ಕಲಬುರಗಿ: ಶಿಕ್ಷಣ, ದಾಸೋಹಗಳ ಮೂಲಕ ಲಕ್ಷಾಂತರ ಜನರಿಗೆ ಕಾಮಧೇನು ಕಲ್ಪವೃಕ್ಷವಾಗಿ ಬೆಳಕಾಗಿದ್ದಾರೆ. ಜತೆಗೆ ಕನ್ನಡಾಭಿಮಾನ ಮತ್ತು ಕಳಕಳಿ ನಮಗೆಲ್ಲ ಪ್ರೀತಿ ಗೌರವಾದರಗಳು. ಧರ್ಮ ಸಹಿಷ್ಣುತೆ ಶ್ರೀಗಳ ಉಸಿರು. ಜಾತಿ ಮತ ಪಂಥಗಳಾಚೆ ಹೊಸ ಭಾಷ್ಯ ಬರೆದಿದ್ದಾರೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಹೇಳಿದರು.
ಶ್ರೀ ಶರಣಬಸವೇಶ್ವರ ಸಂಸ್ಥಾನದ ಎಂಟನೇ ಪೀಠಾಧಿಪತಿಗಳಾದ ಶ್ರೀ ಡಾ. ಶರಣಬಸವಪ್ಪ ಅಪ್ಪಾಜೀ ಯವರ 90ನೇ ಜನ್ಮದಿನದ ಪ್ರಯುಕ್ತ ಇಲ್ಲಿನ ವಿಶ್ವಜ್ಯೋತಿ ಪ್ರತಿಷ್ಠಾನ ಹಾಗೂ ಛಪ್ಪರಬಂದಿ ಪ್ರಭಾಕರ ಫೌಂಡೇಶನ್ ಇವರ ಸಹಯೋಗದೊಂದಿಗೆ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡ ಶರಣ ಚೇತನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಲಬುರಗಿ ಜಿಲ್ಲೆ ಶರಣರ ಹೆಬ್ಬಾಗಿಲು. ಇಲ್ಲಿ ಅನೇಕ ಶರಣರು, ದಾಸರು ಬಾಳಿ ಬದುಕಿದ ನೆಲ. ಶಿಕ್ಷಣ ಮತ್ತು ದಾಸೋಹ ತತ್ವಗಳನ್ನು ಉಸಿರಾಗಿಸಿಕೊಂಡ ಪೂಜ್ಯ ಶ್ರೀ ಡಾ. ಶರಣಬಸವಪ್ಪ ಅಪ್ಪಾಜೀ ಯವರು ಈ ನೆಲದ ನಡೆದಾಡುವ ದೇವರಾಗಿದ್ದಾರೆ. ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡುತ್ತಿದ್ದಾರೆ.
ಪ್ರಾಥಮಿಕ ಹಂತದಿಂದ ವಿಶ್ವವಿದ್ಯಾಲಯದವರೆಗೂ ಶಿಕ್ಷಣ ಕ್ಷೇತ್ರ ವಿಸ್ತರಿಸಿದ ಕೀರ್ತಿ ಅಪ್ಪಾಜೀ ಅವರಿಗೆ ಸಲ್ಲುತ್ತದೆ. ಮಹಾದಾಸೋಹಿ ಶ್ರೀ ಶರಣಬಸವೇಶ್ವರರು ಹಾಕಿ ಕೊಟ್ಟ ಪರಂಪರೆಯನ್ನು ಇಂದಿಗೂ ಪೂಜ್ಯ ಶ್ರೀ ಡಾ. ಶರಣಬಸವಪ್ಪ ಅಪ್ಪಾಜೀ ಯವರು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಸಂಸ್ಥಾನದ ಪೀಠಾಧಿಕಾರಿಗಳಾಗಿ ಇಂದಿಗೂ ಸರ್ವಧರ್ಮ ಸಮನ್ವಯತೆ ಸಾಧಿಸಿಕೊಂಡು ಬಂದಿದ್ದಾರೆ.
ವಿಶ್ವಜ್ಯೋತಿ ಪ್ರತಿಷ್ಠಾನದ ಸಂಸ್ಥಾಪಕರೂ ಆದ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಶರಣ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಡಾ. ಶರಣಬಸವಪ್ಪ ಅಪ್ಪಾಜೀ ಯವರು ಒಂದು ವಿಶ್ವವಿದ್ಯಾಲಯದ ಮಾಡುವ ಕೆಲಸ ಮಾಡಿದ್ದಲ್ಲದೇ, ಸಾವಿರಾರು ವಿದ್ಯಾರ್ಥಿಗಳಾ ಶೈಕ್ಷಣಿಕ ಬದುಕಿನಲ್ಲಿ ಉತ್ತಮ ಬೆಳಕು ಮೂಡಿಸಿದ್ದಾರೆ. ಜತೆಗೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆಗೆ ಒತ್ತು ನೀಡಿ, ಇಂದಿನ ವಿದ್ಯಾರ್ಥಿಗಳು ಸ್ವತಂತ್ರವಾಗಿ ಚಿಂತನೆ ಮಾಡುವಂತೆ ಪ್ರೇರಣೆ ನೀಡುತ್ತಿರುವುದು ಇಂದಿನ ಸಮಾಜಕ್ಕೆ ಮಾದರಿಯಾಗಿದ್ದಾರೆ. ಹಾಗಾಗಿ, ಇಂಥ ಶ್ರೇಷ್ಠ ಪುಣ್ಯ ಪುರುಷರ ಜನ್ಮದಿನಾಚರಣೆಗಳು ನಾಡಿನಾದ್ಯಂತ ಸಾರ್ವತ್ರಿಕವಾಗಿ ಆಚರಿಸುವಂತಾಗಬೇಕೆಂದರು.
ಸರಡಗಿ ಶಕ್ತಿ ಪೀಠದ ಪೂಜ್ಯ ಶ್ರೀ ಡಾ. ಅಪ್ಪಾರಾವ ದೇವಿ ಮುತ್ಯಾ ಅವರು ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದರು. ಸಾಹಿತ್ಯ ಪ್ರೇರಕ ಜಗದೀಶ ಮರಪಳ್ಳಿ, ಹಿರಿಯ ಲೇಖಕಿ ಶಕುಂತಲಾ ಪಾಟೀಲ ಜಾವಳಿ, ಛಪ್ಪರಬಂದಿ ಪ್ರಭಾಕರ ಫೌಂಡೇಶನ್ ಅಧ್ಯಕ್ಷ ಶರಣರಾಜ ಛಪ್ಪರಬಂದಿ, ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಪ್ರಮುಖರಾದ ನೀಲಕಂಠ ಜಮಾದಾರ, ವಿನೋದಕುಮಾರ ಜೇನವೇರಿ, ಬಾಬುರಾವ ಪಾಟೀಲ, ಎಂ ಎನ್ ಸುಗಂಧಿ, ಮಲ್ಲಿನಾಥ ದೇಶಮುಖ, ಮಾಲಾ ಕಣ್ಣಿ, ಗಣೇಶ ಚಿನ್ನಾಕಾರ, ರೇವಣಸಿದ್ದಪ್ಪ ಜೀವಣಗಿ, ರೇವಣಸಿದ್ದಪ್ಪ ಬೋಗಶೆಟ್ಟಿ, ನವಾಬ ಖಾನ್, ಸೈಯದ್ ನಜಿರುದ್ದೀನ್ ಮುತ್ತವಲಿ, ಸುರೇಶ ದೇಶಪಾಂಡೆ, ಸುರೇಶ ಲೇಂಗಟಿ, ಚಂದ್ರಕಾಂತ ಸೂರನ್, ಕೆ.ಎಸ್. ವಾಲಿ, ಶಿವಾನಂದ ಮಠಪತಿ, ಪ್ರಭವ ಪಟ್ಟಣಕರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಶರಣ ಸೇವೆಯಲ್ಲಿ ತೊಡಗಿಸಿಕೊಂಡಿರುವ ಬಾಬುರಾವ ಚವ್ಹಾಣ, ಚಂದ್ರಕಾಂತ ಕಾಳಗಿ, ಶರಣಬಸಪ್ಪ ಮಾಲಿಪಾಟೀಲ, ಹಣಮಂತರಾವ ಪಾಟೀಲ ಹಾವನೂರ, ಜಗದೀಶ ಪಾಟೀಲ ಉಪಳಾಂವ, ಧರ್ಮರಾಜ ಚೌಕಿ, ಇಂದುಮತಿ ಹೋಳಿ, ಮಂಜುನಾಥ ಹವಾಲ್ದಾರ್, ಶೀಲಾ ಕಲಬುರಗಿ, ಮಹಾನಂದಾ ನಂದಿಕೂರ, ಸಾಹೇಬಗೌಡ ಜಾಪೂರ ಅವರನ್ನು ಶರಣ ಚೇತನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.