ್ಮ ನಂಬಿದವರನ್ನು ನಿರಂತರವಾಗಿ ಕಾಪಾಡುತ್ತಲೆ ಇದ್ದಾರೆ ಎಂದು ಶರಣಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಪ್ರೊ. ಗೀತಾ ಹರವಾಳ ಹೇಳಿದರು.

ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ ೪೦ ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಶುಕ್ರವಾರ ’ಮಹಾದಾಸೋಹಿ ಶರಣಬಸವರ ಶಿವಲೀಲೆಗಳ’ ಕುರಿತು ಉಪನ್ಯಾಸ ನೀಡಿದರು.

Contact Your\'s Advertisement; 9902492681

ಶರಣಬಸವರ ಭಕ್ತಳೊಬ್ಬಳಿಗೆ ಗಂಡನ ಮನೆಯಲ್ಲಿ ಬಹಳ ತೊಂದರೆ ಕೊಡುತ್ತಿದ್ದರು. ಗಂಡ ಮಾತ್ರ ಒಳ್ಳೆಯವನಾಗಿದ್ದರಿಂದ ಎಲ್ಲ ಕಷ್ಟಗಳನ್ನು ಸಹಿಸಿಕೊಂಡು ಸುಮ್ಮನಾಗಿದ್ದಳು. ಅವಳ ಅತ್ತೆ ಹೇಗಾದರೂ ಮಾಡಿ ಈಕೆಯಿಂದ ತನ್ನ ಮಗನನ್ನು ದೂರ ಮಾಡಬೇಕೆಂಬ ಉದ್ದೇಶದಿಂದ ಅವಳ ಮೇಲೆ ಒಡವೆಗಳ ಕಳ್ಳತನದ ಆರೋಪ ಹೊರಿಸುತ್ತಾರೆ. ಅವಳು ’ ನಾನು ತೆಗೆದುಕೊಂಡಿಲ್ಲ, ಶರಣರ ಆಣೆಯಿಟ್ಟು ಹೇಳುತ್ತೇನೆ. ನಿಮ್ಮ ಯಾವ ಪರೀಕ್ಷೆಗೂ ನಾನು ಸಿದ್ಧ’ ಎನ್ನುತ್ತಾಳೆ. ಅತ್ತೆಮಾವಂದಿರೂ ಮನೆಯವರೆಲ್ಲ ಕೂಡಿ ಕುದಿಯುವ ಎಣ್ಣೆ ತಂದು ’ ಇದರೊಳಗೆ ಕೈಯಿಡು, ಸುಡಲಿಲ್ಲವೆಂದರೆ ನೀನು ಕದ್ದಿರುವದಿಲ್ಲವೆಂದು ತಿಳಿಯುತ್ತೇವೆ’ ಎನ್ನುತ್ತಾರೆ. ಆಗ ಅವಳು ’ ಯಪ್ಪಾ ಶರಣಾ, ನನ್ನನ್ನು ಕಾಪಾಡು’ ಎನ್ನುತ್ತಾ ತನ್ನ ಕೈಯನ್ನು ಕುದಿಯುವ ಎಣ್ಣೆಯೊಳಗೆ ಇಡುತ್ತಾಳೆ. ಕತಕತ ಕುದಿಯುವ ಆ ಎಣ್ಣೆ ತಣ್ಣನೆಯ ನೀರಾಗುತ್ತದೆ. ಕಣ್ಣಾರೆ ಕಂಡ ಅವರೆಲ್ಲರೂ ತಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತಾರೆ.

ಒಂದು ಸಲ ಮಕ್ಕಳಿಲ್ಲದ ಮುದುಕಿಯೋರ್ವಳು ಸಾವಿರ ರೂಪಾಯಿ ಹಿಡಿದು ಬಂದು ’ ಯಪ್ಪಾ ಸಾವಿರ ತಂದಿದ್ದೇನೆ. ಗಂಡುಮಗ ಕೊಡಪ್ಪಾ’ ಎಂದು ಬೇಡಿಕೊಂಡಳು. ಶರಣರಿಗೆ ಚಿಂತೆ, ಆ ತಾಯಿಗೆ ಹಡೆಯುವ ವಯಸ್ಸಿಲ್ಲ, ಮುಪ್ಪು ಆವರಿಸಿದೆ ಏನೂ ಮಾಡಲಿ ಎಂಬ ಚಿಂತೆಯಲ್ಲಿದ್ದಾಗ ಅವರ ಮಗ್ಗಲಲ್ಲಿಯೇ ಆದಿ ದೊಡ್ಡಪ್ಪ ಶರಣರ ಮತ್ತು ನೀಲಮ್ಮ ತಾಯಿಯವರ ಗಂಡುಮಗು ಕಾಲು ಬಡಿಯುತ್ತ ಮಲಗಿತ್ತು. ಶರಣರ ಒಳಚಿಂತೆ ಅದಕ್ಕರ್ಥವಾಯಿತೋ ಎನ್ನುವಂತೆ ಅದು ಹೊರಳಾಡುತ್ತಾ ಶರಣರ ಪಾದದ ಬಳಿಗೆ ಬಂದು ತನ್ನ ಕೈಯೆತ್ತಲು ಪ್ರಾರಂಭಿಸಿತು. ಶರಣರು ಬಹಳ ವಿಚಾರ ಮಾಡಿ ಆ ಮಗುವನ್ನೆತ್ತಿ ಅದರ ತಲೆಯ ಮೇಲೆ ಕೈಯಾಡಿಸಿ ವೃದ್ಧೆಯ ಉಡಿಯೊಳಗೆ ಹಾಕಿಬಿಟ್ಟರು. ಸ್ವಲ್ಪ ಹೊತ್ತಾದ ಮೇಲೆ ನೀಲಮ್ಮ ತಾಯಿ ಅಲ್ಲಿಗೆ ಬಂದು ಮಗುವನ್ನು ಹುಡುಕುತ್ತಾರೆ. ಅದನ್ನು ಗಮನಿಸಿದ ಶರಣರು ನಡೆದ ವಿಷಯ ತಿಳಿಸಿದರು. ಅದಕ್ಕೆ ನೀಲಮ್ಮ ತಾಯಿ ಸಂತೋಷದಿಂದ ತನ್ನ ಪತಿಯನ್ನು ಕರೆದುಕೊಂಡು ಬಂದು ಇಬ್ಬರೂ ’ ತಮ್ಮ ಮಹಾಕಾರ್ಯಕ್ಕೆ ನಮ್ಮ ಮಗ ಸಲ್ಲಿದನೆಂದು’ ಹೇಳಿ ಅವರ ಪಾದಕ್ಕೆ ನಮಸ್ಕರಿಸುತ್ತಾರೆ. ದಂಪತಿಗಳ ಮಾತಿಗೆ ಶರಣರು ಆಶ್ಚರ್ಯಪಟ್ಟು, ತಕ್ಷಣವೇ ನೀಲಮ್ಮ ತಾಯಿಯವರ ಉಡಿಯಲ್ಲಿ ತಮ್ಮ ತಲೆಯನ್ನಿಟ್ಟು ’ ಅವ್ವಾ ನೀ ಮಾಡಿದ ತ್ಯಾಗಕ್ಕೆ ನಾನೊಂದು ಹೇಳುತ್ತೇನೆ. ಈ ಮನೆಯಲ್ಲಿ ನಾನೇ ಹುಟ್ಟಿ ಬರುತ್ತೇನೆ. ಇಲ್ಲಿ ನಿರಂತರವಾಗಿ ದಾಸೋಹ ನಡೆಯುವಂತೆ ಆಶೀರ್ವದಿಸುತ್ತೇನೆ’ ಎನ್ನುತ್ತಾರೆ.

ಶರಣರಿಗೆ ಮೊದಲಿನಿಂದಲೂ ಕಲ್ಯಾಣದ ಬಸವಣ್ಣ ಎಂದರೆ ಬಲು ಗೌರವ ಮತ್ತು ಭಕ್ತಿ. ಅವರು ಲಿಂಗೈಕ್ಯರಾದ ಮೇಲೆ ಅವರಾತ್ಮ ಕಲ್ಯಾಣದತ್ತ ಹೋಯಿತು ಎನ್ನುತ್ತಾರೆ ಜನಪದರು. ಅವರ ಆತ್ಮ ಕಲ್ಯಾಣದತ್ತ ನಡೆಯಿತು. ಹಾದಿಯಲ್ಲಿರುವ ತಾವರಗೇರಾ, ಔರಾದ, ಮಹಾಗಾಂವ ಮುಂತಾದ ಊರಿನ ಒಕ್ಕಲಿಗರಿಗೆಲ್ಲ ದಾರಿಯಲ್ಲಿ ಸಿಕ್ಕು ಮಾತನಾಡಿರುತ್ತಾರೆ. ಈ ಕಡೆ ಬೆಳಕು ಹರಿದ ಮೇಲೆ ಶರಣರು ಲಿಂಗೈಕ್ಯರಾಗಿದ್ದಾರೆಂಬ ಸುದ್ದಿ ಹಬ್ಬಲು ದರ್ಶನ ಮಾಡಿದ ರೈತರು ಗಾಬರಿಯಾಗುತ್ತಾರೆ. ಓಡಿಬಂದು ನೋಡುತ್ತಾರೆ. ’ ಇದು ಹೇಗೆ ಸತ್ಯ. ಇದೇ ಈಗ ಒಂದು ಗಂಟೆಯ ಮೊದಲು ನಾವು ಶರಣರ ದರ್ಶನ ಮಾಡಿದ್ದೇವೆ’ ಎನ್ನುತ್ತಾ ಆದಿದೊಡ್ಡಪ್ಪ ಶರಣರನ್ನು ಕಂಡು ಕೈಮುಗಿದು ’ ಕಲ್ಯಾಣಕ್ಕೆ ಹೋಗುತ್ತೇನೆ ತ್ರಿಪುರಾಂತ ಕೆರೆಯ ದಂಡೆಯ ಮೇಲಿರುವ ಗವಿಯಲ್ಲಿರುತ್ತೇನೆ’ ಎಂದು ಹೇಳಿದ್ದಾರೆಂದು ಹೇಳುತ್ತಾರೆ. ಹೀಗೆ ಶರಣಬಸವೇಶ್ವರರು ಲೀಲೆಗಳಿಗೆ ಲೆಕ್ಕವಿಲ್ಲ. ಈಗಲೂ ಸಹ ಪ್ರತಿಯೊಬ್ಬರ ಜೀವನದಲ್ಲೂ ಇನ್ನೂ ಲೀಲೆಗಳು ನಡೆಯುತ್ತಲೆ ಇವೆ ಎಂದು ಪ್ರೊ. ಹರವಾಳ ಹೇಳಿದರು.

ಪ್ರೊ. ಗೀತಾ ಹರವಾಳ, ಮಹಾವಿದ್ಯಾಲಯದ ಪ್ರಾಚಾರ್ಯೆ 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here