ಸುರಪುರ: ನಗನೂರ ಗ್ರಾಮ ಪಂಚಾಯತಿ ಅಭಿವೃಧ್ಧಿ ಅಧಿಕಾರಿಗಳು ನರೇಗಾ ಯೋಜನೆಯಡಿ ಭ್ರಷ್ಟಾಚಾರ ನಡೆಸಿದ್ದು ಕೂಡಲೇ ಪಿಡಿಓ ಅವರನ್ನು ಅಮಾನತ್ತು ಮಾಡುವಂತೆ ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರು ಒತ್ತಾಯಿಸಿದರು.
ನಗರದ ತಾಲೂಕ ಪಂಚಾಯತಿ ಕಚೇರಿ ಮುಂದೆ ನೂರಾರು ಸಂಖ್ಯೆಯ ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿ ಮಾತನಾಡಿ,ನಮ್ಮ ನಗನೂರ ಗ್ರಾಪಂ ಪಿಡಿಒ ಮತ್ತು ಮೇಟಿಗಳು ನರೇಗಾ ಕೂಲಿ ಕೆಲಸ ಕೊಡದೇ ಹಾಜರಾತಿ ಹಾಕದೆ ವಂಚಿಸುತ್ತಿದ್ದಾರೆ. 2022, 2023, 2024ನೇ ಸಾಲಿನಿಂದ 50, 60 ಕೂಲಿ ಕಾರ್ಮಿಕರ ಹೆಸರಿನಲ್ಲಿ ಬೋಗಸ್ ಹಣ ಎತ್ತುವಳಿ ಮಾಡುತ್ತಿದ್ದಾರೆ. ಇದರಲ್ಲಿ ಪಿಡಿಒ ಜತೆಗೆ ಕೂಲಿ ಕಾರ್ಮಿಕರ ಹಾಜರಾತಿ ಹಾಕುವ ಮೇಟಿಗಳು ಶಾಮೀಲಾಗಿದ್ದಾರೆ. ಅವರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.
ಕೂಲಿಕಾರ್ಮಿಕರ ಹೆಸರಿನಲ್ಲಿ ಬೋಗಸ್ ಮಾಡಿ ಹಣ ಎತ್ತುವಳಿ ಮಾಡುತ್ತಿರುವ ಪಿಡಿಒ ಮತ್ತು ಮೇಟಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಹೊರರಾಜ್ಯಗಳಲ್ಲಿ ಕೆಲಸ ಮಾಡುತ್ತಿರುವವರಿಗೂ ಮೇಟಿಗಳು ನರೇಗಾ ಜಾಬ್ ಕಾರ್ಡ್ ಹೊಂದಿದವರಿಗೆ ಹಾಜರಾತಿ ಹಾಕುತ್ತಾರೆ. ಗ್ರಾಮದಲ್ಲಿ ವಾಸವಿದ್ದು ನಿತ್ಯ ಕೆಲಸ ಮಾಡುವವರಿಗೆ ಅರ್ಧ ಹಾಜರಾತಿ 129 ರೂ. ಕೂಲಿ ಹಣ ಬರುವಂತೆ ಮಾಡಿದರೆ ಕೆಲಸ ಮಾಡದವರಿಗೆ 349 ರೂ. ಹಾಕುತ್ತಾರೆ. ಇಂಥಹ ಕಾರ್ಯ ಮಾಡಿರುವವರ ವಿರುದ್ಧ ತನಿಖೆ ನಡೆಸಬೇಕು. ಮೇಟಿಗಳು ನರೇಗಾ ಕೆಲಸ ಮಾಡುವವರ ಮೇಲೆ ದೌರ್ಜನ್ಯ, ದರ್ಪ ಮೆರೆಯುತ್ತಿದ್ದಾರೆ. ಇಂತಹ ಮೇಟಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಎಚ್ಚರಿಸಿದರು.
ಒಂದು ವರ್ಷಕ್ಕೆ 20 ಲಕ್ಷ ರೂ. ಸರಕಾರದ ಹಣ ಎತ್ತುವಳಿ ಮಾಡಿ ಬೊಕ್ಕಸಕ್ಕೆ ಹಾನಿ ಮಾಡಿದ್ದಾರೆ. ಸರಕಾರಕ್ಕೆ ಮೋಸ ಮಾಡುವವರ ವಿರುದ್ಧ ಜಿಪಂ ಸಿಇಒ ನೇತೃತ್ವದಲ್ಲಿ ತನಿಖೆ ನಡೆಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಾಪಂ ಇಒ ಬಸವರಾಜ ಸಜ್ಜನ್, ಕೂಲಿಕಾರ್ಮಿಕರ ಬೇಡಿಕೆಗಳು ನ್ಯಾಯಸಮ್ಮತವಾಗಿವೆ. ಕೆಲಸ ಮಾಡುವಾಗ ಹಾಜರಾತಿ ಹಾಕಿದ ಮೇಲೆ ಎಡಿಟ್ ಮಾಡಲು ಅವಕಾಶವಿಲ್ಲ. ಇದರಿಂದ ನಿಮಗೆ ಕೂಲಿ ಕಡಿಮೆ ಬೀಳುತ್ತಿದೆ. ಈ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲೇ ಎಡಿಟ್ ಅವಕಾಶ ದೊರೆಯುವ ಸಂಭವವಿದೆ. ನಿಮ್ಮ ಎಲ್ಲ ಬೇಡಿಕೆಗಳನ್ನು ಪರಿಶೀಲಿಸಲಾಗುವುದು. ನಿಮ್ಮ ಮನವಿಯನ್ನು ಮೇಲಧಿಕಾರಿಗಳಿಗೆ ರವಾನಿಸಲಾಗುವುದು ಎಂದು ತಿಳಿಸಿದರು.
ಕೂಲಿಕಾರ್ಮಿಕರಾದ ಅರ್ಜುನ ಆಲಗೂರು, ಭೀಮಮ್ಮ, ಅಯ್ಯಪ್ಪ, ಸಿದ್ಧಣ್ಣ, ಶರಣಪ್ಪ, ಎಚ್.ಎಂ. ಹುಲಗಪ್ಪ, ಲಕ್ಷ್ಮಣ ಖಾನಾಪುರ, ದೇವಪ್ಪ ಕಟ್ಟಿಮನಿ, ಭೀಮಣ್ಣ ಕಟ್ಟಿಮನಿ, ಸದಾನಂದ ಕಟ್ಟಿಮನಿ, ದೇವಕ್ಕಮ್ಮ, ಸದಾಶಿವ ಚನ್ನೂರ, ಸಂಗಮ್ಮ ಬಡಿಗೇರಾ, ಮಾತಮ್ಮ, ಶಿವಮ್ಮ, ಚಂದಪ್ಪ ಖಾನಪುರ, ಸಂಜು ರಡ್ಡಿ ಖಾನಾಪುರ, ಗೌರಮ್ಮ ಹವಾಲ್ದಾರ, ಮಂಜುಳಾ ಆಲಗೂರ, ಮಾನಮ್ಮ ನಾಕೊಡ್ಡಿ, ರಂಗಮ್ಮ ಚೆನ್ನೂರ, ದೇವಮ್ಮ ಕರಕಳಿ ಸೇರಿದಂತೆ ಇತರರಿದ್ದರು.