Monday, July 15, 2024
ಮನೆಬಿಸಿ ಬಿಸಿ ಸುದ್ದಿಶಾಂತಿ, ಅಹಿಂಸೆಯ ಸಾಕಾರಮೂರ್ತಿ ವರ್ಧಮಾನ ಮಹಾವೀರ

ಶಾಂತಿ, ಅಹಿಂಸೆಯ ಸಾಕಾರಮೂರ್ತಿ ವರ್ಧಮಾನ ಮಹಾವೀರ

ಕಲಬುರಗಿ: ಶಾಂತಿ, ತ್ಯಾಗ, ಅಹಿಂಸೆ, ಭಾತೃತ್ವ ಭಾವನೆಯನ್ನು ಎಲ್ಲರಲ್ಲಿಯೂ ಮೂಡಿಸಿ, ಅದರಂತೆಯೇ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಸಮಾಜ ಸುಧಾರಣೆಗಾಗಿ ಶ್ರಮಿಸಿದ ವರ್ಧಮಾನ ಮಹಾವೀರರ ಕೊಡುಗೆ ಪ್ರಮುಖವಾಗಿದೆ. ಅವರ ತತ್ವಗಳ ಅನುಸರಣೆಯಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ದೊರೆಯಲು ಸಾಧ್ಯವಾಗುತ್ತದೆ ಎಂದು ಜೈನ ತತ್ವ ಚಿಂತಕ ಜೀನೇಂದ್ರ ಸಾಗರಶೆಟ್ಟಿ ಅಭಿಮತಪಟ್ಟರು.

ನಗರದ ನ್ಯೂ ರಾಘವೇಂದ್ರ ಕಾಲನಿಯಲ್ಲಿರುವ ‘ಶ್ರೀ ವಿವೇಕಾನಂದ ಕೋಚಿಂಗ್ ಸೆಂಟರ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಜರುಗಿದ ‘ವರ್ಧಮಾನ ಮಹಾವೀರರ ಜಯಂತಿ’ಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಅವರು ಮಾತನಾಡಿದರು.

ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಮಾತನಾಡಿ, ಮಹಾವೀರ ಅವರು ಜೈನಧರ್ಮ ಪರಂಪರೆಯ ಕುರಿತು ಆಳವಾದ ಅಧ್ಯಯನವನ್ನು ಮಾಡಿದರು. ಅರಮನೆಯ ಸುಖ, ಭೋಗಗಳಲ್ಲಿ ತೊಡಗದೆ, ತ್ಯಾಗಿಗಳ, ವಿರಾಗಿಗಳ ಸಂಪರ್ಕ ಹೆಚ್ಚಾಗುತ್ತಾ ಸಾಗಿ, ವೈರಾಗ್ಯದತ್ತ ಮನಸ್ಸು ಒಲಿಯಿತು. ಸತತ 12 ವರ್ಷಗಳ ಕಾಲ ಘೋರ ತಪಸ್ಸನ್ನು ಮಾಡಿ, ತಮ್ಮ ‘42ನೇ’ ವಯಸ್ಸಿನಲ್ಲಿ ‘ಕೈವಲ್ಯ ಜ್ಞಾನೋದಯ’ವನ್ನು ಪಡೆದರು. ‘ಕೈವಲ್ಯಜ್ಞಾನ’ ಎಂದರೆ, ಇಂದ್ರೀಯಗಳನ್ನು ನಿಗ್ರಹಿಸಿ ಸುಖ ಹಾಗೂ ದು:ಖಗಳ ಮೇಲೆ ನಿಯಂತ್ರಣವನ್ನು ಸಾಧಿಸಿಕೊಂಡವರು ಎಂದರ್ಥವಾಗಿದೆ. ಅಂದಿನಿಂದ ಇವರನ್ನು ‘ಮಹಾವೀರ’, ‘ಜಿನ’ ಎಂದು ಕರೆಯಲು ಆರಂಭವಾಯಿತು. ಆಗ ಅವರ ಹೆಸರು ‘ವರ್ಧಮಾನ ಮಹಾವೀರ’ ಆಯಿತು. ಅವರ ಅನುಯಾಯಿಗಳನ್ನು ‘ಜೈನ’ರೆಂದು ಕರೆಯಲಾಗುತ್ತದೆಯೆಂದು ವಿವರಿಸಿದರು.

ವರ್ಧಮಾನ ಮಹಾವೀರರು ಐದು ಪ್ರತಿಜ್ಞೆಗಳನ್ನು ಮತ್ತು ನಡವಳಿಕೆಯ ಮೂರು ನಿಯಮಗಳನ್ನು ಬೋಧಿಸಿದರು. ಇವುಗಳನ್ನು ತ್ರಿರತ್ನಗಳೆಂದು ಕರೆಯುತ್ತಾರೆ. ಪಂಚ ಪ್ರತಿಜ್ಞೆಗಳೆಂದರೆ, ಅಹಿಂಸೆ, ಸತ್ಯ, ಅಸ್ತೇಯ, ಅಪರಿಗ್ರಹ, ಬ್ರಹ್ಮಚರ್ಯಗಳಾಗಿವೆ. ತ್ರಿರತ್ನಗಳೆಂದರೆ, ಸಮ್ಯಕಜ್ಞಾನ, ಸಮ್ಯಕ ದರ್ಶನ, ಸಮ್ಯಕಚಾರಿತ್ರಗಳಾಗಿವೆ. ವರ್ಧಮಾನ ಮಹಾವೀರ ಅವರು ಸೇರಿದಂತೆ, ಜೈನ ಧರ್ಮವು ಸದಾತ್ಯಾಗ, ಶಾಂತಿ, ಅಹಿಂಸೆಯ ತತ್ವಗಳನ್ನು ಸಾರ್ವಕಾಲಕ್ಕೂ ಬೋಧಿಸಿ ಅದರಂತೆಯೇ ನಡೆಯುತ್ತಿದೆ. ಪಂಪ, ರನ್ನ, ಪೊನ್ನ, ಜನ್ನರಂತಹ ಮೇರು ಕವಿಗಳು ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಶ್ರೇಷ್ಟ ಕೊಡುಗೆಗಳನ್ನು ನೀಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಕೋಚಿಂಗ್ ಸೆಂಟರ್‍ನ ಮುಖ್ಯಸ್ಥ ಬಸವರಾಜ ಮಳ್ಳಿ, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಮುಖರಾದ ಗುಣಾಧರ ಕೇಸರ್, ಸಂದೀಪ ಕೇಸರ್, ಅಜೀತ ಪಾಟೀಲ, ದರ್ಶನ ಜೆ.ಸಾಗರಶೆಟ್ಟಿ, ಕೋಚಿಂಗ್ ಕೇಂದ್ರದ ಶಿಕ್ಷಕರಾದ ಭಾಗ್ಯಶ್ರೀ ಕಲ್ಲೂರ್, ವಿಜಯಲಕ್ಷ್ಮೀ ನಾಲವಾರ, ಸುಜಾತಾ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular