ಒತ್ತುವರಿ ಜಾಗಗಳ ವಶಪಡಿಸಲು ಸನ್ನಧರಾಗಿ: ಪ್ರಾದೇಶಿಕ ಆಯುಕ್ತ ಸುಬೋಧ ಯಾದವ

0
212

ಕಲಬುರಗಿ: ಕಲಬುರಗಿ ಮಹಾನಗರದ ಹೃದಯ ಭಾಗದಲ್ಲಿರುವ ಸಾರ್ವಜನಿಕ ಉದ್ಯಾನವನ (ಗುಲ್ಶನ್ ಭಾಗ್) ಪ್ರದೇಶದಲ್ಲಿ ವಿವಿಧ ೧೬ ಸಂಸ್ಥೆಗಳು ಅಕ್ರಮವಾಗಿ ಸರ್ವೇ ನಂ-೨ರಲ್ಲಿ ಒತ್ತುವರಿ ಮಾಡಿಕೊಂಡಿರುವ ೪೬-೧೯ ಎಕರೆ ಪ್ರದೇಶವನ್ನು ಸರ್ಕಾರದ ವಶಕ್ಕೆ ಪಡೆಯಲು ಸನ್ನಧರಾಗುವಂತೆ ಪ್ರಾದೇಶಿಕ ಆಯುಕ್ತ ಸುಬೋಧ ಯಾದವ ಅವರು ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ ಅವರಿಗೆ ಖಡಕ್ ಸೂಚನೆ ನೀಡಿದರು.

ಮಂಗಳವಾರ ಇಲ್ಲಿನ ಪ್ರಾದೇಶಿಕ ಆಯುಕ್ತರ ಸಭಾಂಗಣದಲ್ಲಿ ಗುಲಶನ್ ಭಾಗ್ ಮತ್ತು ಬಡೇಪೂರ್ ಪ್ರದೇಶದಲ್ಲಿ ಅಕ್ರಮ ಒತ್ತುವರಿ ತೆರವು ಕುರಿತಂತೆ ಪಾಲಿಕೆ ಹಾಗೂ ಜಮೀನು ಒತ್ತುವರಿ ಮಾಡಿಕೊಂಡಿರುವ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಅವರು ಇದರಲ್ಲಿ ಕೆಲವು ಸರ್ಕಾರಿ ಸಂಸ್ಥೆಗಳ ಸಹ ಇದ್ದು, ಅವು ನಿಯಮಾನುಸಾರ ಲೀಸ್ ಅಥವಾ ಸರ್ಕಾರದ ಸೂಕ್ತ ಆದೇಶದೊಂದಿಗೆ ಜಮೀನು ಪಡೆದಿದಲ್ಲಿ ಕೂಡಲೆ ಪಾಲಿಕೆಗೆ ಅಗತ್ಯ ದಾಖಲಾತಿಗಳನ್ನು ಸಲ್ಲಿಸಬೇಕು ಎಂದು ತಿಳಿಸಿದರು.

Contact Your\'s Advertisement; 9902492681

ಗುಲಶನ್ ಭಾಗ್ ಪ್ರದೇಶದಲ್ಲಿರುವ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ೧೬ ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳ ಮಾಲೀಕರಿಗೆ ತೆರವುಗೊಳಿಸುವಂತೆ ಪಾಲಿಕೆ ನೀಡಿರುವ ನೊಟೀಸ್‌ಗಳಿಗೆ ಕೆಲವರು ಇದೂವರೆಗೆ ಉತ್ತರ ನೀಡದಿರುವುದಕ್ಕೆ ಅತೃಪ್ತಿ ವ್ಯಕ್ತಪಡಿಸಿ, ಉತ್ತರ ನೀಡದ ಒತ್ತುವರಿದಾರರ ಮೇಲೆ ಇದೂವರೆಗೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪಾಲಿಕೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಇಂತಹ ಕಾರ್ಯನಿರ್ವಹಣೆ ಶೈಲಿ ಒಳ್ಳೆದಲ್ಲ. ಪಾಲಿಕೆಯಲ್ಲಿ ಬೇಜವಾಬ್ದಾರಿತನದಿಂದ ಕಾರ್ಯನಿರ್ವಹಿಸುವ ಇಂತಹ ಅಧಿಕಾರಿ-ಸಿಬ್ಬಂದಿಗಳ ಮೇಜರ್ ಸರ್ಜರಿ ಕೈಗೊಳ್ಳಿ ಎಂದು ಪಾಲಿಕೆ ಆಯುಕ್ತ ರಾಹುಲ ಪಾಂಡ್ವೆ ಅವರಿಗೆ ಆದೇಶಿಸಿದರು.

ವೀರಶೈವ ಕಲ್ಯಾಣ ಮಂಟಪ, ಜನತಾದಳ ಕಚೇರಿ, ಧೋಭಿ ಘಾಟ್, ಯಲ್ಲಮ್ಮ ದೇವಸ್ಥಾನ, ಐಡಿಯಲ್ ಫೈನ್ ಆರ್ಟ್ ಸಂಸ್ಥೆ, ಗುಲಬರ್ಗಾ ಕ್ಲಬ್, ಹೊಟೇಲ್ ಬಹಮನಿ, ರೋಟರಿ ಕ್ಲಬ್, ಬಾಲ ಭವನ, ಡಾ.ಎಸ್.ಎಂ.ಪಂಡಿತ್ ರಂಗಮಂದಿರ ಕಟ್ಟಡಗಳಿಗೆ ಸಂಬಂಧಿಸಿದಂತೆ ಮಾಲೀಕತ್ವದ ಹಕ್ಕುಗಳಿದ್ದಲ್ಲಿ ಕೂಡಲೆ ಪಾಲಿಕೆ ಕಚೇರಿಗೆ ಮಾಹಿತಿ ಸಲ್ಲಿಸಬೇಕು ಎಂದರು.

ಬುಧವಾರದೊಳಗೆ ವರದಿ ಕೊಡಲು ಅಧಿಕಾರಿಗಳಿಗೆ ತಾಕೀತು: ಬಡೇಪೂರ ಗ್ರಾಮದ ಸರ್ವೇ ನಂಬರ್ ೧೦, ೧೩, ೧೪, ೧೫, ೧೬, ೧೭ ಮತ್ತು ೪೦ರಲ್ಲಿನ ಜಮೀನು ಉತ್ತುವರಿ ಕುರಿತಂತೆ ವರದಿ ಸಲ್ಲಿಸುವಂತೆ ಹಲವಾರು ಬಾರಿ ಪತ್ರ ಬರೆದರು ಅದಕ್ಕೆ ಉತ್ತರ ನೀಡದಿರುವುದಕ್ಕೆ ವಕ್ಫ್ ಮಂಡಳಿ ಅಧಿಕಾರಿಗಳ ಮೇಲೆ ಸಿಡಿಮಿಡಿಗೊಂಡ ಸುಬೋಧ ಯಾದವ ಅವರು ಬುಧವಾರ ಸಾಯಂಕಾಲದೊಳಗೆ ಈ ಎಲ್ಲಾ ಒತ್ತುವರಿ ಜಮೀನುಗಳ ಸಮಗ್ರ ಮಾಹಿತಿ ಸಲ್ಲಿಸುವಂತೆ ತಾಕೀತು ಮಾಡಿದರು. ಭೂ ದಾಖಲೆಗಳ ಉಪನಿರ್ದೇಶಕರು ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಜಮೀನು ದಾಖಲಾತಿಗಳನ್ನು ಅಪಡೇಟ್ ಮಾಡಲು ಕ್ರಮ ವಹಿಸಬೇಕು. ಅಲ್ಲದೇ ಇದುವರೆಗೂ ನೀಡಿದ ನೊಟೀಸ್‌ಗೆ ಉತ್ತರ ನೀಡದವರ ವಿರುದ್ಧ ಪಾಲಿಕೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಶರತ್.ಬಿ, ಮಹಾನಗರ ಪಾಲಿಕೆಯ ಆಯುಕ್ತ ರಾಹುಲ್ ತುಕಾರಾಂ ಪಾಂಡ್ವೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ವನತಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಚಪ್ಪಾ, ಪಾಲಿಕೆಯ ವಲಯ ಆಯುಕ್ತರು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಕಟ್ಟಡಗಳ ಮಾಲೀಕರು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here