ಕಲಬುರಗಿ: ಇಡೀ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ಕಲಬುರಗಿ, ಬೀದರ್ ಹಾಗೂ ರಾಯಚೂರು ಜಿಲ್ಲೆಗಳಿಗೆ ಸ್ವಾತಂತ್ರ್ಯ ಸಿಗದೇ ನಿಜಾಮ್ ಆಡಳಿತಕ್ಕೆ ಒಳಪಟ್ಟಿದ್ದವು. ವಿದ್ಯಾರ್ಥಿಗಳು ಕಲ್ಯಾಣ ಕರ್ನಾಟಕದ ಇತಿಹಾಸ ಅರಿಯಲು ಮುಂದಾಗಬೇಕು ಎಂದು ಹಿರಿಯ ಪತ್ರಕರ್ತ ದೇವಯ್ಯ ಗುತ್ತೇದಾರ ಹೇಳಿದರು.
ನಗರದ ಸರ್ವಜ್ಞ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕಿರಣ ಗ್ರಾಮೀಣ ಅಭಿವೃದ್ಧಿ ಸಂಘ ಹಾಗೂ ಸೌಭಾಗ್ಯಸಿರಿ ಸಾಮಾಜಿಕ ಸೇವಾ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ವಿಮೋಚನಾ ಚಳವಳಿಯ ನೆನಪು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ನಿರ್ದಿಷ್ಟವಾದ ಮತ್ತು ಆಸಕ್ತಿಯ ಜ್ಞಾಪಕ ಶಕ್ತಿ ಅವಶ್ಯವಾಗಿದೆ. ಕೇವಲ ಪಠ್ಯಕ್ಕಷ್ಟೇ ಓದು ಸೀಮಿತವಾಗದೆ ಜೀವನದ ಮಾರ್ಗದರ್ಶನಕ್ಕೂ ಪೂರಕವಾಗಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶಿವಶರಣಪ್ಪ ಮುಳೆಗಾಂವ ಅವರು, ಇತಿಹಾಸ ಹಿಂದಿನ ನೆನಪುಗಳನ್ನು ತಿಳಿಸಿಕೊಡುತ್ತವೆ. ಸೆ. ೧೭ ರ ಕಲ್ಯಾಣ ಕರ್ನಾಟಕ ಉತ್ಸವ ಸ್ವಾತಂತ್ರ ಉತ್ಸವ ದಷ್ಟೇ ಅದ್ಧೂರಿಯಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಆರಂಭಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಕಿರಣ ಗ್ರಾಮೀಣ ಅಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥ ನಾಲವಾರಕರ್, ಸೆ. ೧೭ರಂದು ಕಲಬುರಗಿಯಲ್ಲಿ ನಡೆಯಲಿರುವ ಸಚಿವ ಸಂಪುಟದ ಸಭೆಯಲ್ಲಿ ಈ ಭಾಗದ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆಯಾಗಬೇಕು, ಕಲಬುರಗಿ ಜಿಲ್ಲೆಗೆ ವಿಶೇಷ ಪ್ಯಾಕೇಜ್ ನೀಡಬೇಕು ಹೇಳಿದರು.
ವೇದಿಕೆಯ ಮೇಲೆ ಸರ್ವಜ್ಞ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಚನ್ನಾರೆಡ್ಡಿ ಪಾಟೀಲ್. ಕೆಕೆಸಿಸಿಐ ಮಾಜಿ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ, ಕನ್ನಡ ಅಭಿವೃದ್ಧಿ ಪ್ರಾಧೀಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ್ ಸೇರಿದಂತೆ ಇನ್ನಿತರರಿದ್ದರು. ಇದೇ ಕಾರ್ಯಕ್ರಮದಲ್ಲಿ ಸಿಂಡಿಕೇಟ್ ನೂತನ ಸದಸ್ಯರಾದ ಎಸ್.ಪಿ. ಸುಳ್ಳದ, ಮಲ್ಲಣ್ಣ ಮಡಿವಾಳ ಹಾಗೂ ಗ್ಯಾರಂಟಿ ಅನುಷ್ಟಾನ ಸಮಿತಿಯ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರ ಅವರನ್ನು ಸತ್ಕರಿಸಲಾಯಿತು.