- ಎಂ.ಡಿ ಮಶಾಖ ಚಿತ್ತಾಪುರ
ಚಿತ್ತಾಪುರ: ಸತತವಾಗಿ ಮಳೆ ಬರುತ್ತಿರುವ ಕಾರಣ ಮಳೆ ನೀರು ಹಾಗೂ ಚರಂಡಿ ನೀರು ಸೇರಿ ರಸ್ತೆಯ ಮೇಲೆ ಸಂಗ್ರಹಗೊಂಡು ವಾತಾವರಣ ಕಲುಷಿತಗೊಂಡಿದೆ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಕಾರಣ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಿ ಬ್ಲಿಚಿಂಗ್ ಪೌಡರ್ ಸಿಂಪಡಿಸಿ, ಫ್ಯಾಗಿಂಗ್ ಮಶೀನ್ ಮೂಲಕ ಕೀಟನಾಶಕ ಸಿಂಪರಣೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ನೇತೃತ್ವದಲ್ಲಿ ಮುಖಂಡರು ಪ್ರತಿಭಟಿಸಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ನಂತರ ತಾಲೂಕು ಅಧ್ಯಕ್ಷ ಮೌನೇಶ್ ಭಂಕಲಗಿ ಮಾತನಾಡಿ, ಈಗಾಗಲೇ ಪ್ರತಿದಿನ ಸತತವಾಗಿ ಮಳೆ ಬರುತ್ತಿರುವ ಕಾರಣ ತಾಲೂಕಿನ ಗ್ರಾಮಗಳಲ್ಲಿ ಮಳೆ ನೀರು ಬಂದ ನಂತರ ಚರಂಡಿಗಳು ಭರ್ತಿಯಾಗಿ ಸದರಿ ಚರಂಡಿಗಳ ನೀರು ರಸ್ತೆಯ ಮೇಲೆ ಬಂದು ನಿಲ್ಲುತ್ತದೆ ಇದರಿಂದ ಚಿಕ್ಕ ಮಕ್ಕಳಿಗೆ, ವೃದ್ಧರಿಗೆ, ಮಹಿಳೆಯರಿಗೆ ಮಲೇರಿಯಾ, ಡೆಂಗ್ಯೂನಂತಹ ರೋಗಗಳು ಬರುವ ಸಂಭವವಿದೆ ಆದ್ದರಿಂದ ಕೂಡಲೇ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಚರಂಡಿ ಸ್ವಚ್ಛಗೊಳಿಸಿ ಗ್ರಾಮಸ್ಥರ ಆರೋಗ್ಯ ಕಾಪಾಡಬೇಕು ಎಂದು ಆಗ್ರಹಿಸಿದರು.
ಈ ಕೂಡಲೇ ಎಲ್ಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಆದೇಶ ಮಾಡಬೇಕು ಎಂದು ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಶಿವಕುಮಾರ ಸುಣಗಾರ, ಕರಣಕುಮಾರ್ ಅಲ್ಲೂರ್, ಮಲ್ಲಿಕಾರ್ಜುನ ಅಲ್ಲೂರ್, ಸಂಗು ಯರಗಲ್, ಗೂಳಿನಾಥ ಡಿಗ್ಗಿ, ಮಲ್ಲಿಕಾರ್ಜುನ್ ಡೋಣಗಾಂವ, ಬಸವರಾಜ್ ದಂಡಗುಂಡ, ವಿಶ್ವ ದಂಡಗುಂಡ, ಈರಣ್ಣ ಮಸಬ್, ಬಸವರಾಜ ಬೀಮನಹಳ್ಳಿ ಸೇರಿದಂತೆ ಇತರರು ಇದ್ದರು.