ಕಲಬುರಗಿ: ರಾಜ್ಯ ಸರ್ಕಾರದ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಸಚಿವ ಬಿ. ನಾಗೇಂದ್ರ ಅವರು ವಾಲ್ಮೀಕಿ ನಿಗಮ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಮಾಡಿಕೊಂಡಿದ್ದು, ಕೂಡಲೇ ಇವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಸಂಸದ ಡಾ. ಉಮೇಶ ಜಾಧವ ಆಗ್ರಹಿಸಿದರು.
ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಪರಿಶಿಷ್ಟ ಜನಾಂಗಕ್ಕೆ ಮೀಸಲಿಟ್ಟ 187 ಕೋಟಿ ರೂ. ಹಣವನ್ನು ಲೂಟಿ ಮಾಡುವ ಮೂಲಕ ಬಡವರ ಹೊಟ್ಟೆಗೆ ಹೊಡೆದಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಆರೊಪಿಸಿ ಸರ್ಕಾರ ರಚನೆ ಮಾಡಿದ ಕಾಂಗ್ರೆಸ್ ಪಕ್ಷ ಈಗ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಅವರು ಆಪಾದಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಿಐಡಿ ತನಿಖೆ ನಡೆಸುತ್ತಿದ್ದು, ನಿಷ್ಪಕ್ಷಪಾತ ತನಿಖೆಗೆ ಕೂಡಲೇ ಸಿಬಿಐ ತನಿಖೆ ನಡೆಸಬೇಕು. ಸಚಿವರನ್ನು ಕೂಡಲೇ ವಜಾಗೊಳಿಸಿ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಶಾಸಕರಾದ ಬಸವರಾಜ ಮತ್ತಿಮಡು, ಡಾ. ಅವಿನಾಶ ಜಾಧವ, ಬಿಜೆಪಿ ಪಕ್ಷದ ವಕ್ತಾರ ಸಂತೋಷ ಹಾದಿಮನಿ ಇತರರಿದ್ದರು.