ಕಲಬುರಗಿ: ಸಿನಿ ಕಲಾವಿದರಿಗೆ ವೇದಿಕೆಗಳು ತುಂಬಾ ಅಪರೂಪ, ಆದಾಗ್ಯೂ ಈ ಭಾಗದ ಎಲ್ಲ ಕಲಾವಿದರು ಒಗ್ಗೂಡಿ ಚಿತ್ರ ನಿರ್ಮಿಸಿರುವುದು ಅಭಿನಂದನಾರ್ಹ. ಮುಂದೆ ಅವರ ಹೊಸ ಹೊಸ ಚಿತ್ರಗಳಿಗೆ ಬೆನ್ನಲುಬಾಗಿ ಪ್ರೋತ್ಸಾಹಿಸುವೆ ಎಂದು ಜೆಡಿಎಸ್ ಹಿರಿಯ ಮುಖಂಡ ಹಾಗೂ ಉದ್ಯಮಿ ಅಶೋಕ ಗುತ್ತೇದಾರ್ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ನಡೆದ ಗಿರಿನಾಡಿ ಪ್ರೇಮಿ ಚಲನಚಿತ್ರದ ೨೫ನೇ ದಿನ ಯಶಸ್ವಿಯಾಗಿ ಪ್ರದರ್ಶನಗೊಂಡ ಹಿನ್ನೆಲೆಯಲ್ಲಿ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಂತರ ಯಾದಗಿರಿ ನಗರಸಭಾ ಮಾಜಿ ಅಧ್ಯಕ್ಷೆ ನಾಗರತ್ನ ಅನಪುರ ಮಾತನಾಡಿ ಕಲ್ಯಾಣ ಕರ್ನಾಟಕ ಭಾಗದ ಪ್ರತಿಭಾನ್ವಿತ ಕಲಾವಿದರಿಗೆ ಸೂಕ್ತ ವೇದಿಕೆ, ಪ್ರೋತ್ಸಾಹ ಸಿಗದೆ ಇರುವುದರಿಂದ ಹಿಂದುಳಿಯುವಂತಾಗಿತ್ತು. ಈಗ ಚಿತ್ರ ನಿರ್ಮಿಸುವಷ್ಟು ಬೆಳೆದಿದ್ದಾರೆಂದರೆ ಸಿನಿಮಾ ರಂಗದಲ್ಲೂ ಈ ಭಾಗದ ಕೀರ್ತಿ ಹೆಚ್ಚಿಸಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ವೇದಿಕೆಯಲ್ಲಿ ರೈತ ಸಂಘದ ಸೇನಾ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ ಪಾಟೀಲ್, ರೈತ ಸಂಘದ ಕಾರ್ಯದರ್ಶಿ ಭೀಮರಡ್ಡಿ, ಮುಖಂಡರಾದ ಜಗದೀಶ ಪಾಟೀಲ್, ಮಹಾವೀರ, ಸಾಹಿತಿ ಮಹಿಪಾಲರಡ್ಡಿ ಮುನ್ನೂರ್ ಮತ್ತಿತರರಿದ್ದರು.
ನಿರ್ಮಾಪಕರಾದ ಮಹ್ಮದ್ ಖುರಾಮ್, ಶರಣು ಪಟ್ಟೇದಾರ್, ನಿರ್ದೇಶಕ ಯುವರಾಜ ಎಸ್. ಗುತ್ತೇದಾರ್, ಸಂಗೀತ ಶ್ರೀವಾತ್ಸವ, ಸಾಮ್ರಾಟ್, ಸಾಹಿತ್ಯ ಸುರಾಜ್ ಪುರಾಣಿಕ, ಮಾಲಾ, ಯುವರಾಜ ಗುತ್ತೇದಾರ್ , ಪತ್ರಕರ್ತರಾದ ಭೀಮಾಶಂಕರ ಫಿರೋಜಾಬಾದ, ಅಕ್ರಮ ಪಾಶಾ ಮೋಮಿನ್, ಚಿತ್ರ ಕಲಾವಿದರಾದ ಶರಣು ಶೆಟ್ಟಿ, ಪ್ರವೀಣ ಜಮಾದಾರ್, ಪ್ರವೀಣ ಹಿರೇಮಠ, ರೋಹಿತ್, ಅಶೋಕ ಚಿಕೋಟಿ, ರಾಘವೇಂದ್ರ ಮತ್ತಿತರರಿದ್ದರು.