ಪತ್ರಕರ್ತ ಮಾನು ನಿಧನಕ್ಕೆ ಪತ್ರಕರ್ತರ ಸಂಘದಿಂದ ನುಡಿ ನಮನ

0
61

ಕಲಬುರಗಿ: ನಾಡಿನ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದ ಹಿರಿಯ ಪತ್ರಕರ್ತ ವೆಂಕಟೇಶ ಮಾನು ಅವರ ನಿಧನ ಹಿನ್ನೆಲೆಯಲ್ಲಿ ನಗರದ ಪತ್ರಿಕಾ ಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶುಕ್ರವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಹಿರಿಯ ಪತ್ರಕರ್ತರು, ಒಡನಾಡಿಗಳು, ಅತ್ಯಂತ ಜವಾಬ್ದಾರಿಯುತ ಪತ್ರಕರ್ತರಾಗಿದ್ದ ವೆಂಕಟೇಶ ಮಾನು ಸರಳ ವ್ಯಕ್ತಿತ್ವ ರೂಪಿಸಿಕೊಂಡು ಜನಪರ ಪತ್ರಕರ್ತ, ಮೃದು ಭಾಷಿಯಾಗಿದ್ದು, ಜನಪರ ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದರು.
ಕಲಬುರಗಿಯನ್ನು ಕಾರ್ಯಕ್ಷೇತ್ರ ಮಾಡಿಕೊಂಡು ವರದಿಗಾರರಾಗಿ, ಉಪ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದರು ಎಂದು ಸ್ಮರಿಸಿದರು.

Contact Your\'s Advertisement; 9902492681

ಹಿರಿಯ ಪತ್ರಕರ್ತ ಟಿ.ಶಿವಾನಂದನ ಮಾತನಾಡಿ, ವೆಂಕಟೇಶ ಮಾನು ಸುಮಾರು ಮೂರು ದಶಕ ಪತ್ರಿಕೋದ್ಯಮದಲ್ಲಿದ್ದರೂ ಅಂತಿಮ ದಿನಗಳಲ್ಲಿ ಹಲವು ಸವಾಲುಗಳನ್ನು ಎದುರಿಸಿದ್ದರು. ಆರ್ಥಿಕ ಸಂಕಷ್ಟ ಎದುರಿಸಿದ್ದರು. ಆದ್ದರಿಂದ ಕಾರ್ಫಸ್ ಪಂಡ್ ಸೃಜಿಸಬೇಕು. ನಿಶ್ಚಿತ ಪಿಂಚಣಿ ಸೇರಿ ಇತರ ಸೌಲಭ್ಯ ದೊರೆಯುವಂತೆ ಮಾಡಬೇಕು. ಸರ್ಕಾರದಿಂದ ಸಹಾಯಧನ ಒದಗಿಸಿ, ಕುಟುಂಬಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಹೇಳಿದರು.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಡಾ. ಶಿವರಂಜನ ಸತ್ಯಂಪೇಟೆ ಮಾತನಾಡಿ, ಆತ್ಮೀಯ ಒಡನಾಡಿಯಾಗಿದ್ದ ವೆಂಕಟೇಶ ಮಾನು ಅವರು ಮಿತ ಭಾಷಿಯಾಗಿದ್ದರು. ವೈಚಾರಿಕ ಬರಹಗಾರರು, ನಿಷ್ಠುರವಾದಿ ಹಾಗೂ ಚಿಕಿತ್ಸಕ ಬುದ್ಧಿಮತ್ತೆಯಿಂದ ತಮ್ಮದೇ ಆದ ಛಾಪು ಮೂಡಿಸಿದ್ದರು.

ಇಂದಿನ ತಳುಕು ಬಳುಕಿನ ಮಾಧ್ಯಮ ಲೋಕದಲ್ಲಿಯೂ ಬಹಳ ಸರಳ ಜೀವನ ನಡೆಸುತ್ತಿದ್ದ ಅವರು, ಸಂಸಾರದ ಜಂಜಡದಲ್ಲಿ ತುಂಬಾ ಸೋತು ಹೋಗಿದ್ದರು. ಅವರ ಅಗಲಿಕೆ ಪತ್ರಿಕಾಲೋಕಕ್ಕೆ ತುಂಬಲಾರದ ನಷ್ಟ ಎಂದು ನುಡಿ ನಮನ ಸಲ್ಲಿಸಿದರು.

ಹಿರಿಯ ಪತ್ರಕರ್ತ ಸುಭಾಷ ಜೋಶಿ, ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ, ಸುಭಾಷ ಬಣಗಾರ, ಸಂಗಮನಾಥ ರೇವತಗಾಂವ, ಭವಾನಿ ಸಿಂಗ್ ಠಾಕೂರ್, ಶಿವಲಿಂಗಪ್ಪ ದೊಡ್ಡಮನಿ, ಸಿದ್ದಣ್ಣ ಮಾಲಗಾರ, ಬಿ.ವಿ.ಚಕ್ರವರ್ತಿ, ಶರಣಗೌಡ ಪಾಳಾ, ಮಹೇಶ ಕುಲ್ಕರ್ಣಿ , ಸಿದ್ದಣ್ಣ ಮಾಲಗಾರ. ರಮೇಶ ಮೇಳಕುಂದಾ ನುಡಿ ನಮನ ಸಲ್ಲಿಸಿದರು. ದೇವೇಂದ್ರಪ್ಪ ಅವಂಟಿ ನಿರೂಪಣೆ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here