ಕಲಬುರಗಿ: ಗೌರಿ-ಗಣೇಶ ಹಬ್ಬ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಪಿ.ಓ.ಪಿ ಗಣಪನನ್ನು ತ್ಯಜಿಸಿ ಪರಿಸರ ಸ್ನೇಹಿ ಮಣ್ಣಿನ ಗಣಪನನ್ನು ಪ್ರತಿಷ್ಠಾಪಿಸುವ ಮೂಲಕ ಗಣೇಶೋತ್ಸವನ್ನು ಅರ್ಥಪೂರ್ಣವಾಗಿ ಆಚರಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.
ಗುರುವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗಣೇಶ ಹಬ್ಬ ಹಿನ್ನೆಲೆಯಲ್ಲಿ
ಅಧಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಅವರು, ಈ ಕುರಿತಂತೆ ಕಲಬುರಗಿ
ನಗರ ಮತ್ತು ಜಿಲ್ಲೆಯ ಜನತೆಗೆ, ಸಂಘ-ಸಂಸ್ಥೆಗಳಿಗೆ, ಪ್ರತಿಷ್ಠಾಪನಾ ಮಂಡಳಿಗಳಿಗೆ ಈಗಿನಿಂದಲೆ ಅರಿವು ಮೂಡಿಸಬೇಕು. ಸಾರ್ವಜನಿಕರು ಸಹ ಮಣ್ಣನಿಂದ ತಯ್ಯಾರಿಸಿದ ಮತ್ತು ಮಣ್ಣಿನಲ್ಲಿ ಬೆರೆಯುವ ಪರಿಸರ ಸ್ನೇಹಿ ಗಣಪನ್ನನ್ನು ಪ್ರತಿಷ್ಠಾಪಿಸುವ ಮೂಲಕ ಹಬ್ಬ ಆಚರಿಸಬೇಕು ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರು ಕರೆ ನೀಡಿದರು.
ರಾಜ್ಯದಾದ್ಯಂತ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಒ.ಪಿ) ಹಾಗೂ ರಾಸಾಯನಿಕ ಗುಣಗಳುಳ್ಳ ವಸ್ತುಗಳನ್ನು ಬಳಸಿ ತಯಾರಿಸಲಾದ ಗಣೇಶ ವಿಗ್ರಹಗಳ ಉತ್ಪಾದನೆ, ಮಾರಾಟ ಮತ್ತು ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ. ಅಲ್ಲದೆ ಜಲ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ರಾಸಾಯನಿಕಯುಕ್ತ ಬಣ್ಣದಿಂದ ಅಲಂಕೃತಗೊಂಡಂತಹ ಯಾವುದೇ ರೀತಿಯ ವಿಗ್ರಹಗಳನ್ನು ನದಿ, ಕೆರೆ, ತೊರೆ, ಹಳ್ಳ, ಕಾಲುವೆಗಳಲ್ಲಿ ವಿಸರ್ಜನೆಗೆ ಅವಕಾಶ ಇಲ್ಲ. ಹೀಗಾಗಿ ಪೌರ ಸಂಸ್ಥೆಗಳು ಪಟ್ಟಣದಲ್ಲಿ ಪ್ರತ್ಯೇಕವಾಗಿ ಬಾವಿ ಗುರುತಿಸಿ ಅಲ್ಲಿ ಗಣಪನ ಮೂರ್ತಿಗಳನ್ನು ವಿಸರ್ಜನೆಯಾಗುವಂತೆ ನೋಡಿಕೊಳ್ಳಬೇಕು ಎಂದರು.
ಸಿಂಗಲ್ ವಿಂಡೋ ಸಿಸ್ಟಮ್ ತೆರೆಯಿರಿ: ಗಣೇಶ ಪ್ರತಿಷ್ಠಾನ ಮಂಡಳಿಗಳು ಗಣೇಶನನ್ಮು ಪ್ರತಿಷ್ಠಾಪಿಸುವ ಸಂಬಂಧ ವಿವಿಧ ಇಲಾಖೆಗೆ ಪರವಾನಿಗೆ ಪಡೆಯಲು ಅಲೆದಾಡುವುದನ್ನು ತಪ್ಪಿಸಲು ಪಟ್ಟಣ ಪ್ರದೇಶದಲ್ಲಿ ಸಿಂಗಲ್ ವಿಂಡೋ ಸಿಸ್ಟಮ್ ತೆರೆದು ಪರವಾನಿಗೆ ನೀಡಬೇಕು. ಶಬ್ದ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚು ಶಬ್ದಗಳ ಧ್ವನಿವರ್ಧಕ ಬಳಸದಂತೆ ಪರವಾನಿಗೆಯಲ್ಲಿ ಷರತ್ತು ವಿಧಿಸಬೇಕು ಎಂದರು.
ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಕಲಬುರಗಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಸೋಮಶೇಖರ್ ಕೆ.ಎಂ ಮಾತನಾಡಿ, ಜಿಲ್ಲೆಯಲ್ಲಿ ಪಿ.ಓ.ಪಿ ಗಣಪ ತಯ್ಯಾರಿ ಮಾರಾಟ ಮಾಡುವ ಮೂವರುಗಳಿಗೆ ಈಗಾಗಲೆ ನೋಟಿಸ್ ಜಾರಿ ಮಾಡಿ ಮಾರಾಟ ಮಾಡದಂತೆ ನೋಟಿಸ್ ನೀಡಲಾಗಿದೆ. ಇದನ್ನು ಉಲ್ಲಂಘಿಸಿದಲ್ಲಿ ಸ್ಥಳೀಯ ಸಂಸ್ಥೆಗಳು ಈ ಬಗ್ಗೆ ದಾಳಿ ಮಾಡಿ ಪಿ.ಓ.ಪಿ ಗಣಪನನ್ನು ವಶಪಡಿಸುಕೊಳ್ಳುವಂತೆಯೂ ತಿಳಿಸಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಕಲಬುರಗಿ ಪ್ರಾದೇಶಿಕ ಕಚೇರಿಯ ಉಪ ಪರಿಸರ ಅಧಿಕಾರಿ ಸಣಬಾಳ್ ವೆಂಕಟೇಶ, ಸಹಾಯಕ ಪರಿಸರ ಅಧಿಕಾರಿಗಳಾದ ಸುಧಾರಾಣಿ, ಶಾರದಾ, ತಾಲೂಕಿನ ತಹಶೀಲ್ದಾರರು, ತಾಲೂಕಾ ಪಂಚಾಯತ್ ಇ.ಓ ಹಾಗೂ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಇದ್ದರು.