ಚಿತ್ತಾಪೂರ: ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕ ಸಂಘದ ವತಿಯಿಂದ ತಾಲೂಕಿನ ಸಮಾಜ ಕಲ್ಯಾಣ ವಸತಿ ನಿಲಯ ಹೊರಗುತ್ತಿಗೆ ಕಾರ್ಮಿಕರ ಬಾಕಿ ವೇತನ ಪಾವತಿಸಬೇಕೆಂದು ಆಗ್ರಹಿಸಿ ಇಂದು ನಗರದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕಛೇರಿ ಮುಂದೆ ಧರಣಿ ನಡೆಲಾಯಿತು.
ಪ್ರತಿಭಟನೆಯಲ್ಲಿ ಎ.ಐ.ಯು.ಟಿ.ಯು.ಸಿ ಜಿಲ್ಲಾ ಅಧ್ಯಕ್ಷರಾದ ಕಾಂ. ವಿ.ಜಿ.ದೇಸಾಯಿ ಮಾತನಾಡಿ, ಸಮಾಜ ಕಲ್ಯಾಣದ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್ ಪೂರ್ವ ವಸತಿನಿಲಯದ ಹೊರಗುತ್ತಿಗೆ ಕಾರ್ಮಿಕರಿಗೆ ಏಂಟು ತಿಂಗಳುಗಳಿಂದ ವೇತನ ಪಾವತಿಯಾಗಿಲ್ಲ. ಈ ವರ್ಷದ ಜನೆವರಿ ಹಾಗೂ ಫೆಬ್ರವರಿ ತಿಂಗಳ ವೇತನ ಮಾತ್ರ ಪಡೆದಿರುವ ಕಾರ್ಮಿಕರು ಏಂಟು ತಿಂಗಳ ವೇತನವಿಲ್ಲದೆ ಬಹಳ ಹಣಕಾಸಿನ ತೊಂದರೆಯನ್ನು ಅನುಭವಿಸುತ್ತಿದ್ದು, ಈ ಬಾಕಿ ವೇತನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಸಮರ್ಪಕವಾಗಿ ಕಾರ್ಮಿಕರ ಭವಿಷ್ಯ ನಿಧಿ ( ಇ.ಪಿ.ಎಫ್ ), ಎಲ್ಲಾ ನೌಕರರಿಗೆ ಇ.ಎಸ್.ಐ ಕಾರ್ಡ್, ಸೇವೆಯಲ್ಲಿರುವ ನೌಕರಿಗೆ ಹೊರಗುತ್ತಿಗೆ ನೇಮಕಾತಿ ಸಂಸ್ಥೆಯಿಂದ ನೇಮಕಾತಿ ಆದೇಶ ಪತ್ರ ಹಾಗೂ ಗುರುತಿನ ಚೀಟಿ ನೀಡಿ, ಗುತ್ತಿಗೆದಾರರಿಗೆ ಪ್ರತಿ ತಿಂಗಳು ೨ನೇ ತಾರಿಖಿನೊಳಗಾಗಿ ಹಾಜರಾತಿ ವಿವರಗಳನ್ನು ನೀಡಿ ಪ್ರತಿ ತಿಂಗಳು ಭವಿಷ್ಯ ನಿಧಿ ಪಾವತಿಸಿ ಎಂದು ಸಂಘದ ಜಿಲ್ಲಾ ಉಪಾಧ್ಯಾಕ್ಷರಾದ ರಾಘವೇಂದ್ರ ಎಂ.ಜಿ ಅವರು ಆಗ್ರಹಿಸಿದರು.
ಧರಣಿ ಸ್ಥಳಕ್ಕೆ ಸಮಾಜ ಕಲ್ಯಾಣದ ಜಿಲ್ಲಾ ನಿರ್ದೇಶಕರಾದ ಸತೀಶ ರವರು ಆಗಮಿಸಿ ಮನವಿ ಪತ್ರವನ್ನು ಸ್ವೀಕರಿಸಿ, ಹಣಕಾಸು ಇಲಾಖೆಯಿಂದ ಹಣಕಾಸಿನ ತೊಂದರೆ ಇದೆ. ಆದರೂ ಎರಡು ತಿಂಗಳ ವೇತನವನ್ನು ಕೂಡಲೇ ಮಾಡಿಸುವುದಾಗಿ ಆಶ್ವಾಸನೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಧರಣಿಯಲ್ಲಿ ಸಂಘದ ಚಿತ್ತಾಪೂರ ತಾಲೂಕಾ ಅಧ್ಯಕ್ಷರಾದ ಶರಣು ಹೇರೂರು ಕಾರ್ಯದರ್ಶಿಗಳಾದ ಸಂತೋಷ ಸೇರಿದಂತೆ ಸದಾ, ಇರಗಪ್ಪ, ಮಾರುತಿ, ಶರಣಮ್ಮ, ವಿಜಯಲಕ್ಷ್ಮಿ, ಗಂಗುಬಾಯಿ, ಸೋನಾಬಾಯಿ, ಭಾಗವಹಿಸಿದ್ದರು.