ಬೆಂಗಳೂರು; ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ವಿಧಾನಸಭೆಯಲ್ಲಿ ಉತ್ತರ ನೀಡುವ ವೇಳೆಯಲ್ಲಿ ಮುಖ್ಯಮಂತ್ರಿಗಳು ರಾಜ್ಯದ ಜನರ ಪರವಾಗಿ, ರಾಜ್ಯದ ಪಾಲಿನ ಹಕ್ಕನ್ನು ಪಡೆದುಕೊಳ್ಳಲು ನಡೆಸಿದ ಪ್ರಯತ್ನಗಳನ್ನೆಲ್ಲಾ ಸದನಕ್ಕೆ ವಿವರಿಸಿದರು. ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿಯವರು ಕೇಂದ್ರದ ಜತೆ ಸಂಘರ್ಷಕ್ಕೆ ಇಳಿಯಬಾರದು ಎಂದಿದ್ದಾರೆ. ಆದರೆ ನಾವು ಸಂಘರ್ಷಕ್ಕೆ ಇಳಿದಿಲ್ಲ. ರಾಜ್ಯದ ಪಾಲಿನ ಸಂವಿಧಾನಬದ್ದ ಹಕ್ಕನ್ನು, ಅನುದಾನವನ್ನು ಕೇಳುವುದು ಸಂಘರ್ಷ ಆಗುವುದಿಲ್ಲ, ನಾವು ಕೇಂದ್ರ ಸರ್ಕಾರವು ನೀಡುವ ಅಕ್ಕಿಗೆ, ನಿಗದಿತ ಹಣವನ್ನು ಪಾವತಿ ಮಾಡುತ್ತೇವೆ ಎಂದು ತಿಳಿಸಿದರೂ ಸಹ ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ ಎಂದು ತಿಳಿಸಿದರು.
ಸರ್ಕಾರದ ನೀತಿ, ಮುನ್ನೋಟವನ್ನು ಜನತೆಯ ಮುಂದಿಟ್ಟಿದ್ದಾರೆ; ರಾಜ್ಯಪಾಲರು ತಮ್ಮ ಭಾಷಣದಲ್ಲಿ ಸರ್ಕಾರದ ನಿಲುವು, ನೀತಿ, ಮುನ್ನೋಟ ಹಾಗೂ ಕಾರ್ಯಕ್ರಮ ಗಳನ್ನು ಸ್ಪಷ್ಟವಾಗಿ ರಾಜ್ಯದ ಜನತೆ ಮುಂದಿಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದು ರಾಜ್ಯಪಾಲರಿಗೆ ಮುಖ್ಯಮಂತ್ರಿಗಳು ಅಭಿನಂದಿಸಿದರು.
ರಾಜ್ಯಕ್ಕೆ ತೀವ್ರ ಬರಗಾಲ ಬಂದಿದೆ. ಕೇಂದ್ರದಿಂದ ಬರ ಪರಿಹಾರ ಕೇಳಿ 17 ಬಾರಿ ಕೇಂದ್ರಕ್ಕೆ ಬರೆದೆವು. ಇದರಲ್ಲಿ ಒಂದು ಪತ್ರಕ್ಕೆ ಮಾತ್ರ, “ನಿಮ್ಮ ಪತ್ರ ತಲುಪಿದೆ” ಎನ್ನುವ ಉತ್ತರ ಕೇಂದ್ರದಿಂದ ಬಂತು. ಆದರೆ ಉಳಿದ 16 ಪತ್ರಗಳಿಗೆ ಉತ್ತರವೂ ಬರಲಿಲ. ಕೇಂದ್ರದ ಅನುದಾನ ರಾಜ್ಯಕ್ಕೆ ಇವತ್ತಿನವರೆಗೂ ಒಂದು ಪೈಸೆಯೂ ಬಂದಿಲ್ಲ. ಇದು ನಿಯಮಬದ್ದವಾಗಿ ರಾಜ್ಯದ ಹಕ್ಕು. ರಾಜ್ಯದ ಪಾಲು. ಇದನ್ನೂ ಕೇಂದ್ರ ಕೊಡುತ್ತಿಲ್ಲ. ನಮ್ಮ ಪಾಲನ್ನು, ರಾಜ್ಯದ ಪಾಲನ್ನು ಕೇಳುವುದು ತಪ್ಪಾ? ಇದು ಸಂಘರ್ಷ ಹೇಗಾಗುತ್ತದೆ ಎಂದು ಪ್ರಶ್ನಿಸಿದರು.
ರಾಜ್ಯಕ್ಕೆ ಬರಗಾಲ ಬಂದಾಗ ನರೇಗ ಮಾನವ ದಿನಗಳನ್ನು ನಿಯಮ ಬದ್ದವಾಗಿ 100 ರಿಂದ 150 ದಿನಗಳಿಗೆ ಏರಿಕೆ ಮಾಡಬೇಕಿತ್ತು. ಇದಕ್ಕಾಗಿ ನಾವು ಪದೇ ಪದೇ ಮನವಿ ಮಾಡಿದರೂ ಮಾನವ ದಿನಗಳನ್ನು ಏರಿಕೆ ಮಾಡಲೇ ಇಲ್ಲ. ಇದು ರಾಜ್ಯದ ಜನರಿಗೆ ಮಾಡಿದ ಅನ್ಯಾಯ ಅಲ್ಲವೇ? ನಮ್ಮ ರಾಜ್ಯದ, ರಾಜ್ಯದ ಹಕ್ಕನ್ನು ಕೇಳುವುದು ತಪ್ಪಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನೆಗಳ ಮೂಲಕವೇ ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತಿಗೆ ಉತ್ತರಿಸಿದರು.
ಗ್ಯಾರಂಟಿಗಳ ಲೆಕ್ಕ ಬಿಚ್ಚಿಟ್ಟ ಸಿಎಂ; ಸರ್ಕಾರ ಅಧಿಕಾರಕ್ಕೆ ಬಂದ ದಿನವೇ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಲು ಶುರು ಮಾಡಿದ್ದನ್ನು ಮುಖ್ಯಮಂತ್ರಿಗಳು ವಿವರಿಸಿದರು. ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಯೋಜನೆಗಳಿಂದ ಕೋಟಿ , ಕೋಟಿ ಫಲಾನುಭವಿಗಳು ಅನುಕೂಲ ಪಡೆಯುತ್ತಿರುವುದನ್ನು ಅಂಕಿ ಅಂಶಗಳ ಸಮೇತ ವಿವರಿಸಿದರು.
ರಾಜ್ಯದ ಜನರಿಗೆ ಅನ್ನ ಕೊಡುವ ಉದ್ದೇಶದಿಂದ ಕೆಜಿಗೆ 34 ರೂಪಾಯಿ ಕೊಡ್ತೀವಿ, ಈ ಹಣಕ್ಕೆ ಅಕ್ಕಿ ಕೊಡಿ ಎಂದು ಕೇಂದ್ರಕ್ಕೆ ಮನವಿ ಮಾಡಿದೆವು. ಆದರೆ ರಾಜ್ಯಕ್ಕೆ, ರಾಜ್ಯದ ಜನರಿಗೆ ಅಕ್ಕಿ ಕೊಡಲು ಕೇಂದ್ರ ಒಪ್ಪಲಿಲ್ಲ. ಈಗ 29 ರೂಪಾಯಿಗೆ ಅಕ್ಕಿ ಕೊಡುವುದಾಗಿ ಹೇಳುತ್ತಿದ್ದಾರೆ. ಈಗಲೂ ನಮಗೆ ಅದೇ ಬೆಲೆಗೆ ಅಕ್ಕಿ ಕೊಡಿಸಿ. ಅದನ್ನು ನಾವು ಕೇಂದ್ರದಿಂದ ಖರೀದಿಸಿ ರಾಜ್ಯದ ಜನರಿಗೆ ಕೊಡಲು ಸಿದ್ದರಿದ್ದೇವೆ. ನೀವು ಕೇಂದ್ರದ ಜತೆ ಮಾತನಾಡಿ ನಮಗೆ ಅಕ್ಕಿ ಕೊಡಿಸಿ ಎಂದು ಮುಖ್ಯಮಂತ್ರಿಗಳು ಪ್ರತಿ ಪಕ್ಷದ ಸದಸ್ಯರಿಗೆ ತಿಳಿಸಿದರು.
ಪ್ರತಿ ಪಕ್ಷದವರು ಎಂದಾದರೂ ಜಿಲ್ಲೆ, ತಾಲ್ಲೂಕುಗಳಲ್ಲಿರುವ ಹಿಂದುಳಿದ ವರ್ಗಗಳ, ಎಸ್ ಸಿ, ಎಸ್ ಟಿ ಹಾಸ್ಟೆಲ್ ಗಳಿಗೆ ಭೇಟಿ ನೀಡಿದ್ದಾರಾ? ಈ ಸಮುದಾಯದ ವಿದ್ಯಾರ್ಥಿಗಳ ಕಷ್ಟಗಳನ್ನು ಕೇಳಿದ್ದಾರಾ? ಅವರ ಸಂಕಷ್ಟಗಳಿಗೆ ಸ್ಪಂದಿಸಿದ್ದಾರಾ? ಎಂದು ಪ್ರಶ್ನಿಸಿ ತಾವು ಸಿಎಂ ಆದಾಗಿನ ಮತ್ತು ಬಿಜೆಪಿ ಅವಧಿಯಲ್ಲಿ ಹಿಂದುಳಿದ ಸಮುದಾಯಗಳ ಏಳಿಗೆಗೆ ಬಿಡುಗಡೆ ಮಾಡಲಾದ ಹಣ, ಅನುದಾನದ ಅಂಕಿ ಅಂಶಗಳನ್ನು ಸದನದ ಮುಂದೆ ಬಿಚ್ಚಿಟ್ಟರು.
2013 ರಿಂದ 2018 ರವರೆಗೆ ಪ್ರತೀ ವರ್ಷ ವಸತಿ ನಿಲಯಗಳ ಭೋಜನಾ ವೆಚ್ಚವನ್ನು ಹೆಚ್ಚಿಸಲಾಗಿದೆ. 2014 ರಲ್ಲಿ ಮೆಟ್ರಕ್ ಪೂರ್ವ ಹಾಸ್ಟೆಲ್ ವಿದ್ಯಾರ್ಥಿಗಳ ಭೋಜನಾ ವೆಚ್ಚ ತಲಾ 750 ರಿಂದ 900ಕ್ಕೆ ಹೆಚ್ಚಿಸಿದ್ದು, ಮೆಟ್ರಿಕ್ ನಂತರದ ಭೋಜನಾ ವೆಚ್ಚ ತಲಾ 850 ರಿಂದ 1000 ಕ್ಕೆ ಹೆಚ್ವಿಸಲಾಯಿತು. ಈ ಮೊತ್ತ 2017-18 ಕ್ಕೆ ಕ್ರಮವಾಗಿ ಮೆಟ್ರಿಕ್ ಪೂರ್ವಕ್ಕೆ 1400 ಕ್ಕೆ, ಮೆಟ್ರಿಕ್ ನಂತರದ್ದು 1500 ಕ್ಕೆ ತಲುಪಿತು ಎಂದು ದಾಖಲೆಗಳನ್ನು ತೋರಿಸಿದರು. ನಾವು ಒಟ್ಟು ನಮ್ಮ ಸರ್ಕಾರದ ಅವಧಿಯಲ್ಲಿ ಒಟ್ಟು ತಲಾ ವಿದ್ಯಾರ್ಥಿಗೆ 650ರೂ ಹೆಚ್ಚಿಸಿದ್ದನ್ನು ವಿವರಿಸಿದರು.
ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ನಾವು ಕೊಟ್ಟಿದ್ದು 408.02 ಕೋಟಿ, ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ 880.65 ಕೋಟಿ ಸೇರಿ ಒಟ್ಟು 1288.67 ಕೋಟಿ ಕೊಟ್ಟೆವು. ಆದರೆ ಹಿಂದಿನ ಸರ್ಕಾರ ವಿದ್ಯಾರ್ಥಿ ವೇತನಕ್ಕೆ ನೀಡಿದ್ದು ಕೇವಲ 650.78 ಕೋಟಿ ಮಾತ್ರ ಎಂದು ದಾಖಲೆ ತೋರಿಸಿ ಹೇಳಿದರು.
ವಿದ್ಯಾಸಿರಿ ಯೋಜನೆಗೆ ಕಾಂಗ್ರೆಸ್ ಅವಧಿಯಲ್ಲಿ 431.68 ಕೋಟಿ ಕೊಟ್ಟರೆ, ಹಿಂದಿನ ಸರ್ಕಾರ ತನ್ನ ಅವಧಿಯಲ್ಲಿ ಕೊಟ್ಟಿದ್ದು 197.62 ಕೋಟಿ ಮಾತ್ರ. ನಮ್ಮ ಅವಧಿಯಲ್ಲಿ ಹೊಸದಾಗಿ 308 ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಹೊಸ ಹಾಸ್ಟೆಲ್ ಗಳನ್ನು ತೆರೆದು 30800 ವಿದ್ಯಾರ್ಥಿಗಳಿಗೆ ಹೊಸದಾಗಿ ಅವಕಾಶ ಒದಗಿಸಿದೆವು. ಹಿಂದಿನ ಸರ್ಕಾರವು ತನ್ನ ಅವಧಿಯಲ್ಲಿ ಕೇವಲ 5 ಹಾಸ್ಟೆಲ್ ಗಳನ್ನು ಮಾತ್ರ ತೆರೆದು ಕೇವಲ 500 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿತು ಎಂದು ಅಂಕಿ ಅಂಶಗಳನ್ನು ತಿಳಿಸಿದರು.
ಕಾಂಗ್ರೆಸ್ ಸರ್ಕಾರದ 2013-18 ರ ಅವಧಿಯಲ್ಲಿ 328 ಮೊರಾರ್ಜಿ ವಸತಿ ಶಾಲೆಗಳನ್ನು ತೆರೆದು 82000 ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅವಕಾಶ, ಶಿಕ್ಷಣ ಒದಗಿಸಿತು. ಬಿಜೆಪಿ 14 ವಸತಿ ಶಾಲೆ ತೆರೆದು 3500 ವಿದ್ಯಾರ್ಥಿಗಳಿಗೆ ಅವಕಾಶವಾಯಿತು ಎನ್ನುತ್ತಾ ಹೀಗೇ ಪ್ರತೀ ಇಲಾಖೆಯ ಅಂಕಿ ಅಂಶಗಳು ನನ್ನ ಕೈಯಲ್ಲಿವೆ. ಎಲ್ಲವನ್ನೂ ಹೇಳುವುದಕ್ಕೆ ಸಮಯ ಆಗುವುದಿಲ್ಲ ಎಂದು ವಿವರಿಸಿದರು.
ನಮ್ಮ ಸರ್ಕಾರದ ಅವಧಿಯಲ್ಲಿ ಹೆಚ್ಚಿನ ಹಾಲು ಉತ್ಪಾದನೆಯಾಗಿದೆ. 2023 – 24 ರಲ್ಲಿ 84.41 ಲಕ್ಷ ಲೀಟರ್ ಹಾಲು ಹೆಚ್ಚು ಉತ್ಪಾದನೆಯಾಗಿದೆ ಎಂದು ಕೆ.ಎಂ.ಎಫ್ ವ್ಯವಸ್ಥಾಪಕ ನಿರ್ದೇಶಕರು ಪತ್ರದಲ್ಲಿ ತಿಳಿಸಿದ್ದಾರೆ ಎಂದು ವಿವರಿಸಿದರು. ರೈತರಿಗೆ ನೀಡಬೇಕಿದ್ದ ಪೆÇ್ರೀತ್ಸಾಹ ಧನಕ್ಕಾಗಿ 2019 ರಿಂದ ಇಲ್ಲಿಯವರೆಗೆ 1178 ಕೋಟಿ ರೂ.ಗಳು ಬಿಡುಗಡೆಯಾಗಿದೆ. ಈ ವರ್ಷ 1172 ಕೋಟಿ ರೂ.ಗಳಲ್ಲಿ 971 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ರೈತರಿಗೆ 3.00 ರೂ.ಗಳಿಂದ 5. ರೂ.ಗಳಿಗೆ ಪೆÇ್ರೀತ್ಸಾಹ ಧನ ಹೆಚ್ಚಿಸಿದ್ದು ನಮ್ಮ ಸರ್ಕಾರ ಎಂದು ತಿಳಿಸಿದರು.