ಕಲಬುರಗಿ: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಮಂಗಳವಾರ ಕಮಲಾಪುರ ಪಟ್ಟಣದ ಕೋಹಿನೂರ ಕಲ್ಯಾಣ ಮಂಟಪದಲ್ಲಿ ನಡೆದ ತಾಲೂಕಾ ಮಟ್ಟದ ಜನಸ್ಪಂದನ ಸಭೆಯಲ್ಲಿ ಭಾಗವಹಿಸಿ ಸಾರ್ವಜನಿಕರ ಕುಂದುಕೊರತೆ ಆಲಿಸಿದಲ್ಲದೆ ಸ್ಥಳದಲ್ಲಿಯೇ 21 ಜನರಿಗೆ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಆದೇಶ ಪತ್ರ ವಿತರಣೆ ಮಾಡಿದರು.
ಜನಸ್ಪಂದನಾ ಸಭೆಯಲ್ಲಿ ಸಲ್ಲಿಕೆಯಾದ ಸುಮಾರು 120 ಅರ್ಜಿಗಳ ಪೈಕಿ ಪಿಂಚಣಿಗೆ ಸಂಬಂಧಿಸಿದ 21 ಅರ್ಜಿಗಳಿಗೆ ಸ್ಥಳದಲ್ಲಿಯೇ ಬಗೆಹರಿಸಲಾಯಿತು. ಇದರಲ್ಲಿ ವಿಧವಾ ವೇತನ, ವಿಶೇಷ ಚೇತನ ವೇತನ, ಸಂಧ್ಯಾ ಸುರಕ್ಷಾ ವೇತನ, ಹಿರಿಯ ನಾಗರಿಕರ ವೇತನ ಪಿಂಚಣಿ ಸೇರಿವೆ. ಇನ್ನುಳಿದ ಅರ್ಜಿಗಳ ವಿಲೇವಾರಿಗೆ ಸಂಬಂಧ ತಾಲೂಕಾ ಮಟ್ಟದ ಅಧಿಕಾರಿಗಳಿಗೆ ವರ್ಗಾಯಿಸಲಾಯಿತು.
ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ-ಕರ್ನಾಟಕ ಫಸಲ್ ಬಿಮಾ ಬೆಳೆ ವಿಮೆ ಯೋಜನೆಯಡಿ ನೊಂದಣಿಗೆ ರೈತರಿಗೆ ಕರೆ ನೀಡಿದ ಜಿಲ್ಲಾಧಿಕಾರಿಗಳು ಬೆಳೆ ವಿಮೆ ಕುರಿತು ಪೋಸ್ಟರ್ ಬಿಡುಗಡೆಗೊಳಿಸಿದರು. ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ ಇದ್ದರು.
ಸಭೆಯಲ್ಲಿ ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಸಹಾಯಕ ಆಯುಕ್ತೆ ರೂಪಿಂದರ್ ಸಿಂಗ್ ಕೌರ್, ತಹಶೀಲ್ದಾರ ಮೊಹಮ್ಮದ್ ಮೋಹಸಿನ್, ಎ.ಸಿ.ಪಿ ಬಿಂದುರಾಣಿ, ಗ್ರೇಡ್-2 ತಹಶೀಲ್ದಾರ ಗಂಗಾಧರ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಇದ್ದರು.
ಕಾಳಗಿಯಲ್ಲಿಯೂ ಜನಸ್ಪಂದನಾ ಸಭೆ,ಸೌಲಭ್ಯ ವಿತರಣೆ: ಮಂಗಳವಾರ ಕಾಳಗಿ ಪಟ್ಟಣದ ಕಾಳೇಶ್ವರ ದೇವಸ್ಥಾನದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರು ಭಾಗಿಯಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ಕಿವಿಯಾದರು. ಶಾಂತಚಿತ್ತದಿಂದ ಪ್ರತಿಯೊಬ್ಬರ ಸಮಸ್ಯೆ ಆಲಿಸಿ ಕೆಲ ಸಮಸ್ಯೆಗಳಿಗೆ ಸ್ಥಳದಲ್ಲಿಯೆ ಮುಕ್ತಿ ನೀಡಿದರು.
ಒಟ್ಟಾರೆ 83 ಅರ್ಜಿ ಸಲ್ಲಿಕೆಯಾದವು. ಇದೇ ಸಂದರ್ಭದಲ್ಲಿ ಎ.ಬಿ.ಆರ್.ಕೆ. ಆರೋಗ್ಯ ಕಾರ್ಡ್, ಪಿಂಚಣಿ ಮಂಜೂರಾತಿ ಆದೇಶ, ಪಡಿತರ ಚೀಟಿ, ಪೌರ ಕಾರ್ಮಿಕರಿಗೆ ರೇನ್ ಕೋಟ್, ಸುಕನ್ಯಾ ಸಮೃದ್ಧಿ ಪಾಸ್ ಬುಕ್ ವಿತರಣೆ ಮಾಡಲಾಯಿತು. ತಹಶೀಲ್ದಾರ ಘಮಾವತಿ ರಾಠೋಡ, ತಾಲೂಕ ಪಂಚಾಯತ್ ಇ.ಓ ವಿಲಾಸರಾಜ ಸೇರಿದಂತೆ ಅನೇಕ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.