ಆಕ್ಷೇಪಾರ್ಹ ದೃಶ್ಯ ಪ್ರಸಾರವಾದರೆ, ಹೆಚ್ಚು ಶುಲ್ಕ ಪಡೆದರೆ ದೂರು ದಾಖಲಿಸಿ: ಜಿಲ್ಲಾಧಿಕಾರಿ ಶರತ್. ಬಿ

0
84

ಕಲಬುರಗಿ: ಕೇಬಲ್/ಸೆಟಲೈಟ್ ಮೂಲಕ ಪ್ರಸಾರ ಹೊಂದಿರುವ ಟೆಲಿವಿಷನ್ ನ್ಯೂಸ್ ಮತ್ತು ಮನರಂಜನೆ ಟಿವಿ ಚಾನೆಲ್‍ಗಳಲ್ಲಿ ಆಕ್ಷೇಪಾರ್ಹ ದೃಶ್ಯಗಳು ಪ್ರಸಾರವಾದಲ್ಲಿ ಹಾಗೂ ಕೇಬಲ್ ಅಪರೇಟರ್‍ಗಳು ಗ್ರಾಹಕರಿಂದ ಹೆಚ್ಚು ಶುಲ್ಕ ಪಡೆದಲ್ಲಿ ದೂರು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಗಳಾದ ಶರತ್. ಬಿ ಅವರು ತಿಳಿಸಿದ್ದಾರೆ.

ಗುರುವಾರ ಕಲಬುರಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಕರೆದಿದ್ದ ಟೆಲಿವಿಷನ್ ನೆಟ್‍ವರ್ಕ್ (ರೆಗ್ಯುಲೇಷನ್) ಅಧಿನಿಯಮ-1995 ಮತ್ತು ಅದರ ಮೇರೆಗೆ ಮಾಡಲಾದ ನಿಯಮಗಳ ಜಾರಿಯ ಮೇಲ್ವಿಚಾರಣೆಗೆ ರಚಿಸಲಾಗಿರುವ ಜಿಲ್ಲಾಮಟ್ಟದ ನಿರ್ವಹಣಾ ಸಮಿತಿಯ ಅಧ್ಯಕ್ಷತೆವಹಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಜಿಲ್ಲಾಮಟ್ಟದ ನಿರ್ವಹಣಾ ಸಮಿತಿಗಳು, ಇನ್ನು ಮುಂದೆ ಜಿಲ್ಲಾಮಟ್ಟದಲ್ಲಿ ದೂರುಗಳನ್ನು ದಾಖಲಿಸಲು ಅನುವಾಗುವಂತೆ ದೂರು ಕೋಶಗಳಾಗಿಯೂ ಕಾರ್ಯನಿರ್ವಹಿಸುವಂತೆ ಆದೇಶಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಗ್ರಾಹಕರಿಂದ ದೂರು ಪಡೆಯಲು ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಲಬುರಗಿ ಪೊಲೀಸ್ ಆಯುಕ್ತಾಲಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ, ಸಹಾಯಕ ಆಯುಕ್ತರ ಕಚೇರಿ, ತಹಶೀಲ್ದಾರ ಕಚೇರಿಗಳಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತಕ್ಷಣವೇ ದೂರು ಪೆಟ್ಟಿಗೆ ಸ್ಥಾಪಿಸಲು ಕ್ರಮ ವಹಿಸಬೇಕು ಎಂದು ಅವರು ಸೂಚಿಸಿದರು.

ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಚೇರಿಯ ಇಮೇಲ್ ವಿಳಾಸ: dcoglb@gmail.com ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಇಮೇಲ್ ವಿಳಾಸ: varthabhavangulbarga2008@gmail.com ಜೊತೆಗೆ ದೂರು ಪೆಟ್ಟಿಗೆ ಅಥವಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಖುದ್ದಾಗಿ ಬಂದು ದೂರು ದಾಖಲಿಸಬಹುದಾಗಿದೆ ಎಂದು ಅವರು ಮಾಹಿತಿ ನೀಡಿದರು.

ಕೇಬಲ್ ಟೆಲಿವಿಷನ್ ನೆಟ್‍ವರ್ಕ್ (ರೆಗ್ಯುಲೇಷನ್) ಅಧಿನಿಯಮ-1995ರ ವ್ಯಾಪ್ತಿಗೊಳಪಡುವ ಕಾರ್ಯಕ್ರಮ ಸಂಕೇತ ಹಾಗೂ ಜಾಹೀರಾತು ಸಂಕೇತದ ಉಲ್ಲಂಘನಾ ಪ್ರಕರಣಗಳು, ಅಕ್ಷೇಪಾರ್ಹ ಅಂಶಗಳು, ಕೇಬಲ್ ಟಿ.ವಿ.ನಲ್ಲಿ ಪ್ರಸಾರವಾಗುವ ಕಾರ್ಯಕ್ರಮ ವೀಕ್ಷಿಸಲು ಮತ್ತು ಕೇಳಲು ಸಂಕೇತಾಕ್ಷರಗಳು ಗುಣಮಟ್ಟದಿಂದ ಕೂಡಿರದಿದ್ದಲ್ಲಿ ದೂರು ಸಲ್ಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಸುದ್ದಿ ವರದಿಗೆ ನಿರ್ಬಂಧ: ಕೇಬಲ್ ಅಪರೇಟರ್‍ಗಳು ಯಾವುದೇ ಕಾರಣಕ್ಕೂ ಸುದ್ದಿ ವಾಹಿನಿ ರೀತಿಯಲ್ಲಿ ಕೇಬಲ್ ಹೆಸರಿನ ಲೋಗೋ ಸೃಜಿಸಿ ಸಾರ್ವಜನಿಕ ವರದಿ ಮಾಡುವುದು, ಡಿಬೇಟ್ ಆಯೋಜಿಸಲು ಕಾಯ್ದೆಯಲ್ಲಿ ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಇದಲ್ಲದೆ ಕೇಬಲ್ ಅಪರೇಟರ್‍ಗಳು ಹಾಗೂ ಖಾಸಗಿ ಸುದ್ದಿ ವಾಹಿನಿಗಳು ವ್ಯಕ್ತಿ ಸ್ವಾತಂತ್ರ್ಯ, ಜಾತಿ-ಧರ್ಮ ಜನಾಂಗಕ್ಕೆ ಧಕ್ಕೆಯಾಗುವ ರೀತಿಯಲಿ,್ಲ ಸಂವಿಧಾನ ಹಾಗೂ ದೇಶಕ್ಕೆ ಭದ್ರತೆ ವಿರುದ್ಧವಾಗಿ, ಸಾರ್ವಜನಿಕ ಶಾಂತಿಗೆ ಭಂಗವನ್ನುಂಟು ಮಾಡುವ, ಚಾರಿತ್ರ್ಯ ವಧೆ, ಸಾಮಾಜಿಕ ಸಾಮರಸ್ಯೆಗೆ ಧಕ್ಕೆ, ನಿರ್ದಿಷ್ಠ ಸಮುದಾಯಕ್ಕೆ ವ್ಯಾಪಕ ಅತೃಪ್ತಿಯನ್ನುಂಟು ಮಾಡುವ, ಅಕ್ಷೇಪಾರ್ಹ ಅಂಶಗಳನ್ನು ಪ್ರಸಾರ ಮಾಡುವಂತಿಲ್ಲ. ಕಾರ್ಯಕ್ರಮ ಮತ್ತು ಜಾಹೀರಾತು ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಾಕೀತು ಮಾಡಿದರು.

ಹೆಚ್ಚು ಶುಲ್ಕ ಕೇಳಿದರೆ ದೂರು: ಜಿಲ್ಲೆಯ ಕೇಬಲ್ ಆಪರೇಟರ್‍ಗಳು ಟ್ರಾಯ್ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಕೇಬಲ್ ಶುಲ್ಕ ವಿಧಿಸಿದಲ್ಲಿ ಗ್ರಾಹಕರು ದೂರು ಸಲ್ಲಿಸಬಹುದು. ದೂರು ಪೆಟ್ಟಿಗೆಯಲ್ಲಿ ದೂರು ದಾಖಲಿಸಬಹುದು ಅಥವಾ ಖುದ್ದಾಗಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಸಲ್ಲಿಸಬಹುದು ಎಂದು ಅವರು ಹೇಳಿದರು.

ಅಂಚೆ ಇಲಾಖೆಯಿಂದ ಜಿಲ್ಲೆಯ ಕೇಬಲ್ ಅಪರೇಟರ್‍ಗಳ ಪಟ್ಟಿಯನ್ನು ಪಡೆಯಬೇಕು. ನಂತರ ಗ್ರಾಹಕರಿಗೆ ಪ್ಲ್ಯಾನ್‍ಗನುಗುಣವಾಗಿ ಆಪರೇಟರ್‍ಗಳು ವಿಧಿಸುತ್ತಿರುವ ಶುಲ್ಕದ ಮಾಹಿತಿ ಸಂಗ್ರಹಿಸಬೇಕು ಎಂದು ಅವರು ಸೂಚಿಸಿದರು.

ಪ್ರತಿ 2 ತಿಂಗಳಿಗೊಮ್ಮೆ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆ ನಡೆಸಿ ಆ ಅವಧಿಯಲ್ಲಿ ಸ್ವೀಕರಿಸಿದ ದೂರುಗಳನ್ನು ಸಮಿತಿಯು ಪರಾಮರ್ಶಿಸಿ ಸೂಕ್ತ ಕ್ರಮ ಕೈಗೊಳ್ಳುವುದು ಹಾಗೂ ಹಿಂದಿನ ಸಭೆಗಳಲ್ಲಿ ತೆಗೆದುಕೊಂಡ ನಿರ್ಧಾರದಂತೆ ಕ್ರಮವಹಿಸಿ ಅನುಪಾಲನಾ ವರದಿಯನ್ನು ಸಂಬಂಧಪಟ್ಟ ಇಲಾಖೆಗಳು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರಿಗೆ ಸಲ್ಲಿಸಬೇಕು ಎಂದು ಅವರು ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕರು ಹಾಗೂ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಜಿ.ಬಿ.ಸಿದ್ದೇಶ್ವರಪ್ಪ ಅವರು ಸಭೆಗೆ ಆಗಮಿಸಿದ ಸರ್ವರನ್ನು ಸ್ವಾಗತಿಸಿ, ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳನ್ನು ಮಂಡಿಸಿದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪ್ರಸನ್ನ ದೇಸಾಯಿ, ಗುಲಬರ್ಗಾ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಚಂದ್ರಕಾಂತ ಯಾತನೂರ, ಕಲಬುರಗಿ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಖಂಡೇರಾವ, ಕಮಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯರಾದ ಡಾ.ಶಾಂತಾ ಅಸ್ಟಿಗೆ, ಅವ್ವಾ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಶಿವಾನಂದ ಅಣಜಗಿ, ಜಿಮ್ಸ್, ಮನ:ಶಾಸ್ತ್ರಜ್ಞ ಡಾ.ರೇಣುಕಾ ಬಗಾಲೆ ಹಾಗೂ ವಿಶ್ವ ಭಾರತಿ ಸೇವಾ ಸಂಸ್ಥೆಯ ಅಧ್ಯಕ್ಷೆ ಡಾ.ಶಾರದಾ ಯಾಕಾಪೂರ ಅವರು ಉಪಸ್ಥಿತರಿದ್ದು, ತಮ್ಮ ಸಲಹೆ-ಅಭಿಪ್ರಾಯಗಳನ್ನು ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here