ಕಲಬುರಗಿ: ಈಶಾನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ರವರ ನೇತೃತ್ವದಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರಾದ ಡಾ. ಆಕಾಶ್ ಎಸ್ ರವರ ಅಧ್ಯಕ್ಷತೆಯಲ್ಲಿ ಕಲ್ಯಾಣ ಕರ್ನಾಟಕ ವಿಭಾಗದ ಪ್ರೌಢಶಾಲೆಗಳ ಸಮಸ್ಯೆಗಳ ಕುರಿತು ವಿಭಾಗದ ಏಳು ಜಿಲ್ಲೆಗಳ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ಜರುಗಿತು.
ಸಭೆಯಲ್ಲಿ ವಿಭಾಗದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಫಲಿತಾಂಶ ಹೆಚ್ಚಿಸಲು ಇಲಾಖೆ ಹಾಗೂ ಸಂಘಟನೆಗಳು ಏನೆಲ್ಲ ಕೆಲಸ ಮಾಡಬೇಕೆಂಬುದರ ಕುರಿತು ಸುಧೀರ್ಘ ಚರ್ಚೆ ನಡೆಯಿತು.
ಈ ಹಿಂದಿನಂತೆ ಪ್ರತಿ ಐದು ವರ್ಷಕ್ಕೊಮ್ಮೆ ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಶ್ನೆ ಪತ್ರಿಕೆಯ ವಿನ್ಯಾಸ ಬದಲಾವಣೆ ಮಾಡಲಾಗುತ್ತಿದ್ದು ಪ್ರಸ್ತುತ ಐದು ವರ್ಷಗಳು ಕಳೆದಿರುವುದರಿಂದ ಈ ವರ್ಷದಲ್ಲಿ ಕೂಡ ದ್ವಿತೀಯ ಪಿಯುಸಿ ಮಾದರಿಯಲ್ಲಿ ಪ್ರಶ್ನೆ ಪತ್ರಿಕೆಯ ಸ್ವರೂಪವನ್ನು ಬದಲಾವಣೆ ಮಾಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ನಿರ್ಣಯ ಕೈಗೊಳ್ಳಲಾಯಿತು.
ಸಿ.ಬಿ.ಎಸ್.ಇ. ಮಾದರಿಯಂತೆ ಆಂತರಿಕ ಅಂಕಗಳನ್ನು ವಿದ್ಯಾರ್ಥಿಯನ್ನು ಉತ್ತೀರ್ಣಗೊಳಿಸಲು ಪರಿಗಣಿಸಬೇಕೆಂಬ ಬೇಡಿಕೆಗೂ ಕೂಡ ಮೇಲಾಧಿಕಾರಿಗಳ ಗಮನಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅಪರಾಯುಕ್ತರು ಹೇಳಿದರು.
ಎಸ್ ಎಸ್ ಎಲ್ ಸಿ ಫಲಿತಾಂಶ ಸುಧಾರಣೆಯಾಗಬೇಕಾದರೆ ಪ್ರಾಥಮಿಕ ಹಂತದಲ್ಲಿ ಮಕ್ಕಳು ಚೆನ್ನಾಗಿ ಕಲಿತಾಗ ಮಾತ್ರ ಸಾಧ್ಯವಾಗುತ್ತದೆ ಆದ್ದರಿಂದ ಪ್ರಾಥಮಿಕ ಹಂತದಲ್ಲಿ ವಿವಿಧ ಸ್ಥರದ ಅಧಿಕಾರಿಗಳಿಂದ ಮೇಲ್ವಿಚಾರಣೆ ಅಗತ್ಯವಿದ್ದು, ಬರುವ ದಿನಗಳಲ್ಲಿ ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು, ಹಾಗೆ ಪ್ರೌಢಶಾಲೆಯಲ್ಲಿ ಬೋಧಿಸುವ ಶಿಕ್ಷಕರಿಗೆ ವಿವಿಧ ತರಬೇತಿಗಳ ಸಂಪನ್ಮೂಲ ವ್ಯಕ್ತಿಗಳನ್ನಾಗಿ ಬಳಸುವುದನ್ನು ನಿಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಒಟ್ಟಾರೆ ವಿಭಾಗದ ಫಲಿತಾಂಶ ಸುಧಾರಣೆ ಯಾಗುವಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ವಿಭಾಗದ ಸಹ ನಿರ್ದೇಶಕರಾದ ಹನುಮಕ್ಕನವರು, ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಜಿ.ಎಂ. ವಿಜಯಕುಮಾರ್ ವಿಭಾಗದ 7 ಜಿಲ್ಲೆಗಳ ಉಪನಿರ್ದೇಶಕರುಗಳು, ಜಿಲ್ಲಾ ಅಧ್ಯಕ್ಷರಾದ ಮಹೇಶ ಹೂಗಾರ, ಕಾರ್ಯದರ್ಶಿಗಳಾದ ಜಮೀಲ್ ಇಮ್ರಾನ್ ಅಹ್ಮದ, ರಾಜ್ಯ ಖಜಾಂಚಿಗಳಾದ ಧನಸಿಂಗ್ ರಾಥೋಡ್, ರಾಯಚೂರು ಅಧ್ಯಕ್ಷರಾದ ಪ್ರಭುಲಿಂಗ ಗದ್ದಿ, ವಿಭಾಗಿ ಉಪಾಧ್ಯಕ್ಷರಾದ ವೆಂಕಟೇಶ ಜಾಲಿಬೆಂಚಿ, ಬೀದರ್ ಅಧ್ಯಕ್ಷರಾದ ಮೆಹಬೂಬ್ ಪಟೇಲ್, ಕಾರ್ಯದರ್ಶಿಗಳಾದ ಜಿತೇಂದ್ರ, ವಿಜಯನಗರ ಜಿಲ್ಲಾ ಅಧ್ಯಕ್ಷರಾದ ಮನೋಹರ್, ಕಾರ್ಯದರ್ಶಿಗಳಾದ ಶಿವಕುಮಾರ್ ಗದ್ದಿ, ಕೊಪ್ಪಳ ಜಿಲ್ಲಾ ಅಧ್ಯಕ್ಷರಾದ ಸೋಮಶೇಖರ್ ಹರ್ತಿ, ಕಾರ್ಯದರ್ಶಿಗಳಾದ ಮಾರ್ಥಂಡಯ್ಯ, ಯಾದಗಿರಿ ಜಿಲ್ಲಾಧ್ಯಕ್ಷರಾದ ಅಶೋಕ ಕೆಂಭಾವಿ ಕಾರ್ಯದರ್ಶಿಗಳಾದ ಹೆಚ್ ಬಿ ಬಂಡಿ ಬಳ್ಳಾರಿ ಜಿಲ್ಲಾ ಅಧ್ಯಕ್ಷರಾದ ಭಾಸ್ಕರ್ ರೆಡ್ಡಿ ಕಾರ್ಯದರ್ಶಿಗಳಾದ ಪಂಪನಗೌಡ, ರಾಜ್ಯ ಉಪಾಧ್ಯಕ್ಷರಾದ ಪ್ರಕಾಶ್ ನರೋಣ ಇತರರು ಉಪಸ್ಥಿತರಿದ್ದರು.