ಗುಲಬರ್ಗಾ ವಿ.ವಿಯಲ್ಲಿ: ಫೆ.5 ರಿಂದ 7ವರೆಗೆ ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನ

0
74

ಕಲಬುರಗಿ: ಅಖಿಲ ಭಾರತ ೮೫ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ೨೦೨೦ರ ಫೆಬ್ರವರಿ ೫, ೬, ಮತ್ತು ೭ ರಂದು ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಧಾನ ಕ್ರೀಡಾಂಗಣದಲ್ಲಿ ಏರ್ಪಡಿಸಲು ತೀರ್ಮಾನಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ ಅವರು ಘೋಷಿಸಿದರು.

ಅವರು ಮಂಗಳವಾರ ಕಲಬುರಗಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಉಪಮುಖ್ಯಮಂತ್ರಿಗಳು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅವರೊಂದಿಗೆ ಚರ್ಚಿಸಿದಾಗ ವಿದ್ಯಾರ್ಥಿಗಳಿಗೆ, ಜನಸಾಮಾನ್ಯರಿಗೆ ತೊಂದರೆಯಾಗದಂತೆ ಹಾಗೂ ವಿಶ್ವವಿದ್ಯಾಲಯದ ಮಕ್ಕಳ ಪರೀಕ್ಷೆಗಳಿಗೆ ತೊಂದರೆಯಾಗದಂತೆ ಪರಿಶೀಲಿಸಿ ಸ್ಥಳ ಹಾಗೂ ದಿನಾಂಕವನ್ನು ನಿಗದಿಪಡಿಸಲು ತಿಳಿಸಿದ್ದು, ಅದರಂತೆ ೨೦೨೦ರ ಫೆಬ್ರವರಿ ಮಾಹೆಯ ಮೊದಲನೇ ವಾರದಲ್ಲಿ ಈ ಸಮ್ಮೇಳನವನ್ನು ಏರ್ಪಡಿಸಲಾಗುವುದು ಎಂದು ವಿವರಿಸಿದರು.

Contact Your\'s Advertisement; 9902492681

ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಧಾನ ಕ್ರೀಡಾಂಗಣದಲ್ಲಿ ಪ್ರಧಾನ ವೇದಿಕೆ ನಿರ್ಮಿಸಲಾಗುವುದು. ಇಲ್ಲಿ ೫೦-೬೦ ಸಾವಿರ ಜನರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗುವುದು. ಡಾ. ಬಿ.ಆರ್. ಅಂಬೇಡ್ಕರ್ ಭವನ ಹಾಗೂ ಕಾರ್ಯಸೌಧದ ಮಹತ್ಮಾಗಾಂಧಿ ಸಭಾಂಗಣಗಳಲ್ಲಿ ಗೋಷ್ಠಿಗಳನ್ನು ಏರ್ಪಡಿಸಲಾಗುವುದು. ಜನಸಾಮಾನ್ಯರು ಹಾಗೂ ವಿದ್ಯಾರ್ಥಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಮೂರು ದಿನಗಳ ಕಾಲ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಅಖಿಲ ಭಾರತ ೮೫ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ಅಂದಾಜು ೧೦ ರಿಂದ ೧೨ ಕೋಟಿ ರೂ. ವೆಚ್ಚವಾಗಲಿದ್ದು, ಈ ಎಲ್ಲಾ ಅನುದಾನವು ಸರ್ಕಾರ ಭರಿಸಲಿದೆ ಎಂದರು. ಸಮ್ಮೇಳನ ಅಧ್ಯಕ್ಷರ ಆಯ್ಕೆಯನ್ನು ಮುಂದಿನ ದಿನಗಳಲ್ಲಿ ಕಾರ್ಯಕಾರಿ ಸಮಿತಿ ಸಭೆ ಕರೆದು ಅಧ್ಯಕ್ಷರ ಆಯ್ಕೆಯನ್ನು ಅಂತಿಮಗೊಳಿಸಲಾಗುವುದು ಎಂದರು.  ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಬಿ. ಶರತ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ. ಪಿ. ರಾಜಾ, ಅಪರ ಜಿಲ್ಲಾಧಿಕಾರಿ ಡಾ.ಶಂಕರಪ್ಪ ವಣಿಕ್ಯಾಳ, ಕಲಬುರಗಿ ಪೊಲೀಸ್ ಆಯುಕ್ತಾಲಯದ ಡಿ.ಸಿ.ಪಿ. ರಾದ ಬಿ. ಕಿಶೋರಬಾಬು, ಕೇಂದ್ರ ಕಸಾಪ ನಿಬಂಧನೆ ತಿದ್ದುಪಡಿ ಮತ್ತು ಸುಧಾರಣಾ ಸಮಿತಿಯ ಅಧ್ಯಕ್ಷರಾದ ಎನ್.ಕೆ.ನಾರಾಯಣ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

ಸ್ಥಳ ಪರಿಶೀಲನೆ: ಇದಕ್ಕೂ ಮೊದಲು ಜಿಲ್ಲಾಧಿಕಾರಿ ಬಿ. ಶರತ್ ಮತ್ತಿತರ ಅಧಿಕಾರಿಗಳು ಹಾಗೂ ಕಸಾಪ ಪದಾಧಿಕಾರಿಗಳೊಂದಿಗೆ ತೆರಳಿ ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ ಅವರು ಗುಲಬರ್ಗಾ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಪ್ರಧಾನ ವೇದಿಕೆ ಸ್ಥಳ, ಡಾ. ಅಂಬೇಡ್ಕರ್ ಭವನ ಹಾಗೂ ಕಾರ್ಯಸೌಧದ ಮಹಾತ್ಮಗಾಂಧಿ ಸಭಾಂಗಣಗಳಲ್ಲಿ ಗೋಷ್ಠಿಗಳ ನಡೆಸುವ ಬಗ್ಗೆ ಸ್ಥಳ ಪರಿಶೀಲನೆ ಮಾಡಿದರು. ಈ ಸಂದರ್ಭದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪರಿಮಳಾ ಅಂಬೇಕರ್ ಅವರು ಸ್ಥಳಗಳ ಕುರಿತು ಮಾಹಿತಿ ನೀಡಿದರು. ಮಹಾತ್ಮಗಾಂಧಿ ಸಭಾಂಗಣದಲ್ಲಿ ೪೦೦ ಆಸನದ ವ್ಯವಸ್ಥೆ, ಡಾ. ಬಿ.ಆರ್.ಅಂಬೇಡ್ಕರ ಭವನದಲ್ಲಿ ಒಟ್ಟು ೧೨೦೦ ಆಸನದ ವ್ಯವಸ್ಥೆ ಇದೆ ಎಂದು ತಿಳಿಸಿದರು.

ಸಮ್ಮೇಳನದ ಪ್ರಧಾನ ವೇದಿಕೆಯಾದ ಕ್ರೀಡಾಂಗಣದಲ್ಲಿ ಸ್ಥಳ ಪರಿಶೀಲನೆ ಮಾಡಿದ ಡಾ. ಮನು ಬಳಿಗಾರ ಅವರು ಸಮ್ಮೇಳನ ನಡೆಸಲು ಈ ಸ್ಥಳ ಅತ್ಯಂತ ಸೂಕ್ತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕ್ರೀಡಾಂಗಣದ ಸುತ್ತಮುತ್ತಲೂ ವಿಶಾಲವಾದ ಜಾಗಯಿದ್ದು, ೧೫೦ ಕೌಂಟರ್‌ನಲ್ಲಿ ಉಪಹಾರ ಮತ್ತು ಊಟದ ವ್ಯವಸ್ಥೆ, ೭೫೦ ಪುಸ್ತಕ ಮಳಿಗೆ ಹಾಗೂ ವಿವಿಐಪಿಗಳ ಪಾರ್ಕಿಂಗ್ ಸ್ಥಳ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಬಿ. ಶರತ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ. ಪಿ. ರಾಜಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಶಂಕರಪ್ಪ ವಣಿಕ್ಯಾಳ, ಕಲಬುರಗಿ ಪೊಲೀಸ್ ಆಯುಕ್ತಾಲಯದ ಡಿ.ಸಿ.ಪಿ. ರಾದ ಬಿ. ಕಿಶೋರಬಾಬು, ಕೇಂದ್ರ ಕಸಾಪ ನಿಬಂಧನೆ ತಿದ್ದುಪಡಿ ಮತ್ತು ಸುಧಾರಣಾ ಸಮಿತಿಯ ಅಧ್ಯಕ್ಷರಾದ ಎನ್.ಕೆ.ನಾರಾಯಣ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ, ಗುಲಬರ್ಗಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಎಂ.ಎಸ್. ಪಾಸೋಡಿ, ಹಣಕಾಸು ಅಧಿಕಾರಿ ಪ್ರೊ. ಬಿ. ವಿಜಯ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನೀಯರ್ ಅಮೀನ ಮುಖ್ತಾರ, ಶಿಷ್ಠಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳೀಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here