ಕಲಬುರಗಿ: ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ ನಿಮ್ಮ ಒಂದು ಅಮೂಲ್ಯವಾದ ಮತದಿಂದ ರಾಷ್ಟ್ರದ ಭವಿಷ್ಯ ನಿರ್ಮಾಣವಾಗಲಿದೆ. ಯೋಗ್ಯರಿಗೆ ಮತ ಚಲಾಯಿಸುವ ಮೂಲಕ ರಾಷ್ಟ್ರದ ಸುಭದ್ರತೆಗೆ ಹಾಗೂ ಆರ್ಥಿಕ ಸದೃಢತೆಗೆ ಕೈಜೋಡಿಸಿ ಎಂದರು.
ಜೇವರ್ಗಿ ಹೊರವಲಯದಲ್ಲಿರುವ ಧರಂ ಸಿಂಗ್ ಕಲ್ಯಾಣ ಮಂಟಪದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡುತ್ತಿದ್ದ ಅವರು ಆರ್ಥಿಕ ಅಸಮಾನತೆ, ನಿರುದ್ಯೋಗ, ಬೆಲೆ ಏರಿಕೆಯಿಂದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರ ಕಷ್ಟ ಅರಿತುಕೊಂಡೇ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಮೂಲಕ ಆರ್ಥಿಕ ಸಬಲತೆಗೆ ಹಾಗೂ ಅವರು ನೆಮ್ಮದಿಯ ಜೀವನ ನಡೆಸಲು ಬೇಕಾದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ನಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ಬಿಜೆಪಿ ಪಕ್ಷದವರಿಗೆ ಜನರ ಕಷ್ಟಗಳ ಅರಿವಿಲ್ಲ. ಅವರು ಅಧಿಕಾರದಲ್ಲಿದ್ದಾಗ ಜನರಿಗೆ ಖರ್ಚು ಮಾಡಬೇಕಿದ್ದ ತೆರಿಗೆ ಹಣವನ್ನು ತಮ್ಮ ಜೇಬಿಗೆ ತುಂಬಿಸಿಕೊಂಡಿದ್ದರು. ಆದರೆ ನಾವು ಜನರ ಹಣವನ್ನು ಗ್ಯಾರಂಟಿ ಯೋಜನೆಗಳ ಮೂಲಕ ಮತ್ತೆ ಅವರಿಗೆ ಸದ್ಭಳಕೆ ಮಾಡಲಾಗುತ್ತಿದ್ದೆವೆ ಎಂದರು.
ಗೃಹಲಕ್ಷ್ಮೀ ಯೋಜನೆಯ ಪ್ರತಿತಿಂಗಳ ಹಣವನ್ನು ಮಹಿಳೆಯರು ಸಂಸಾರದ ವೆಚ್ಚಕ್ಕೆ, ಪೌಷ್ಠಿಕಾಂಶ ಆಹಾರ ಬಳಸಲು, ಮಕ್ಕಳ ಶಾಲೆ ಟ್ಯೂಷನ್ ಫೀಸಿಗೆ ಬಳಸುತ್ತಿದ್ದಾರೆ. ಹೀಗಿರುವಾಗ ಮಾಜಿ ಸಿಎಂ ಕುಮಾರಸ್ವಾಮಿ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಹೇಳಿ ಅವರಿಗೆ ಅವಮಾನ ಮಾಡಿದ್ದಾರೆ. ಅವರಿಗೆ ವಾಸ್ತವದ ಅರಿವಿಲ್ಲ ಎಂದು ಟೀಕಿಸಿದರು.
ಬಿಜೆಪಿ ಅಧಿಕಾರದ ಹತ್ತು ವರ್ಷಗಳ ಅವಧಿಯಲ್ಲಿ ದಿನಬಳಕೆ ವಸ್ತುಗಳು, ಪೆಟ್ರೋಲ್ ಡಿಸೇಲ್, ರಸಗೊಬ್ಬರ ಹಾಗೂ ಇತ್ಯಾದಿ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದೆನಾ ಮೋದಿಯವರ ಅಚ್ಛಾದಿನ್ ? ರೈತರ ಆದಾಯ ದ್ವಿಗುಣ ಗೊಳಿಸುವ ಭರವಸೆ ನೀಡಿದ್ದರು.
ಅವರು ನೀಡಿರುವ ಯಾವ ಭರವಸೆ ಈಡೇರಿಸಿದ್ದಾರೆ ? ಎಂದು ಪ್ರಶ್ನಿಸಿದ ಖರ್ಗೆ, ನಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದಾಗ ಮನಮೋಹನ ಸಿಂಗ್ ರೂ 72,000 ಕೋಟಿ ರೈತರ ಸಾಲ ಮನ್ನಾ ಮಾಡಿದ್ದರು. ಬಿಜೆಪಿ ಸರ್ಕಾರ ರೈತರ ಸಾಲ ಮನ್ನಾ ಮಾಡಲು ಹಣದ ಕೊರತೆ ಕಾರಣ ಹೇಳಿ ಬಂಡವಾಳಶಾಯಿಗಳ 12 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ ಎಂದರು.
ಡಬಲ್ ಇಂಜಿನ್ ಸರ್ಕಾರ ಇದ್ದರೆ ಅಭಿವೃದ್ದಿ ಸಾಧ್ಯ ಎಂದು ಜನರನ್ನು ಯಾಮಾರಿಸಿದ ಬಿಜೆಪಿ ಜನರ ಅಭಿವೃದ್ದಿಗಾಗಿ ಯಾವುದಾದರೊಂದು ಯೋಜನೆಗೆ ಜಾರಿಗೊಳಿದ್ದರೆ ತೋರಿಸಲಿ ಎಂದು ಸವಾಲು ಹಾಕಿದರು. ಮುಂದುವರೆದು ಮಾತನಾಡಿದ ಅವರು ಕಲಬುರಗಿ ಜಿಲ್ಲೆಯ ಸಮಗ್ರ ಅಭಿವೃದ್ದಿಗಾಗಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣಅವರಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಮಾತನಾಡಿ ಅಜಯ್ ಸಿಂಗ್ ಅವರಿಗೆ ಆಶೀರ್ವಾದ ಮಾಡಿದಂತೆ ನನಗೂ ಆಶೀರ್ವಾದ ಮಾಡಿ ಸಂಸದನಾಗಿ ಆಯ್ಕೆ ಮಾಡಿ ಕಳಿಸಿದರೆ, ಜಿಲ್ಲೆಯ ಎಲ್ಲ ಜನಪ್ರತಿನಿದಿಗಳೊಂದಿಗೆ, ಶಾಸಕರೊಂದಿಗೆ ಚರ್ಚೆನಡೆಸಿ ಅಭಿವೃದ್ದಿ ಕೆಲಸ ಮಾಡಲಿದ್ದೇನೆ ಎಂದರು.
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಪ್ರತಿ ಮಹಿಳೆಯರಿಗೆ ವಾರ್ಷಿಕ ರೂ 1 ಲಕ್ಷ ಪರಿಹಾರ ನೀಡಲಾಗುವುದು ಎಂದು ಹೇಳಿದ ಡಾ ಅಜಯ್ ಸಿಂಗ್ ಜಿಲ್ಲೆಯ ಅಭಿವೃದ್ದಿಗೆ ಪಣತೊಟ್ಟು ಕೆಲಸ ಧರಂ ಸಿಂಗ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಂತೆ ರಾಧಾಕೃಷ್ಣ ಅವರು ಕೆಲಸ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ” ಜೇವರ್ಗಿ ಮತಕ್ಷೇದಿಂದ ಕನಿಷ್ಠ 10,000-15,000 ಸಾವಿರ ಮತಗಳ ಲೀಡ್ ಕೊಡುತ್ತೇವೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಕೆಕೆಆರ್ಡಿಬಿ ಅಧ್ಯಕ್ಷ ಅಜಯ್ ಸಿಂಗ್ ಮಾತನಾಡಿ, ಕಳೆದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆದ ಸೋಲು ಅವರ ವೈಯಕ್ತಿಕ ಸೋಲಲ್ಲ ಅದು ಅಭಿವೃದ್ದಿಗೆ ಆದ ಹಿನ್ನೆಡೆಯಾಗಿದೆ. ಸಂಸದರಾಗಿ ಆಯ್ಕೆಯಾದ ಉಮೇಶ ಜಾಧವ್ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಿಲ್ಲ. ಈ ಸಲ ಹಾಗಾಗಬಾರದು. ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರನ್ನು ಗೆಲ್ಲಿಸುವ ಮೂಲಕ ಕಲಬುರಗಿಯ ಸಮಗ್ರ ಅಭಿವೃದ್ದಿಗೆ ಸಹಕಾರ ನೀಡಿ ಎಂದು ಮನವಿ ಮಾಡಿದರು.
ವೇದಿಕೆಯ ಮೇಲೆ ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ, ಶಾಸಕ ಅಲ್ಲಮಪ್ರಭು ಪಾಟೀಲ, ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು, ಕೇದಾರಲಿಂಗಯ್ಯ ಮಠಪತಿ, ಶಿವಶರಣಪ್ಪ ಕೋಬಾಳ ಸೇರಿದಂತೆ ಇತರರು ಇದ್ದರು.