ಕಲಬುರಗಿ: ಗುಲಬರ್ಗಾ ಲೋಕಸಭೆ ಚುನಾವಣೆಗೆ ಮೇ 7 ರಂದು ಚುನಾವಣೆ ನಡೆಯಲಿದ್ದು, ಮಹತ್ವದ ಈ ಪ್ರಜಾಪ್ರಭುತ್ವ ಹಬ್ಬದಲ್ಲಿ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಸಕ್ರಿಯವಾಗಿ ಎಲ್ಲರು ಭಾಗಿಯಾಗಬೇಕು ಎಂದು ಜಿಲ್ಲಾ ಪಂಚಾಯತ್ ಸಿ.ಇ.ಓ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಭಂವರ್ ಸಿಂಗ್ ಮೀನಾ ಕರೆ ನೀಡಿದರು.
ಶುಕ್ರವಾರ ಜಿಲ್ಲಾ ಸ್ವೀಪ್ ಸಮಿತಿಯಿಂದ ಚಿಂಚೋಳಿ ತಾಲೂಕಿನ ವೆಂಕಟಾಪುರ ಗ್ರಾಮದ ಸೇರಿಭಿಕನಳ್ಳಿ ತಾಂಡಾದಲ್ಲಿ ಮನೆ ಮನೆಗೆ ಭಿತ್ತಿಪತ್ರ ಹಿಡಿದುಕೊಂಡು ಹೋಗಿ ಕಡ್ಡಾಯ ಮತದಾನ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸಿ ಮಾತನಾಡಿದರು.
ತಾಲ್ಲೂಕಿನ ಗಡಿ ಭಾಗವಾದ ವೆಂಕಟಪೂರ ಗ್ರಾಮಕ್ಕೆ ಸಾರಿಗೆ ಸಂಪರ್ಕ ಇಲ್ಲ ಎಂಬುದನ್ನು ಗ್ರಾಮಸ್ಥರಿಂದ ಅರಿತ ಭಂವರ್ ಸಿಂಗ್ ಮೀನಾ ಅವರು, ಮತದಾನ ದಿನದಂದು ಮತಗಟ್ಟೆಗೆ ತೆರಳಲು ತಾಂಡಾಗೆ ವಾಹನದ ವ್ಯವಸ್ಥೆ ಮಾಡಲಾಗುವುದು. ಪ್ರತಿಯೊಬ್ಬರು ಮತಗಟ್ಟೆಗೆ ಬಂದು ತಮ್ಮ ಪವಿತ್ರವಾದ ಮತದ ಹಕ್ಕು ಚಲಾಯಿಸಬೇಕು. ಇದಲ್ಲದೆ ತಾಂಡಾ ನಿವಾಸಿಗಳು ಉದ್ಯೋಗ ಅರಸಿ ನಗರಕ್ಕೆ ವಲಸೆ ಹೋಗಿದಲ್ಲಿ ಅಂತವರನ್ನು ಸಹ ಕರೆಸಿ ಅವರ ಹಕ್ಕು ಚಲಾಯಿಸಲು ತಿಳಿಸಬೇಕು ಎಂದು ಗ್ರಾಮಸ್ಥರಿಗೆ ಭಂವರ್ ಸಿಂಗ್ ಮೀನಾ ಕರೆ ನೀಡಿದರು.
ಲೋಕಸಭಾ ಚುನಾವಣೆ ಇದು ದೇಶದ ಅತಿ ದೊಡ್ಡ ಜನತಂತ್ರದ ಹಬ್ಬವಾಗಿದ್ದು, ಪ್ರತಿಯೊಬ್ಬರು ಮತ ಚಲಾಯಿಸುವ ಮೂಲಕ ಸಂಭ್ರಮದಿಂದ ಆಚರಣೆ ಮಾಡಬೇಕು. ಮತದಾನಕ್ಕಿಂತ ಪವಿತ್ರ ಕಾರ್ಯ ಇನ್ನೊಂದಿಲ್ಲ. ನಾನು ಖಚಿತವಾಗಿ ಮತದಾನ ಮಾಡುವೆ ಎಂಬ ಪ್ರತಿಜ್ಞೆ ವಿಧಿ ಎಲ್ಲರು ಸ್ವೀಕರಿಸಬೇಕು ಎಂದರು.
ಕಲಬುರಗಿ ವೃತ್ತದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮೀಡಿಯಾ ಮಾನಿಟರ್ ಉಸ್ತುವಾರಿ ಅಧಿಕಾರಿ ಸುಮಿತಕುಮಾರ ಪಾಟೀಲ್, ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಂಕರ ರಾಠೋಡ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹ್ಮದ್ ಮುನೀರ್, ಸಹಾಯಕ ನಿರ್ದೇಶಕ(ಗ್ರಾಉ) ಶಿವಶಂಕ್ರಯ್ಯ, ತಾಲ್ಲೂಕು ಯೋಜನಾಧಿಕಾರಿ ಮಲ್ಲಿಕಾರ್ಜುನ ಕಟ್ಟಿಮನಿ, ಪಿ.ಡಿ.ಓ ದಶರಥ ಪಾತ್ರೆ ಇದ್ದರು.