ಬೇಡವಾದ ಮಗು ಬೀದಿಗಲ್ಲ ಚೈಲ್ಡ್‌ಲೈನ್‌ಗೆ ಕೊಡಿ

0
44

ವಾಡಿ: ಹೆತ್ತವರಿಗೆ ಬೇಡವಾದ ನವಜಾತ ಶಿಶುಗಳು ಬೀದಿಯಲ್ಲಿ ಬಿದ್ದು ಅಸುನೀಗುತ್ತಿರುವ ಕರುಣಾಜನಕ ಪ್ರಕರಣಗಳು ಇತ್ತೀಚೆಗೆ ಹೆಚ್ಚು ಘಟಿಸುತ್ತಿವೆ. ಹೆತ್ತ ಹಸುಗೂಸನ್ನು ಬಸ್ ನಿಲ್ದಾಣ, ರೈಲು ನಿಲ್ದಾಣ ಅಥವ ನಿರ್ಜನ ಪ್ರದೇಶಗಳಲ್ಲಿ ಬಿಟ್ಟು ಬೀದಿಪಾಲು ಮಾಡದೆ ಚೈಲ್ಡ್‌ಲೈನ್ ಸಂಸ್ಥೆಗೆ ಕೊಟ್ಟರೆ ಗೌರವದಿಂದ ಸ್ವೀಕರಿಸುತ್ತೇವೆ ಎಂದು ಚೈಲ್ಡ್‌ಲೈನ್ ಸಂಯೋಜಕ ಸುಂದರ ಚಂದನಕೇರಾ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಲಬುರಗಿ, ಶಿಶು ಅಭಿವೃದ್ಧಿ ಯೋಜನೆ, ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಪಟ್ಟಣದ ಹಿಂಗುಲಾಂಬಿಕ ದೇವಸ್ಥಾನ ಆವರಣದಲ್ಲಿ ಏರ್ಪಡಿಸಲಾಗಿದ್ದ ಗರ್ಭಿಣಿಯರ ಪೌಷ್ಠಿಕ ಆಹಾರ ಜಾಗೃತಿ ಶಿಬಿರ ಉದ್ದೇಶಿಸಿ ಅವರು ಮಾತನಾಡಿದರು. ಬಾಲ್ಯ ವಿವಾಹ ಮತ್ತು ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸರಕಾರ ಬದ್ಧವಾಗಿದ್ದು, ಕಾನೂನು ಬಿಗಿಗೊಳಿಸಿದೆ. ಕುಟುಂಬ ಸಂಬಂದಿಕರಿಂದಲೇ ಮಕ್ಕಳು ಹೆಚ್ಚು ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ. ಕೆಲಸಕ್ಕೆ ಕಳಿಸದೆ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಹೆತ್ತವರಿಗೆ ಬೇಡವಾದ ಮಕ್ಕಳನ್ನು ಸರಕಾರ ಬಾಲಮಂದಿರದಲ್ಲಿ ಪೋಷಿಸುತ್ತದೆ. ಯಾವೂದೇ ಕಾರಣಕ್ಕೂ ಮಕ್ಕಳ ಭವಿಷ್ಯದ ಬಗ್ಗೆ ಪೋಷಕರು ನಿರ್ಲಕ್ಷ್ಯ ಮಾಡಬಾರದು ಎಂದು ಹೇಳಿದರು.

Contact Your\'s Advertisement; 9902492681

ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ನಾಗಮ್ಮ ಬಳೂರಗಿ ಮಾತನಾಡಿ, ಗರ್ಭಿಣಿ ತಾಯಿ ಸೇವಿಸುವ ಪೌಷ್ಠಿಕಾಂಶದ ಆಹಾರದಿಂದ ಗರ್ಭದಲ್ಲಿರುವ ಮಗುವಿನ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ರಕ್ತಹೀನತೆ ಮತ್ತು ಅಪೌಷ್ಠಿಕತೆಯಿಂದ ಬಳಲುವ ಗರ್ಭಿಣಿಗೆ ಹುಟ್ಟುವ ಮಗು ಆರೋಗ್ಯವಾಗಿರುವುದಿಲ್ಲ. ವಿಕಲಚೇತನ, ಅಂಗವಿಕಲ ಮಕ್ಕಳ ಜನನ ತಡೆಯಲು ಗರ್ಭಿಣಿ ಬಾಣಂತಿಯರು ಮುಂದಾಗಬೇಕು. ಪೌಷ್ಠಿಕಾಂಶ ಇರುವ ಕಾಳು ಪಲ್ಲೆ, ಹಸಿ ತರಕಾರಿ ಸೊಪ್ಪು, ಹಣ್ಣು ಮತ್ತು ಕಾಯಿ ಪದಾರ್ಥಗಳನ್ನು ಹೆಚ್ಚು ಸೇವಿಸಬೇಕು ಎಂದರು.

ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದ ಆಪ್ತ ಸಮಾಲೋಚಕ ಬಾಬುರಾವ ಸಿ.ಬಿ ಮಾತನಾಡಿದರು. ಪುರಸಭೆ ಉಪಾಧ್ಯಕ್ಷ ಮಲ್ಲಯ್ಯ ಗುತ್ತೇದಾರ ಕಾರ್ಯಕ್ರಮ ಉದ್ಘಾಟಿಸಿದರು. ಪುರಸಭೆ ಸದಸ್ಯೆ ಸುಶಿಲಾಬಾಯಿ ಮೌಸಲಗಿ, ಕಾಂಗ್ರೆಸ್ ಮುಖಂಡ ಮಹ್ಮದ್ ಅಶ್ರಫ್, ಕಿರಿಯ ಆರೋಗ್ಯ ಸಹಾಯಕಿಯರಾದ ಅನಿತಾ ಹಾಗೂ ಅಮೃತಾ, ಅಂಗನವಾಡಿಯ ಮಹಾದೇವಿ ಹಿರೇಮಠ, ನೇತ್ರಾವತಿ ಮಠಪತಿ, ಶಾರದಾ ಟಿ.ರಾಠೊಡ, ಸುಜಾತಾ ಬನಸೋಡೆ, ಇಂದೂಮತಿ ಹೊನಕಟ್ಟಿ, ರೇಣುಕಾ ಕುಲಕರ್ಣಿ, ಲಕ್ಷ್ಮೀ ಪರಮದೊಡ್ಡಿ, ಲಲಿತಾ ಮಣೂರ, ಹೀರಾಬಾಯಿ, ಮೀನಾಕ್ಷಿ ಸುರಪೂರ ಹಾಗೂ ಆಶಾ ಕಾರ್ಯಕರ್ತೆಯರು, ಗರ್ಭಿಣಿ ಬಾಣಂತಿಯರು ಪಾಲ್ಗೊಂಡಿದ್ದರು. ಇದೇ ವೇಳೆ ಮೊದಲ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನೆರವೇರಿಸಿ ಸತ್ಕರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here