ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

0
188

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ ದಾಸ್ತಾನು ಕುರಿತು ಮಾಹಿತಿ ಬಂದ ತಕ್ಷಣವೆ ಇಲಾಖೆಯ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶಿಲಿಸಿದಾಗ ಅದು ಅಕ್ರಮ ಅಕ್ಕಿ ಅಲ್ಲ, ಬದಲಾಗಿ ಕಾನೂನು ಬದ್ಧವಾಗಿಯೇ ಅಕ್ಕಿ ಖರೀದಿಸಿದ ದಾಖಲೆಗಳು ಹಾಜರುಪಡಿಸಿದ ಕಾರಣ ಪ್ರಕರಣ ದಾಖಲಿಸಿಲ್ಲ. ಮಣಿಕಂಠ ರಾಠೋಡ ಅವರ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಆಹಾರ ಇಲಾಖೆ ಉಪನಿರ್ದೇಶಕ‌ ಭೀಮರಾಯ ಸ್ಪಷ್ಟನೆ ನೀಡಿದ್ದಾರೆ.

ಅ.2 ರಂದು ರಾತ್ರಿ 9 ಗಂಟೆ ಸುಮಾರಿಗೆ ಮಹೇಶ ಎಂಬ ವ್ಯಕ್ತಿ ದೂರವಾಣಿ ಕರೆ ಮಾಡಿ ಕಲಬುರಗಿ ಹೊರವಲಯದ ನಂದೂರು ಕೈಗಾರಿಕಾ ವಸಾಹತು ಪ್ರದೇಶದ ದಾಲ್‌ಮಿಲ್ ಒಂದರಲ್ಲಿ ಸರ್ಕಾರದ ವಿವಿಧ ಯೋಜನೆಯಡಿ ಹಾಗೂ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಸೇರಿದ ಅಕ್ಕಿ ಅಕ್ರಮ ದಾಸ್ತಾನು ಮಾಡಿರುವುದಾಗಿ ಮಾಹಿತಿ ನೀಡಿದ ತಕ್ಷಣವೇ ಇಲಾಖೆಯ ಆಹಾರ ನಿರೀಕ್ಷಕರಿಗೆ ಈ ಕುರಿತು ಸ್ಥಳಕ್ಕೆ ಭೇಟಿ ನೀಡುವಂತೆ ಸೂಚನೆ ನೀಡಲಾಗಿತ್ತು.

Contact Your\'s Advertisement; 9902492681

ಅದರಂತೆ ಆಹಾರ ನಿರೀಕ್ಷಕರು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯ ಪಿ.ಎಸ್.ಐ ಹಾಗೂ ಇತರೆ ಪೊಲೀಸ್ ಸಿಬ್ಬಂದಿಯವರೊಂದಿಗೆ ನಂದೂರು ಕೈಗಾರಿಕಾ ವಸಾಹತು ಪ್ರದೇಶದಲ್ಲಿನ ಬಸವರಾಜ ವಿ.ಪಾಟೀಲ ಅವರಿಗೆ ಸೇರಿದ ನ್ಯಾಷನಲ್ ಪಲ್ಸಸ್ ಇಂಡಸ್ಟ್ರೀಸ್ ದಾಲ್ ಮಿಲ್ ಗೆ ಭೇಟಿ ನೀಡಿ ಪರಿಶೀಲಿಸಿದಾಗ ಅಂದಾಜು 280 ಕ್ವಿಂ. ತೊಗರಿ ಬೇಳೆ, ಅಂದಾಜು 50 ಕೆ.ಜಿ. ತೂಕವುಳ್ಳ 15 ಪ್ಲಾಸ್ಟಿಕ್ ಚೀಲಗಳು (7.50 ಕ್ವಿಂಟಾಲ್) ಅಕ್ಕಿ ಮಾತ್ರ ದಾಸ್ತಾನಿರುವುದು ಕಂಡುಬಂದಿದೆ.

ಈ ಕುರಿತು ಬಸವರಾಜ ವಿ. ಪಾಟೀಲ್ ರವರನ್ನು ವಿಚಾರಿಸಿದಾಗ ತಮ್ಮ ಪತ್ನಿ ನಿರ್ಮಲಾ ಹಾಗೂ ಸೊಸೆ ಸಂಗೀತಾ ಅವರ ಒಡೆತನದ ಶ್ರೀ ಶಿವಪಾರ್ವತಿ ಇಂಡಸ್ಟ್ರೀಸ್ ಸಾರ್ವಜನಿಕ ವಿತರಣಾ ಪದ್ಧತಿಯಡಿ ಕಲಬುರಗಿ ಜಿಲ್ಲೆಗೆ ಅಕ್ಕಿ ಸರಬರಾಜು ಮಾಡಲು ಕೇಂದ್ರೀಯ ಭಂಢಾರ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಅದರಂತೆ ಮುಕ್ತ ಮಾರುಕಟ್ಟೆಯ ಏಜೆನ್ಸಿಗಳಾದ ತೆಲಂಗಾಣಾದ ರಂಗಾರೆಡ್ಡಿ ಜಿಲ್ಲೆಯ ಹರಿಕೇಶ್ ಎಂಟರ್‌ಪ್ರೈಸಸ್, ಬೀದರಿನ ಎಂ.ಕೆ. ಟ್ರೇಡಿಂಗ್ ಕಂಪನಿ, ಹುಮನಾಬಾದಿನ ಜೈ ಭವಾನಿ ಟ್ರೇಡರ್ಸ್ ಹಾಗೂ ಮಹಾರಾಷ್ಟ್ರದ ಶ್ರೀ ಗಜಾನನ ಆಗ್ರೋ ಏಜೆನ್ಸಿಸ್ ಸೇರಿದಂತೆ ಇನ್ನಿತರೆ ಏಜೆನ್ಸಿಗಳಿಂದ ಸುಮಾರು 22,629 ಕ್ವಿಂಟಾಲ್ ಅಕ್ಕಿ ಖರೀದಿ ಮಾಡಲಾಗಿದೆ ಎಂದು ತಿಳಿಸಿ,  ಖರೀದಿಗೆ ಸಂಬಂಧಿಸಿದ ದಾಖಲೆಗಳು ಹಾಗೂ ಕೇಂದ್ರೀಯ ಭಂಡಾರ ಸಂಸ್ಥೆಯೊಂದಿಗೆ ಮಾಡಿಕೊಂಡ ಒಡಂಬಡಿಕೆ ಪ್ರತಿ, ದಾಲ್‌ ಮಿಲ್ ಮಾಲೀಕತ್ವಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಅಕ್ಕಿ ಸರಬರಾಜು ಮಾಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ತನಿಖಾ ಸಮಯದಲ್ಲಿ ಹಾಜರು ಪಡಿಸಿರುವ ಕಾರಣ‌ ಇದು ಅಕ್ರಮ ಅಕ್ಕಿ ಅಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ.

ಆದರೆ ಮಣಿಕಂಠ ರಾಠೋಡ ಎಂಬುವವರು ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ಅಕ್ರಮವಾಗಿ ಅಕ್ಕಿ ದಾಸ್ತಾನು ಬಗ್ಗೆ ಮಾಹಿತಿ ನೀಡಿದ್ದಾಗ್ಯೂ ಆಹಾರ ಇಲಾಖೆ ಯಾವುದೇ ಕ್ರಮಕೈಗೊಂಡಿರುವುದಿಲ್ಲ ಹಾಗೂ ಅಕ್ಕಿ ಬಿಡುವಂತೆ ವೈದ್ಯಕೀಯ ಶಿಕ್ಷಣ ಸಚಿವರ ಆಪ್ತ ಸಹಾಯಕರು ಕರೆ ಮಾಡಿದ್ದಾರೆಂಬ ಹೇಳಿಕೆ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿದ್ದು, ಅದು ಸತ್ಯಕ್ಕೆ ದೂರವಾಗಿದೆ. ಸಚಿವರ ಅಪ್ತ ಸಹಾಯಕರಾಗಲಿ ಅಥವಾ ಇತರೆ ಯಾವುದೇ ಅಧಿಕಾರಿಗಳು ಕರೆ ಮಾಡಿಲ್ಲ ಹಾಗೂ ಇಲಾಖೆಯಿಂದ ಯಾವುದೇ ಲೋಪವಾಗಿಲ್ಲ ಎಂದು ಅವರು ಸ್ಪಷ್ಟನೆ ಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here