ಸುರಪುರ: ತಾಲೂಕಿನ ದೇವಾಪುರ ಗ್ರಾಮದ ಹರಿಜನವಾಡಾದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೋಣೆಗಳಲ್ಲಿ ದನಗಳ ಆವಾಸ ತಾಣವಾಗಿ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾದ ಹಾಗೂ ಶಾಲೆಯ ಮೇಲುಸ್ತುವಾರಿ ಸಮಿತಿ ರಚನೆ ಮಾಡದೆ ನಿಯಮ ಬಾಹಿರವಾಗಿ ಬ್ಯಾಂಕ್ ಖಾತೆಯನ್ನು ಚಾಲ್ತಿಯಲ್ಲಿ ಇಟ್ಟಿದ್ದ ಕುರಿತು ಮುಖ್ಯಗುರು ಶಿವಶರಣ ಅವರು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಯ ಮುಖ್ಯಗುರು ಶಿವಶರಣ ಕುದರಿ ಅವರ ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪದ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು,ಶುಕ್ರವಾರ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
ಎಸ್.ಡಿ.ಎಮ್.ಸಿ ರಚನೆ ಮಾಡುವಂತೆ ನಿಮಗೆ ಆದೇಶ ಮಾಡಿದ್ದರು,ತಾವು ಎಸ್.ಡಿ.ಎಮ್.ಸಿ ನಿಯಮ ಬದ್ಧವಾಗಿ ರಚನೆ ಮಾಡಲಾಗಿದೆ ಎಂದು ತಪ್ಪು ಮಾಹಿತಿ ನೀಡಿದ್ದೀರಿ,ಅಲ್ಲದೆ ಶಿಕ್ಷಣ ಇಲಾಖೆಯ ತಂಡ ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದಾಗ ಎಸ್.ಡಿ.ಎಮ್.ಸಿ ನಿಯಮ ಬಾಹಿರವಾಗಿ ರಚನೆ ಮಾಡಲಾಗಿದೆ ಎನ್ನುವುದು ಗೊತ್ತಾಗಿದೆ.
ಅಲ್ಲದೆ ಶಾಲೆಯ ಕೋಣೆಗಳಲ್ಲಿ ದನಗಳು ನಿಲ್ಲುತ್ತಿದ್ದು ಇದು ಮಾದ್ಯಮಗಳಲ್ಲಿ ಸುದ್ದಿ ಪ್ರಕಟವಾಗಿದ್ದು,ತಾವುಗಳು ಕರ್ತವ್ಯದಲ್ಲಿ ತೋರುತ್ತಿರುವ ನಿಷ್ಕಾಳಜಿಯಿಂದಾಗಿ ತಮ್ಮನ್ನು ಅಮಾನತ್ತು ಮಾಡಲಾಗಿದೆ ಎಂದು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.