ಕಲಬುರಗಿ: ಸಾಮರಸ್ಯವೆಂದರೆ ಕೇವಲ ಹಿಂದು ಮುಸ್ಲಿಂ ಅಷ್ಟೇ ಅಲ್ಲ. ಅಲ್ಲಿ ಕೆಳ,ಮಧ್ಯಮ, ಮೇಲ್ವರ್ಗ ಇರುವಂತೆ ವಿವಿಧ ಸಂಸ್ಕೃತಿಗಳು ಕೂಡ ಅಡಕವಾಗಿರುತ್ತವೆ. ಇಂತಹ ಸಾಮರಸ್ಯದ ಬದುಕನ್ನು ಕುರಿತು ಸೃಜನಾತ್ಮಕವಾಗಿ ಬರೆಯಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ತಿಳಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಶರಣಬಸವ ವಿಶ್ವ ವಿದ್ಯಾಲಯದ ಸಹಯೋಗದಲ್ಲಿ ಕನ್ನಡ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಕನ್ನಡ ಸಾಮರಸ್ಯದ ನೆಲೆಗಳು ಮಾಲಿಕೆ’ ಕಾರ್ಯಾಗಾರದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಆಗಿನ ಕಾಲದ ಸೌಹಾರ್ದ ಸಂಸ್ಕೃತಿಯನ್ನು ಮರು ಕಟ್ಟಬೇಕು ಎಂದು ಕರೆ ನೀಡಿದರು.
ಸಾಮರಸ್ಯದ ನೆಲೆಗಳು ಕುರಿತು ಬರೆಯುವಾಗ ಸಾಮರಸ್ಯ, ಭಾವೈಕ್ಯ, ಸೌಹಾರ್ದ ಪದಗಳನ್ನು ಬಳಸದೆ ಸೃಜನಾತ್ಮಕವಾಗಿ ಹೃದಯ ಭಾಷೆಯಲ್ಲಿ ಮಕ್ಕಳಿಗೆ ಮುಟ್ಟುವ ರೀತಿಯಲ್ಲಿ ಬರೆಯಬೇಕು ಎಂದು ತಿಳಿಸಿದರು.
12ನೇ ಶತಮಾನದ ಬಸವಾದಿ ಶರಣರು ದೇವರಿಗೆ ಕನ್ನಡ ಕಲಿಸಿದ ಕೀರ್ತಿಯಿದ್ದು, ಸಿದ್ಧ ಮಾದರಿಯನ್ನು ಹೊಡೆದು ಹಾಕಿ ಸಾಧ್ಯವಾದಷ್ಟು ಸರಳ ಭಾಷೆಯಲ್ಲಿ ಸಣ್ಣ ಸಣ್ಣ ವಾಕ್ಯಗಳಲ್ಲಿ ಬರೆಯಬೇಕು ಎಂದರು.
ಪ್ರಾಧಿಕಾರದ ಈ ಮಾಲಿಕೆಯಲ್ಲಿ ಎಲ್ಲ ಜಿಲ್ಲೆಯನ್ನು ಒಳಗೊಳ್ಳುವಂತೆ ಮಾಡಲಾಗಿದ್ದು, ಕರ್ನಾಟಕದ ಅಘೋಷಿತ ಸಂಸ್ಕೃತಿಯ ಬಗ್ಗೆ ಬರೆಯಬೇಕು ಎಂದು ವಿವರಿಸಿದರು.
ಪ್ರಾಧಿಕಾರದ ವತಿಯಿಂದ ಸ್ಥಳನಾಮ, ಸಣ್ಣ ಭಾಷೆಗಳ ಉಳಿಯುವಿಕೆಗೆ ಸಂಬಂಧಿಸಿದಂತೆ ಮಹತ್ವದ ಯೋಜನೆಗಳನ್ನು ಹಾಕಿಕೊಳ್ಳಲಾಗಿದ್ದು, ವರ್ತಮಾನದ ಅಗತ್ಯಗಳ ಕುರಿತು ಚಿಂತಿಸಿ ಕನ್ನಡ ಜನಾಂದೋಲದ ಭಾಷೆಯಾಗಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ ಅಧ್ಯಕ್ಷತೆ ವಹಿಸಿದ್ದರು. ಶರಣ ಬಸವ ವಿವಿ ಕುಲಸಚಿವ (ಮೌಲ್ಯಮಾಪನ) ಡಾ. ಎಸ್. ಎಚ್. ಹೊನ್ನಳ್ಳಿ, ಶರಣ ಬಸವ ವಿವಿ ಆಂಗ್ಲ ವಿಭಾಗದ ಮುಖ್ಯಸ್ಥೆ ಕಾವೇರಿ ಕಾಮಶೆಟ್ಟಿ, ಕನ್ನಡ ಅಧ್ಯಯನ ಸಂಸ್ಥೆ ಮುಖ್ಯಸ್ಥ ಡಾ. ಕಲ್ಯಾಣರಾವ ಪಾಟೀಲ, ಅಕ್ಕಲಕೋಟ ಸಿ.ಬಿ. ಖೆಡಗಿ ಬಸವೇಶ್ವರ ಕಾಲೇಜಿನ ಕನ್ನಡ ಪ್ರಾದ್ಯಾಪಕ ಡಾ. ಗುರುಲಿಂಗಪ್ಪ ದಬಾಲೆ ವೇದಿಕೆಯಲ್ಲಿದ್ದರು.
ಡಾ. ನಾನಾಗೌಡ ಪಾಟೀಲ ಹಚ್ಚಡದ, ಡಾ. ಚಿಕ್ಕಮಠ, ಡಾ.ಸಾರಿಕಾದೇವಿ ಕಾಳಗಿ, ಡಾ. ಚನ್ನಮ್ಮ ಅಲ್ಬಾ ಇತರರಿದ್ದರು.